ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಿಂದ ಚುನಾವಣೆಯ ಮೇಲೆ ನೇರ ಪರಿಣಾಮ: ಚಂಪಾ

Update: 2018-02-06 18:02 GMT

ದಾವಣಗೆರೆ,ಫೆ.06: ಮುಂಬರುವ ಚುನಾವಣೆಯ ಮೇಲೆ ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯವು ನೇರ ಪರಿಣಾಮ ಬೀರಲಿದೆ ಎಂದು ಸಾಹಿತಿ ಚಂದ್ರಶೇಖರ ಪಾಟೀಲ್ (ಚಂಪಾ) ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ನಾನೂ ಕೂಡಾ ಲಿಂಗಾಯತ ಚಳವಳಿಯ ಒಂದು ಭಾಗವಾಗಿದ್ದೇನೆ. ಹಾಗಾಗಿ, `ಲಿಂಗಾಯತ ಧರ್ಮ’ ರಾಜಕೀಯ ಪ್ರಭಾವ ಬೀರಬೇಕಾಗಿದೆ ಎಂದರು.

ವೀರಶೈವ ಧರ್ಮದ ವಿಷಯದಲ್ಲಿ ಪಂಚಾಪೀಠಧೀಶರಲ್ಲಿ ಅನೇಕ ಗೊಂದಲಗಳು ಇವೆ. ಅವರು ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟರೂ ಕೂಡಾ, ಹಿಂದು ಧರ್ಮದ ಒಂದು ಭಾಗವೆಂದು ಹೇಳುತ್ತಿದ್ದಾರೆ. ಹಿಂದು ಧರ್ಮದ ಭಾಗವಾದ ಮೇಲೆ ಪ್ರತ್ಯೇಕ ಧರ್ಮದ ಅಗತ್ಯವೇನಿದೆ ಎಂದ ಅವರು,  ಲಿಂಗಾಯತ ಧರ್ಮಕ್ಕೆ ತನ್ನದೆ ಆದ ಇತಿಹಾಸ ಇದೆ. ಲಿಂಗಾಯತ ಧರ್ಮದಲ್ಲಿ ಅನೇಕ ಪಂಗಡಗಳು ಇವೆ. ಇದು ಒಂದು ಸಮುದಾಯವಾಗಿದೆ. ಲಿಂಗಾಯತ ಧರ್ಮದ ಕುರಿತು ಅನೇಕ ದಾಖಲೆಗಳು ಇವೆ. ಲಿಂಗಾಯತ ಧರ್ಮಿಯರು ಕೇವಲ ಕರ್ನಾಟಕದಲ್ಲಿ ಮಾತ್ರ ಇಲ್ಲ. ಬೇರೆ ರಾಜ್ಯದಲ್ಲೂ ಇದ್ದಾರೆ. ಸಿಕ್ಕ, ಬೌದ್ಧ, ಜೈನ್ ಧರ್ಮದಂತೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ದೊರೆಯಬೇಕು. ಇದಕ್ಕಾಗಿ ಸಿದ್ಧಗಂಗಾ ಹಾಗೂ ಸುತ್ತೂರಿನ ಶ್ರೀಗಳು ಬೆಂಬಲ ವ್ಯಕ್ತಪಡಿಸಬೇಕಾಗಿದೆ ಎಂದು ಹೇಳಿದರು.

ಯಾವುದೇ ಒಬ್ಬ ವ್ಯಕ್ತಿಯಾಗಲಿ, ಸಮುದಾಯವಾಗಲಿ ಮುಂದೆ ಬರಬೇಕು ಎಂದರೆ ಸಮುದಾಯದ ಬೆಂಬಲದಿಂದ ಮಾತ್ರ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಲಿಂಗಾಯತ ಸಮುದಾಯದ ಬೆಂಬಲ ದೊರಕಿದ್ದರಿಂದ ಅವರು ತಮ್ಮ ವ್ಯಕ್ತಿತ್ವ ರೂಪಿಸಿಕೊಂಡು, ರಾಜಕೀಯ ಶಕ್ತಿ ಪಡೆದು ಬಿಜೆಪಿಯ ಮೂಲಕ ಅಧಿಕಾರಕ್ಕೆ ಬಂದರು ಎಂದು ಅವರು ಹೇಳಿದರು. 

ರಾಜ್ಯದ ಸಮಸ್ಯೆಗಳ ನಿವಾರಣೆಗೆ ಒತ್ತು ನೀಡುವಂತ ಅಪ್ಪಟ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕಿದೆ. ರಾಜ್ಯದ ನೆಲ, ಜಲ, ಭಾಷೆಯ ಜೊತೆಗೆ ಸಮಗ್ರ ಅಭಿವೃದ್ಧಿಗೆ ಅಪ್ಪಟ ಪ್ರಾದೇಶಿಕ ಪಕ್ಷದ ಅಗತ್ಯವಿದ್ದು, ರಾಜ್ಯದಲ್ಲಿ ಜೆಡಿಎಸ್ ಪ್ರಾದೇಶಿಕ ಪಕ್ಷ ಎಂದು ಗುರುತಿಸಿಕೊಂಡಿದೆಯಾದರೂ ಅದೊಂದು ರಾಷ್ಟ್ರೀಯ ಪ್ರಾದೇಶಿಕ ಪಕ್ಷದಂತಿದೆ. ಅಪ್ಪ ದೇವೇಗೌಡ ಆ ಪಕ್ಷದ ರಾಷ್ಟ್ರೀಯ ಮುಖಂಡರಾದರೆ, ಮಗ ಕುಮಾರಸ್ವಾಮಿ ರಾಜ್ಯದ ಮುಖಂಡರಾಗಿದ್ದಾರೆ. ಆದರೆ, ನಮಗೆ ಬೇಕಿರುವುದು ಡಿ.ಎಂ.ಕೆ, ಕೇಜ್ರಿವಾಲಾರಂತಹ ಪ್ರಾದೇಶಿಕ ಪಕ್ಷಗಳು ಎಂದರು.

ರಾಜ್ಯದಲ್ಲಿ ಪ್ರಮುಖವಾದ, ಬಲಾಢ್ಯವಾದ ಪ್ರಾದೇಶಿಕ ಪಕ್ಷಗಳು ಇಲ್ಲದೆ ಇದ್ದರೆ, ರಾಷ್ಟ್ರೀಯ ಪಕ್ಷಗಳು ತಮ್ಮ ಚುನಾವಣೆಯ ಪ್ರಣಾಳಿಕೆಯಲ್ಲಿ ಪ್ರಾದೇಶಿಕ ಅಭಿವೃದ್ಧಿಗೆ ಯಾವ ರೀತಿಯಾಗಿ ಒತ್ತು ನೀಡಿವೆ ಎಂಬುದರ ಬಗ್ಗೆ ಅರಿತುಕೊಂಡು ಬೆಂಬಲ ನೀಡಬೇಕು ಎಂದು ಹೇಳಿದರು.

ನಾಡಿನ ಜಲ ಸಮಸ್ಯೆಯನ್ನು ಮುಂದೆ ಮಾಡಿಕೊಂಡು, ಮಹದಾಯಿ ಹೋರಾಟದ ಹಿನ್ನಲೆಯಾಗಿ `ಜನ ಸಾಮಾನ್ಯರ ಪಕ್ಷ’ (ಜೆಎಸ್‍ಪಿ)ವನ್ನು ಅಸ್ಥಿತ್ವಕ್ಕೆ ತರಲಾಗಿದೆ. ಈ ಪಕ್ಷದ ಮೂಲಕ ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ತಡೆಯುವುದು ಆಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಸವಲಿಂಗಪ್ಪ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News