ಮತವನ್ನು ಮಾರಿಕೊಂಡಾಗ ಮೌಲ್ಯ ಕಳೆದುಕೊಳ್ಳುತ್ತದೆ: ಪ್ರತಾಪ್‍ಸಿಂಹ

Update: 2018-02-06 18:06 GMT

ಮಂಡ್ಯ, ಫೆ.6: ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ನೀಡುವ ಹಣ ಪಡೆಯದೆ ಪ್ರಾಮಾಣಿಕವಾಗಿ ನಿಮ್ಮ ಹಕ್ಕು ಚಲಾಯಿಸಬೇಕು ಎಂದು ಸಂಸದ ಪ್ರತಾಪ್‍ಸಿಂಹ ಸಲಹೆ ನೀಡಿದ್ದಾರೆ.

ನಗರದ ರೈತಸಭಾಂಗಣದಲ್ಲಿ ಕರ್ನಾಟಕ ಸಂಘದ ವತಿಯಿಂದ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ಡಾ.ಹಾಮಾನಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಹಣಕ್ಕೆ ಮತವನ್ನು ಮಾರಿಕೊಂಡಾಗ ಅದು ಮೌಲ್ಯ ಕಳೆದುಕೊಳ್ಳುತ್ತದೆ. ಮುಂದಿನ ದಿನಗಳಲ್ಲಿ ರಾಜಕಾರಣಿಗಳ ಬಳಿ ನಿಮ್ಮ ಸಮಸ್ಯೆ ಹೇಳಿಕೊಳ್ಳಲಾಗದಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ಎಚ್ಚರಿಸಿದರು.

ದುಡ್ಡಿಗೆ ಎಷ್ಟು ಶಕ್ತಿ ಇದೆಯೋ ಪ್ರಾಮಾಣಿಕತೆಗೆ ಅದಕ್ಕಿಂತ ದೊಡ್ಡ ಶಕ್ತಿ ಇದೆ. ಹಣ ಗಳಿಸುವುದೇ ರಾಜಕಾರಣಿಗಳ ಗುರಿಯಾಗಬಾರದು. ಎಷ್ಟೋ ಮಂದಿ ರಾಜಕಾರಣಿಗಳು ಕೋಟಿಗಟ್ಟಲೆ ದುಡ್ಡನ್ನು ಲೂಟಿ ಹೊಡೆದು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅವರೆಲ್ಲರೂ ಪ್ರಾಮಾಣಿಕತೆ ಬಗ್ಗೆ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದೂರದೃಷ್ಟಿಯುಳ್ಳ ರಾಜಕಾರಣಿಗಳ ಕೊರತೆ ಬಹಳವಾಗಿ ಕಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಎಸ್‍ಎಂ.ಕೃಷ್ಣ ಅವರನ್ನು ಬಹಳವಾಗಿ ಗೌರವಿಸುತ್ತೇನೆ. ಅವರೊಬ್ಬ ದೂರದೃಷ್ಟಿಯುಳ್ಳ ರಾಜಕಾರಣಿ. ಅವರ ಬಳಿಕ ಭವಿಷ್ಯದ ತಲೆಮಾರಿನ ಬಗ್ಗೆ ಆಲೋಚನೆಗಳೊಂದಿಗೆ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ರಾಜಕಾರಣಿಗಳು ಬರಲೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಂತಃಕರಣದ ರಾಜಕಾರಣಿ. ಬಡವರ್ಗದ ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಕ್ರಾಂತಿಕಾರಿ ವ್ಯಕ್ತಿ. ಯಡಿಯೂರಪ್ಪ ಅವರೂ ಸಹ ಬಡವರ ಪರವಾದ ಕಾಳಜಿಯನ್ನು ಹೊಂದಿದ ರಾಜಕಾರಣಿಯಾಗಿದ್ದಾರೆ. ಇವರ ಬಗ್ಗೆ ತೀಕ್ಷ್ಣ ಪದಗಳನ್ನು ಬಳಸಿ ಬರೆದಿದ್ದರೂ ಅವರು ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆಯೂ ಮುಕ್ತವಾಗಿ ಬರೆದಿದ್ದೇನೆ ಎಂದು ಅವರು ಹೇಳಿಕೊಂಡರು.

ಮಲೆನಾಡಿನಲ್ಲಿ ಹುಟ್ಟಿದ ಕುವೆಂಪು ಮೈಸೂರಿಗೆ ಕಳಶಪ್ರಾಯರಾದರು. ಅದೇ ರೀತಿ ಹಾ.ಮಾ.ನಾಯಕರು ಮಲೆನಾಡಿನಲ್ಲಿ ಹುಟ್ಟಿ ಮೈಸೂರಿಗೆ ಬಂದು ಅಂಕಣ ಬರಹಕ್ಕೆ ಶ್ರೇಷ್ಠತೆಯನ್ನು ದೊರಕಿಸಿಕೊಟ್ಟರು ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ, ಅಂಕಣಕಾರರ ಬಗ್ಗೆ ತಪ್ಪು ಕಲ್ಪನೆ ಇದೆ. ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಅವರಿಗೂ ಸಮಾಜ ಕಟ್ಟುವ ತಾಕತ್ತಿದೆ. ಸಾಹಿತಿಗಳು, ಕವಿಗಳು ಪುರುಸೊತ್ತು ಇದ್ದಾಗ ಮಾತ್ರ ಬರೆಯುತ್ತಾರೆ. ಅಂಕಣಕಾರರು ಪುರುಸೊತ್ತು ಮಾಡಿಕೊಂಡು ಬರೆಯಬೇಕು ಎಂದರು.

ಪಿ.ಕುಸುಮಾ ಅವರಿಗೂ ಡಾ.ಹಾಮಾನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಶಾಸಕ ಎಚ್.ಹೊನ್ನಪ್ಪ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‍ಗೌಡ, ಎಂ.ಕೆ.ಹರೀಶ್‍ಕುಮಾರ್, ಬೋರೇಗೌಡ, ಪಿ.ಲೋಕೇಶ್, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News