ಮಂಗಳಮುಖಿಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು: ಮಾಜಿ ಸಚಿವ ಎಂ.ಎಸ್.ಆತ್ಮಾನಂದ

Update: 2018-02-06 18:09 GMT

ಮಂಡ್ಯ, ಫೆ.6: ಸಮಾಜ ಎಂದರೆ ಕೇವಲ ಪುರುಷ ಮತ್ತು ಮಹಿಳೆಯಲ್ಲ. ಮಕ್ಕಳು, ವಿಶೇಷಚೇತನರು, ಲೈಂಗಿಕ ಅಲ್ಪಸಂಖ್ಯಾತರು, ಮಂಗಳಮುಖಿಯರೂ ಇದ್ದಾರೆ. ಹಾಗಾಗಿ ಅವರೆಲ್ಲರೂ ಮುಖ್ಯವಾಹಿನಿಗೆ ಬರಬೇಕು ಎಂದು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅಭಿಪ್ರಾಯಪಟ್ಟರು.

ನಗರದ ಕಲಾಮಂದಿರದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಮಂಗಳಮುಖಿಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಕೇಂದ್ರವಾದ ಮಂಗಳಧಾಮ ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಂಗಳಮುಖಿಯರ ಬದುಕು ಕಲ್ಯಾಣವಾಗಬೇಕು, ಸ್ವತಂತ್ರ ಬದುಕು ಅವರದಾಗಬೇಕು ಎಂದರು.

ಈಸಬೇಕು ಇದ್ದು ಜಯಿಸಬೇಕು ಎನ್ನುವ ವಾಕ್ಯವನ್ನು ಮಂಗಳಮುಖಿಯರು ಜೀವನದಲ್ಲಿ ಬಲವಾಗಿ ಅಳವಡಿಸಿಕೊಳ್ಳಬೇಕು. ಆ ಮೂಲಕ ನೋವು, ದುಃಖ, ಜನರ ಕುಚೋದ್ಯದ ಮಾತುಗಳನ್ನು ಮೆಟ್ಟಿ ನಿಲ್ಲಬೇಕು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು  ಅವರು ಕರೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಡಾ.ಎಸ್.ದಿವಾಕರ್, ವಕೀಲ ಎಂ.ಗುರುಪ್ರಸಾದ್ ಮಾತನಾಡಿದರು. ಮಂಗಳಮುಖಿಯರಾದ ಅಪ್ಸರಾ, ನಿಖಿತಾ ಅವರನ್ನು ಸನ್ಮಾನಿಸಲಾಯಿತು. 

ಎನ್‍ವೈಕೆ ಲೆಕ್ಕಾಧಿಕಾರಿ ಬಸವರಾಜು, ನಗರಸಭೆ ಸದಸ್ಯ ಸೋಮಶೇಖರ್ ಕೆರಗೋಡು, ಎಆರ್‍ಟಿ ಕೇಂದ್ರದ ವೈದ್ಯಾಕಾರಿ ಡಾ.ಲೀಲಾವತಿ, ಮಂಗಳಧಾಮ ಸಂಘಟನೆಯ ಅಧ್ಯಕ್ಷೆ ಸೌಜನ್ಯ, ಉಪಾಧ್ಯಕ್ಷೆ ರೂಪಾ, ಕಾರ್ಯದರ್ಶಿ ರೇಣುಕಾ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News