88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ

Update: 2018-02-07 13:37 GMT

ಶ್ರವಣಬೆಳಗೊಳ, ಫೆ.7: ಜೈನ ಧರ್ಮವು ತ್ಯಾಗ, ಕರುಣೆ, ಮಾನವೀಯತೆ, ಮಾನವ ಕಲ್ಯಾಣದ ಸಂದೇಶ ಸಾರಿರುವ ಧರ್ಮ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನುಡಿದರು.

ಶ್ರವಣಬೆಳಗೊಳದ ಪಂಚಕಲ್ಯಾಣ ನಗರದಲ್ಲಿನ ಚಾವುಂಡರಾಯ ಸಭಾ ಮಂಟಪದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ‘88ನೇ ಮಹಾ ಮಸ್ತಕಾಭಿಷೇಕ ಮಹೋತ್ಸವ-2018’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಪ್ರಾರಂಭದಲ್ಲಿ ‘‘ಸಹೋದರ ಸಹೋದರಿಯರೇ, ಎಲ್ಲರಿಗೂ ನನ್ನ ನಮಸ್ಕಾರಗಳು’’ ಎಂದು ಕನ್ನಡದಲ್ಲಿ ಮಾತು ಆರಂಭಿಸಿ ಸಭಿಕರ ಚಪ್ಪಾಳೆ ಗಿಟ್ಟಿಸಿದ ರಾಷ್ಟ್ರಪತಿ, ಶಾಂತಿ, ಕರುಣೆ, ಮಾನವೀಯತೆ, ಸಹೋದರತ್ವ, ಅಹಿಂಸೆಯ ಪ್ರತೀಕವಾಗಿರುವ ಶ್ರೀ ಬಾಹುಬಲಿ ಭವ್ಯ ಪ್ರತಿಮೆ ನೋಡಿ ನಾನು ಕೃತಾರ್ಥನಾದೆ. ಬಾಹುಬಲಿ ಸ್ವಾಮಿ ನೀಡಿರುವ ಸಂದೇಶ ಮಾನವ ಕಲ್ಯಾಣದ ಸಂದೇಶವಾಗಿದೆ ಎಂದರು.

ಶಾಂತಿ, ಅಹಿಂಸೆ, ಕರುಣೆ, ತ್ಯಾಗದಿಂದ ದೇಶದ ಕಲ್ಯಾಣ, ವಿಶ್ವದ ಕಲ್ಯಾಣ, ಹಾಗೂ ಮಾನವ ಕಲ್ಯಾಣವಾಗುತ್ತದೆ ಎಂದ ರಾಷ್ಟ್ರಪತಿ, ವಿಶ್ವ ಶಾಂತಿಗಾಗಿ ನಡೆಯುತ್ತಿರುವ ಈ ಐತಿಹಾಸಿಕ ಮಹಾಮಸ್ತಕಾಭಿಷೇಕ ಸಮಾಜದಲ್ಲಿ ಶಾಂತಿ ಪಸರಿಸಲಿ ಎಂದು ಹಾರೈಸಿದರು.

ಮಹಾರಾಜ ಚಂದ್ರಗುಪ್ತ ಮೌರ್ಯ ತನ್ನ ಸಂಸ್ಥಾನವನ್ನು ತ್ಯಾಗಮಾಡಿ ಚಂದ್ರಗಿರಿಯಲ್ಲಿ ತ್ಯಾಗಿಯಾಗಿ ದೀಕ್ಷೆ ಸ್ವೀಕರಿಸಿ ಅಲ್ಲಿಯೇ ಸಲ್ಲೇಖನ ವೃತ ಸ್ವೀಕರಿಸಿದ್ದನ್ನು ಸ್ಮರಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಜೈನ ಧರ್ಮದಲ್ಲಿ ಪ್ರಕೃತಿಯ ಸಂರಕ್ಷಣೆಯ ವಿಶೇಷವಿದೆ. ಪ್ರತಿಯೊಬ್ಬರು ಜೈನ ಮುನಿಗಳು, ಮಾತೆಯರ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಶಾಂತಿ ಕಾಪಾಡುವಂತೆ ಕರೆ ನೀಡಿದರು.

ಸಮಾಜಕ್ಕಾಗಿ ತ್ಯಾಗ ಮಾಡುವ ಗುಣ ಬೆಳೆಸಿಕೊಳ್ಳಿ: ರಾಜ್ಯಪಾಲ ವಜುಬಾಯಿ ವಾಲಾ ಕರೆ
ಜೈನ ಸಮಾಜ ಸೇರಿದಂತೆ ಇನ್ನಿತರ ಸಮಾಜದಲ್ಲಿನ ಉಳ್ಳವರು ತಮ್ಮಲ್ಲಿರುವ ಸಂಪತ್ತಿನಲ್ಲಿ ಸಮಾಜಕ್ಕಾಗಿ ಒಂದು ಪ್ರಮಾಣದ ತ್ಯಾಗ ಮಾಡುವ ಗುಣ ಬೆಳೆಸಿಕೊಳ್ಳುವ ಮೂಲಕ ಗವಾನ್ ಬಾಹುಬಲಿ ಸಂದೇಶವನ್ನು ಮೈಗೂಡಿಸಿಕೊಳ್ಳುವಂತೆ ವಜುಬಾಯಿ ರುಡಬಾಯಿ ವಾಲಾ ಕರೆ ನೀಡಿದರು.

ಸತ್ಯ, ಅಹಿಂಸೆ, ಬ್ರಹ್ಮಚಾರ್ಯ, ಕರುಣೆಯ ಚೈತನ್ಯವೇ ಗೊಮ್ಮಟೇಶ್ವರನ ಪ್ರತಿಮೆಯಾಗಿದ್ದು ಈ ವೌಲ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕು ರೂಪಿಸಿಕೊಳ್ಳುವಂತೆ ಅವರು ತಿಳಿಸಿದರು.

ಜೀವನದಲ್ಲಿ ತ್ಯಾಗವೇ ದೊಡ್ಡದು ಎಂದ ಅವರು ದೇಶದಲ್ಲಿ ಸಂಸ್ಕಾರ ಉಳಿಯಬೇಕಾದರೆ ಆಧ್ಯಾತ್ಮದ ಶಕ್ತಿ ಬೇಕು. ಅದು ತ್ಯಾಗ, ಶಾಂತಿ, ಅಹಿಂಸೆಯಿಂದ ಮಾತ್ರ ಸಾಧ್ಯವೆಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News