×
Ad

ಬಾಹುಬಲಿಯ ಶಾಂತಿ, ಅಹಿಂಸೆಯ ಚಿಂತನೆಗಳು ಇಂದಿಗೂ ಪ್ರಸ್ತುತ: ಸಿ.ಎಂ ಸಿದ್ದರಾಮಯ್ಯ

Update: 2018-02-07 22:26 IST

ಶ್ರವಣಬೆಳಗೊಳ, ಫೆ.07: ಬಾಹುಬಲಿಯ ಬೋಧನೆಗಳು ಭಾರತದಲ್ಲಿ ಇಂದಿಗೂ ಪ್ರಸ್ತುತವಾಗಿವೆ. ಬರೀ ಮಾತನಾಡುವುದಕ್ಕಿಂತ ನಾವು ಅವರ ದಾರಿಯಲ್ಲಿ ನಡೆಯುವುದನ್ನು ಕಲಿಯಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು 12 ವರ್ಷಕ್ಕೊಮ್ಮೆ ನಡೆಯುವ ಬಾಹುಬಲಿಯ 88ನೇ ಮಹಾಮಸ್ತಕಾಭಿಷೇಕಕ್ಕೆ ಶ್ರವಣಬೆಳಗೊಳದಲ್ಲಿ ಚಾಲನೆ ನೀಡಿ ಮಾತನಾಡಿ, ಈ ಬೃಹತ್ ಕಾರ್ಯಕ್ರಮ ಆಯೋಜಿಸುತ್ತಿರುವ ಜೈನ ಮಠಕ್ಕೆ ಎಲ್ಲ ಬಗೆಯ ನೆರವನ್ನೂ ನೀಡುತ್ತೇನೆ. ನಾವೆಲ್ಲರೂ ಒಂದೇ ಸಮಯದಲ್ಲಿ ಇಲ್ಲಿರುವುದು ದೈವ ಪ್ರೇರಣೆ ಎಂದರು.

ರಾಜ್ಯ ಸರ್ಕಾರ ಈ ಕಾರ್ಯಕ್ರಮ ಬೃಹತ್ ಯಶಸ್ಸು ಕಾಣಲು ಎಲ್ಲ ರೀತಿಯಲ್ಲೂ ಶ್ರಮಿಸುತ್ತಿದೆ. ಈ ಕಾರ್ಯಕ್ರಮದ ಸಿದ್ಧತೆ ಹಲವು ತಿಂಗಳಿಂದ ನಡೆಯುತ್ತಿದೆ. ನಾನು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತಕ್ಕೆ ಎಲ್ಲಾ ವ್ಯವಸ್ಥೆ ಮಾಡಲು ಸೂಚಿಸಿದ್ದೆ, ಅವರ ಪ್ರಯತ್ನಗಳು ಉತ್ತಮ ರೀತಿಯಲ್ಲಿ ಫಲ ನೀಡಿವೆ ಎನ್ನುವುದು ಸಂತೋಷದ ವಿಚಾರ. ಈ ಕಾರ್ಯಕ್ರಮಕ್ಕೆ ಸರ್ಕಾರದ ಕಡೆಯಿಂದ ಯಾವುದೇ ಕೊರತೆಯಾಗುವುದಿಲ್ಲ. ನಾವು ಸಂಪೂರ್ಣ ಸಹಕಾರ ನೀಡಿದ್ದೇವೆ ಎಂದರು.

ಸಮಾಜದಲ್ಲಿ ಅಹಿಂಸೆಯೊಂದಿಗೆ ನಾವು ಸಹಿಷ್ಣುತೆಯನ್ನು ಪಸರಿಸಬೇಕಾಗಿದೆ. ಯಾವುದೇ ಧರ್ಮ ಮತ್ತೊಂದು ಧರ್ಮವನ್ನು ವಿರೋಧಿಸಲು ಹೇಳುವುದಿಲ್ಲ. ನಾವು ಅಹಂ ಕೈ ಬಿಡುವವರೆಗೂ ಶಾಂತಿ ಮತ್ತು ಅಭಿವೃದ್ಧಿ ಸಾಧ್ಯವಿಲ್ಲ. ನಮ್ಮ ಧರ್ಮವನ್ನು ನಾವು ಗೌರವಿಸಬೇಕು. ಹಾಗೆಯೇ ಮತ್ತೊಂದು ಧರ್ಮವನ್ನೂ ಪ್ರೀತಿಸಬೇಕು ಎಂದರು. 

ನಮ್ಮ ಇತಿಹಾಸ ಧಾರ್ಮಿಕ ನಾಯಕರು, ಸಾಮಾಜಿಕ ಚಿಂತಕರು, ಸೂಫಿಗಳು ಮತ್ತಿತರರಿಂದ ಶ್ರೀಮಂತವಾಗಿದೆ. ಅವರೆಲ್ಲರೂ ನಮ್ಮನ್ನು ವಿವಿಧ ಕಾಲಘಟ್ಟಗಳಲ್ಲಿ ಅರಿವು ತುಂಬುವ ಕೆಲಸ ಮಾಡಿದ್ದಾರೆ. ಬಾಹುಬಲಿ ಶಾಂತಿಯ ಸಂಕೇತ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ನಮಗೆ ದಾರಿ ತೋರಿಸಿ ಅರಿವಿನ ಬೆಳಕು ನೀಡುತ್ತಿವೆ. ನಾವು ಅದೇ ದಾರಿಯಲ್ಲಿ ನಡೆಯಬೇಕು. ಹಾಗೆ ನಡೆದಾಗ ಮಾತ್ರ ನಾವು ಬಾಹುಬಲಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಮುನಿಗಳು ತಮ್ಮ ಇಡೀ ಜೀವನವನ್ನು ತ್ಯಾಗ ಮಾಡಿದ್ದಾರೆ. ನಮ್ಮಲ್ಲಿ ದುರಾಸೆ ಇದ್ದಲ್ಲಿ ನಾವು ಮನಃಶಾಂತಿ ಹೊಂದಲು ಸಾಧ್ಯವಿಲ್ಲ. ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿ ಸಾಧ್ಯವಿಲ್ಲ. ಧರ್ಮ, ಜಾತಿ ಮತ್ತು ಸಮುದಾಯಗಳ ನಡುವೆ ಸಂಘರ್ಷಗಳು ನಡೆಯುತ್ತಿವೆ. ಆದರೆ ನಾವೆಲ್ಲರೂ ಮಾನವ ಕುಲ ಎನ್ನುವುದನ್ನು ಆಲೋಚಿಸಬೇಕು. ಯಾವುದೇ ಧರ್ಮವೂ ಮತ್ತೊಂದು ಧರ್ಮವನ್ನು ದ್ವೇಷಿಸಲು ಹೇಳುವುದಿಲ್ಲ. ಈ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಅವರ ಪತ್ನಿ ಸವಿತಾ ಕೋವಿಂದ್, ಕರ್ನಾಟಕ ರಾಜ್ಯಪಾಲ ವಜುಬಾಯ್ ವಾಲಾ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಮಾಜಿ ಪ್ರಧಾನಿ ಶ್ರೀ ಎಚ್.ಡಿ.ದೇವೇಗೌಡ, ಹಲವು ಮುನಿಗಳು ಮತ್ತು ಜೈನ ಸಮುದಾಯದ ಸಾವಿರಾರು ಮಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News