×
Ad

ವೃದ್ದ ದಂಪತಿಯ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ, 50 ಸಾವಿರ ದಂಡ

Update: 2018-02-08 19:06 IST

ತುಮಕೂರು,ಫೆ.08: ಹಣ, ಒಡವೆ ಮೇಲಿನ ಆಸೆಗೆ ವೃದ್ದ ದಂಪತಿಯನ್ನು ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿ, ಪರಾರಿಯಾಗಿದ್ದ ಆರೋಪಿಗೆ ತುಮಕೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡವಿಧಿಸಿ ತೀರ್ಪು ನೀಡಿದೆ.

2015ರ ಜೂನ್ 08 ರಂದು ಕೋರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಧರ ಗ್ರಾಮದ ವಯೋವೃದ್ದ ಗಂಗಾಧರಯ್ಯ ಮತ್ತು ಗಂಗಮ್ಮ ದಂಪತಿಯ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿ, ದಂಪತಿಯ ಮೈಮೇಲಿದ್ದ ಒಡವೆ, ಲಾಕರ್ ನಲ್ಲಿದ್ದ ನಗದು ಮತ್ತು ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.

ಈ ಬಗ್ಗೆ ಮೃತರ ಮಗ ಬಿ.ಜಿ.ವಿರೇಂದ್ರಕುಮಾರ್ ನೀಡಿದ ದೂರಿನ ಮೇಲೆ ತನಿಖೆ ಕೈಗೊಂಡಿದ್ದ ಅಂದಿನ ಗ್ರಾಮಾಂತರ ಸಿಪಿಐ ಪಿ.ರವಿ, ಮೃತರ ಸಂಬಂಧಿಕನಾದ ಹೇಮಂತಕುಮಾರ್ ಎಂಬಾತನನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಕೇಸಿನ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಆರೋಪಿ ಹೇಮಂತ ಕುಮಾರ್ ನಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ತೀರ್ಪು ನಿಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಆರ್.ಕೆ.ಭಟ್ಟ ಮತ್ತು ಬಿ.ಎ.ಇಬ್ರಾಹಿಂ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News