ಕೋಲಾರ: ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನೆ

Update: 2018-02-08 13:52 GMT

ಕೋಲಾರ,ಫೆ.08: ಯಾವುದೇ ಲಾಭಗಳಿಸಲು ಆಸ್ಪತ್ರೆ ಸ್ಥಾಪಿಸುತ್ತಿಲ್ಲ, ಬಡರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಸ್ಥಾಪಿಸಲಾಗುತ್ತಿದೆ ಎಂದು ಟಾಟಾ ಟ್ರಸ್ಟ್ ಸಾರ್ವಜನಿಕ ಸಂಪರ್ಕಾಧಿಕಾರಿ ಲಕ್ಷ್ಮಣ್ ಸೇತುರಾಮ್ ತಿಳಿಸಿದರು.

ಅವರು ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಲ್ಲೂರು ಬಳಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆ ಜಾಗ ವೀಕ್ಷಿಸಿ ಮಾತನಾಡಿ, ಡಿಪಿಆರ್ ವರದಿ ಸರ್ಕಾರಕ್ಕೆ ಸಲ್ಲಿಸಿದ ಕೂಡಲೇ ಜಾಗವನ್ನು ಟ್ರಸ್ಟ್ ಗೆ ಹಸ್ತಾಂತರ ಮಾಡಲಿದ್ದಾರೆ. ಇದು ಪೊಲೈಟ್ ಪ್ರಾಜೆಕ್ಟ್ ಆಗಿದ್ದು, ಇದರ ಮೂಲಕ ಉತ್ತಮ ಆರೋಗ್ಯ ಸೇವೆ ಸಲ್ಲಿಸಲಾಗುವುದು ಎಂದರು.

ನಾಲ್ಕೈದು ವಾರದಲ್ಲಿ ಡಿಪಿಆರ್ ವರದಿ ತಯಾರಾಗುತ್ತದೆ. ನಂತರ ಹತ್ತು ದಿನದಲ್ಲಿ ಜಾಗ ನೀಡುವುದಾಗಿ ಸರ್ಕಾರ ತಿಳಿಸಿದ್ದು, ಚಿಕಿತ್ಸಾ ಕೇಂದ್ರ ನಿರ್ಮಾಣ ಮಾಡಲು ಅಗುವ ವೆಚ್ಚದ ಬಗ್ಗೆ ಯೋಜನೆಯಿಲ್ಲ. ಈ ಭಾಗದ ಜನರ ಸೇವೆ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಕ್ಯಾನ್ಸರ್ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿ ನಿರ್ಮೂಲನೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಕೇಂದ್ರ, ಹೊರ ಹಾಗೂ ಒಳ ರೋಗಿಗಳ ವಿಭಾಗ ಒಳಗೊಂಡತೆ ಸಾಮಾನ್ಯ ವಾರ್ಡ್, ವಿಷೇಷ ವಾರ್ಡ್, ರೇಡಿಯೊ ಥೆರಪಿ, ಕಿಮಿಯೋ ಥೆರಪಿ, ರಕ್ತ ಪರೀಕ್ಷೆ ಪ್ರಯೋಗಾಲಯ, ಶಸ್ತ್ರ ಚಿಕಿತ್ಸಾ ವಿಭಾಗಗಳನ್ನು ಒಳಗೊಂಡ ಸುಸಜ್ಜಿತ ಆಸ್ಪತ್ರೆಯನ್ನು ಪ್ರಾಥಮಿಕ ಹಂತದಲ್ಲಿ ನಿರ್ಮಾಸಲಾಗುವುದು ಎಂದು ವಿವರಿಸಿದರು.

ಯಾವ ತೊಂದರೆಗಳಿಂದ ಕ್ಯಾನ್ಸರ್ ಹರಡುತ್ತದೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ, ಪ್ಯಾರಾ ಮೆಡಿಕಲ್, ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಇದರಿಂದ ಲಾಭಗಳಿಸುವ ಉದ್ದೇಶವಿಲ್ಲ. ಇಲ್ಲಿಗೆ ಹೊರಗಿನಿಂದ ರೋಗಿಗಳು ಬಂದರೂ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‍ಕುಮಾರ್ ಮಾತನಾಡಿ, ಚುನಾವಣಾ ಪ್ರಚಾರ ಗಿಟ್ಟಿಸಿಕೊಳ್ಳಲು ಈ ಪ್ರಯತ್ನ ನಡೆಸುತ್ತಿಲ್ಲ. ಸತತವಾಗಿ 7-8 ತಿಂಗಳುಗಳಿಂದ ಕ್ಯಾನ್ಸರ್ ಕೇಂದ್ರ ಸ್ಥಾಪನೆಗೆ ಜಾಗ ಹುಡುಕಲಾಗುತ್ತಿದ್ದು, ಇದೀಗ ಕಂದಾಯ ಜಾಗವೇ ಸಿಕ್ಕಿದೆ ಎಂದು  ತಿಳಿಸಿದರು.

ತಾಲೂಕಿನ ಕಲ್ಲೂರು ಗ್ರಾಮದ ಬಳಿ ಸರ್ವೇ ನಂಬರ್ 31ರಲ್ಲಿ 38.20 ಗುಂಟೆ ಕಂದಾಯ ಜಮೀನು ಸಿಕ್ಕಿದ್ದು, ಈಗಾಗಲೇ ಸರ್ವೆ ಮುಗಿಸಿದ ದಾಖಲೆಗಳನ್ನು ಸಹ ಸಿದ್ದಪಡಿಸಿಕೊಳ್ಳಲಾಗಿದೆ. ರಾಜ್ಯ ಕಂದಾಯ ಇಲಾಖೆಯಿಂದ ಅನುಮತಿ ಪಡೆದು ಹತ್ತು ದಿನದಲ್ಲಿ ಒಪ್ಪಂದ ಮಾಡಿಕೊಂಡು ಟ್ರಸ್ಟ್ ಗೆ ನೀಡಲಾಗುವುದು ಎಂದು ಹೇಳಿದರು.

ಈ ಚಿಕಿತ್ಸಾ ಕೇಂದ್ರವನ್ನು ಕೋಲಾರದಲ್ಲಿ ಸ್ಥಾಪನೆ ಮಾಡಲು ತಯಾರಿ ನಡೆಸಿಕೊಳ್ಳಲಾಗುತ್ತಿತ್ತು, ಆದರೆ ಕಾಣದ ಕೈಗಳ ಸಹಕಾರದಿಂದ ನಮ್ಮ ಕ್ಷೇತ್ರದಲ್ಲಿ ಸ್ಥಾಪನೆ ಮಾಡಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ. ಬಡ ರೋಗಿಗಳು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದರು. ಅವರು ಅಲ್ಲಿ ಪಡುತ್ತಿದ್ದ ಗೋಳು ನೋಡಲಾಗದೆ ಕಾನೂನು ಜಾರಿಗೆ ತರಲು ಪ್ರಯತ್ನಿಸಿದೆವು. ಜನರು ನನಗೆ ಸಹಕಾರ ನೀಡಿದರು. ಕಾಯ್ದೆಯಡಿ ನಿಗದಿಪಡಿಸಿದ ದರಪಟ್ಟಿಯನ್ನು ಖಾಸಗಿ ಆಸ್ಪತ್ರೆಯವರು ಪಾಲಿಸದಿದ್ದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದರು.

ಇದೇ ತಿಂಗಳು 15ರಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕಾಮಗಾರಿ ಆರಂಭವಾಗಲಿದ್ದು, ಇದಕ್ಕೆ ಸರ್ಕಾರದಿಂದ ಶೇ.75ರಷ್ಟು ಭಾಗ ಅನುದಾನ ನೀಡಲಾಗುತ್ತದೆ. ಈ ಎರಡು ಆಸ್ಪತ್ರೆಗಳ ನಿರ್ವಹಣೆಗೆ ಅಗತ್ಯವಾಗ ಸೌಕರ್ಯ ಕಲ್ಪಿಸಲು ಸರ್ಕಾರ ಸಿದ್ದವಾಗಿದೆ, ರಾಜ್ಯಾದ್ಯಂತ ಯುನಿವರ್ಸಲ್ ಯೋಜನೆಯೂ ಫೆ.26ರಂದು ಉದ್ಘಾಟನೆಯಾಗಲಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಉಪವಿಭಾಗಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ವಿಜಯ್ ಕುಮಾರ್, ತಹಶೀಲ್ದಾರ್ ರವಿ, ಟಾಟಾ ಟ್ರಸ್ಟ್ ನ ಸಲಹೆಗಾರ ವಿಜಯಕುಮಾರ್, ವಾಸ್ತು ಶಿಲ್ಪಿ ರವಿಶಂಕರ್, ಕೋಚಿಮುಲ್ ಅಧ್ಯಕ್ಷ ಬ್ಯಾಟಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಶೋಕ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News