ಮದ್ದೂರು: ವಸತಿಶಾಲೆ ವಿದ್ಯಾರ್ಥಿಗಳಿಗೆ ಕಿರುಕುಳ; ಆರೋಪ

Update: 2018-02-08 17:05 GMT

ಮದ್ದೂರು, ಫೆ.8: ಪ್ರಾಂಶುಪಾಲರು ಮತ್ತು ಅಡುಗೆ ಸಿಬ್ಬಂದಿ ತಮಗೆ ಕಿರುಕುಳ ನೀಡುತ್ತಿದ್ದಾರೆಂದು ತಾಲೂಕಿನ ಕಾಳಮುದ್ದನದೊಡ್ಡಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿಶಾಲೆ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಸರಕಾರ ನೀಡುವ ಸೌಲಭ್ಯವನ್ನು ಸರಿಯಾಗಿ ನೀಡುತ್ತಿಲ್ಲ. ಪ್ರಶ್ನಿಸಿದರೆ ಪ್ರಾಂಶುಪಾಲರು ಮತ್ತು ಅಡುಗೆ ಸಿಬ್ಬಂದಿ ಥಳಿಸುತ್ತಾರೆ ಎಂಬುದಾಗಿ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸದರಿ ವಸತಿ ಶಾಲೆ ಈ ವರ್ಷದಿಂದ ಆರಂಭವಾಗಿದ್ದು, 54 ವಿದ್ಯಾರ್ಥಿಗಳಿದ್ದಾರೆ. ಓರ್ವ ಪ್ರಾಂಶುಪಾಲ ಉಮೇಶ್, ನಾಲ್ವರು ಅತಿಥಿ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಪ್ರಾಂಶುಪಾಲ ಉಮೇಶ್ ಮಕ್ಕಳಿಗೆ ಸರಕಾರದಿಂದ ಬರುವ ಸೌಲಭ್ಯಗಳನ್ನು ಕೊಡುತ್ತಿಲ್ಲ. ಈ ಬಗ್ಗೆ ಕೇಳಿದರೆ ಮಕ್ಕಳಿಗೆ ಥಳಿಸುತ್ತಾರೆ. ಮೊಟ್ಟೆ ಪಪ್ಸ್ ತಿಂದ ಎಂಬ ಕಾರಣಕ್ಕೆ ನಿಡಘಟ್ಟ ಗ್ರಾಮದ ವಿಕಾಸ್ ಎಂಬ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದು, ಬೆರಳಿಗೆ ತೀವ್ರ ಪೆಟ್ಟಾಗಿದೆ. ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಸಾಮೂಹಿಕ ಶಿಕ್ಷೆ ಕೊಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಾರೆ.

ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಸರಕಾರ ನೀಡಿದ್ದ ಕಿಟ್‍ಗಳನ್ನು ಕೊಟ್ಟಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಭಿಕ್ಷೆ ಬೇಡಲು ಹೋಗು ಎಂದು ಗದರಿಸುತ್ತಾರೆ. ಊಟವನ್ನು ಸರಿಯಾಗಿ ಕೊಡುವುದಿಲ್ಲ. ಮೊಟ್ಟೆ, ಬಾಳೆಹಣ್ಣು ನೀಡುವುದಿಲ್ಲ. ಮಾಂಸದ ಅಡುಗೆಯನ್ನು ಕಡಿಮೆ ಮಕ್ಕಳಿದ್ದಾಗ ಮಾತ್ರ ಮಾಡುತ್ತಾರೆ ಎಂದೂ ಅವರು ಆಪಾದಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಾಲತಿ ಅವರನ್ನು ಪ್ರಶ್ನಿಸಿದಾಗ, ಈ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News