ಶಿವಮೊಗ್ಗ: ಅಪಘಾತಕ್ಕೀಡಾದ ಆಟೋ ಚಾಲಕನ ಮನೆಗೆ ಆಗಮಿಸಿ ನೆರವು ನೀಡಿದ ಮೂಡಿಗೆರೆ ಶಾಸಕ

Update: 2018-02-08 17:20 GMT

ಶಿವಮೊಗ್ಗ, ಫೆ. 8: ತಾವು ಪ್ರಯಾಣಿಸುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ಆಟೋ ಚಾಲಕನಿಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಶಾಸಕ ಬಿ.ಬಿ.ನಿಂಗಯ್ಯರವರು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಿ, ನಂತರ ಆತನ ಶಿವಮೊಗ್ಗದ ಮನೆಗೆ ಆಗಮಿಸಿ ಧನ ಸಹಾಯದ ನೆರವಿನ ಹಸ್ತ ಚಾಚಿ ಮಾನವೀಯತೆ ಮೆರೆದ ಘಟನೆ ನಡೆದಿದೆ. 

ಗುರುವಾರ ಶಿವಮೊಗ್ಗ ನಗರದ ಗುರುಪುರ ಬಡಾವಣೆಯಲ್ಲಿರುವ ಆಟೋ ಚಾಲಕ ಮಂಜುರವರ ಮನೆಗೆ ಆಗಮಿಸಿದ ಶಾಸಕ ಬಿ.ಬಿ.ನಿಂಗಯ್ಯ ಮತ್ತವರ ಪುತ್ರ, ಜಿಲ್ಲಾ ಪಂಚಾಯತ್ ಸದಸ್ಯ ನಿಖಿಲ್‍ರವರು ಧನ ಸಹಾಯದ ನೆರವು ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಜೆಡಿಎಸ್ ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಜಿ.ಡಿ.ಮಂಜುನಾಥ್, ಮುಖಂಡರಾದ ರಾಮಕೃಷ್ಣ ಮೊದಲಾದವರಿದ್ದರು. 

ಘಟನೆ ಹಿನ್ನೆಲೆ: ಗಾಯಾಳು ಮಂಜು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಆಟೋ ಓಡಿಸಿಕೊಂಡಿದ್ದು, ಆತನ ಕುಟುಂಬದ ಸದಸ್ಯರು ಶಿವಮೊಗ್ಗದ ಗುರುಪುರದಲ್ಲಿಯೇ ನೆಲೆಸಿದ್ದಾರೆ. ಇತ್ತೀಚೆಗೆ ಬಾಳೆಹೊನ್ನೂರಿನಲ್ಲಿ ಮಂಜು ಓಡಿಸುತ್ತಿದ್ದ ಆಟೋಗೆ ಬಿ.ಬಿ.ನಿಂಗಯ್ಯ, ಮತ್ತವರ ಪುತ್ರ ನಿಖಿಲ್ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು. 

ಇದರಿಂದ ಗಾಯಗೊಂಡಿದ್ದ ಮಂಜುಗೆ ಶಾಸಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಮಂಜು ಶಿವಮೊಗ್ಗದಲ್ಲಿದ್ದ ತನ್ನ ಮನೆಗೆ ಆಗಮಿಸಿ ವಿಶ್ರಾಂತಿ ಪಡೆಯುತ್ತಿದ್ದ. ನಂತರ ಶಾಸಕ ಬಿ.ಬಿ.ನಿಂಗಯ್ಯರವರು ಪುತ್ರನ ಸಮೇತ ಮಂಜು ಮನೆಗೆ ಆಗಮಿಸಿ ಆತನ ಆರೋಗ್ಯ ವಿಚಾರಿಸಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಧನ ಸಹಾಯದ ನೆರವು ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಹೆಚ್ಚಿನ ಹಣದ ಅಗತ್ಯವಿದ್ದರೆ ಕೇಳುವಂತೆ ಮಂಜುವಿಗೆ ಸೂಚಿಸಿದ್ದಾರೆ. ಜೊತೆಗೆ, ಸಾಧ್ಯವಾದರೆ ಮತ್ತೊಮ್ಮೆ ಮನೆಗೆ ಆಗಮಿಸಿ ಭೇಟಿಯಾಗುವುದಾಗಿ ಹೇಳಿ ಹಿಂದಿರುಗಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಜಿ.ಡಿ.ಮಂಜುನಾಥ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News