ಶಿವಮೊಗ್ಗ: ನಿರ್ಮಾಣ ಹಂತದ ಮನೆ ಬಾಗಿಲು, ಕಿಟಕಿ ಕಳವು ಮಾಡುತ್ತಿದ್ದ ನಾಲ್ವರ ಬಂಧನ
ಶಿವಮೊಗ್ಗ,ಫೆ. 8: ನಿರ್ಮಾಣ ಹಂತದ ಮನೆಗೆ ಅಳವಡಿಕೆ ಮಾಡಿದ್ದ ಮರದ ಬಾಗಿಲು, ಕಿಟಕಿ, ಚೌಕಟ್ಟು ಕಳವು ಮಾಡಿದ ಆರೋಪದ ಮೇರೆಗೆ ಇಲ್ಲಿನ ವಿನೋಬನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಇಬ್ಬರು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಸೋಮಿನಕೊಪ್ಪ ಬಡಾವಣೆಯ ನಿವಾಸಿಗಳಾದ ಮಂಜ ಯಾನೆ ಕೋತಿ ಮಂಜ (25), ಆಂಜನೇಯ ಯಾನೆ ಅಂಜನಿ (25), ಹರೀಶ್ ಯಾನೆ ಪಿಲ್ಲಿ (25) ಹಾಗೂ ಕಿರಣ್ ಯಾನೆ ಲಂಬು (24) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಕಳವು ಮಾಡಿದ್ದ ಬಾಗಿಲು ಚೌಕಟ್ಟು, ಕಿಟಕಿ ಮತ್ತಿತರ ಮರದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ಹಾಲಪ್ಪ ಹಾಗೂ ಲೋಕೇಶ್ ಯಾನೆ ಲೋಕಿ ಎಂಬುವರು ತಲೆಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಬ್ ಇನ್ಸ್‍ಪೆಕ್ಟರ್ ರಾಘವೇಂದ್ರ ಕಾಂಡಿಕೆ ಮತ್ತವರ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೂರು ದಾಖಲು: ಇತ್ತೀಚೆಗೆ ನಗರದ ಗಜಾನನ ಲೇಔಟ್‍ನಲ್ಲಿ ನಿರ್ಮಾಣ ಹಂತದ ಮನೆಯೊಂದರಲ್ಲಿ ಅಳವಡಿಕೆ ಮಾಡಿದ್ದ ಮರದ ಬಾಗಿಲ ಚೌಕಟ್ಟು, ಕಿಟಕಿಗಳನ್ನು ಅಪಹರಿಸಿ ಪರಾರಿಯಾಗಿದ್ದರು. ಈ ಕುರಿತಂತೆ ಮನೆಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಇದರ ಆಧಾರದ ಮೇಲೆ ವಿನೋಬನಗರ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರು.
ಭಾಗಿ ಶಂಕೆ: ಬಂಧಿತ ಆರೋಪಿಗಳು ಪೊಲೀಸರ ತನಿಖೆಯ ವೇಳೆ ಈ ಹಿಂದೆಯೂ ಇದೇ ರೀತಿಯ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಮಾಹಿತಿ ಬಾಯ್ಬಿಟ್ಟಿದ್ದಾರೆ. ಹಗಲು ವೇಳೆ ನಿರ್ಮಾಣ ಹಂತದ ಮನೆಗಳನ್ನು ಗುರುತಿಸಿ ಅಲ್ಲಿ ಬೆಲೆಬಾಳುವ ಮರದ ಚೌಕಟ್ಟು, ಬಾಗಿಲು, ಕಿಟಕಿ ಅಳವಡಿಸಲಾಗಿದೆಯೇ ಎಂಬುವುದನ್ನು ಪರಿಶೀಲನೆ ನಡೆಸುತ್ತಿದ್ದರು.
ಅಳವಡಿಕೆ ಮಾಡಿದ್ದರೆ ರಾತ್ರಿ ವೇಳೆ ತೆರಳಿ ಅವುಗಳನ್ನು ಕಳವು ಮಾಡಿ ತರುತ್ತಿದ್ದರು. ನಂತರ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಪ್ರಸ್ತುತ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯೇ ಈ ಕಳವಿನ ಮುಖ್ಯ ಸೂತ್ರಧಾರಿಯಾಗಿದ್ದಾನೆ. ಈತನ ಬಂಧನದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.