ಕೇಪ್ ಟೌನ್ ನಲ್ಲಿ ಭಾರೀ ಜಲಕ್ಷಾಮ, ನೀರಿಗಾಗಿ ಸಾಲುಗಟ್ಟಿ ನಿಂತ ಜನತೆ

Update: 2018-02-09 06:50 GMT

ಕೇಪ್ ಟೌನ್, ಫೆ.9: ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರದಲ್ಲಿ ಸತತ ಮೂರನೇ ವರ್ಷ ಭಾರೀ ಜಲಕ್ಷಾಮ ಎದುರಾಗಿದೆ. ಅಲ್ಲಿನ ಕೆರೆ ಹಾಗೂ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಭಾರೀ ಕುಸಿತ ಕಂಡಿದೆ.

ಅಲ್ಲಿನ ಜಲ ಇಲಾಖೆ ನೀಡಿದ ಮಾಹಿತಿಯಂತೆ  ವೆಸ್ಟರ್ನ್ ಕೇಪ್ ಪ್ರಾಂತ್ಯದಲ್ಲಿನ ಜಲಾಶಯದಲ್ಲಿ ಈ ವಾರ ನೀರಿನ ಮಟ್ಟ ಶೇ.23.7ಕ್ಕೆ ಕುಸಿದಿದ್ದು, ಕಳೆದ ವಾರ ನೀರಿನ ಮಟ್ಟ ಶೇ. 24.5 ಆಗಿತ್ತು. ಕಳೆದ ವರ್ಷ ಇದೇ ಸಮಯದಲ್ಲಿ ನೀರಿನ ಮಟ್ಟ ಶೇ 36.5ರಷ್ಟಿತ್ತು.

ಕೇಪ್ ಟೌನ್ ನಗರದಲ್ಲಿ ಈಗ 'ಡೇ ಝೀರೋ' ಜಾರಿಗೊಳಿಸುವ ಸಾಧ್ಯತೆಯಿದ್ದು, ಆ ದಿನದಂದು ನಗರದ ಶೇ 75ರಷ್ಟು ಮನೆಗಳಿಗೆ, ಅಂದರೆ ಸುಮಾರು 10 ಲಕ್ಷ ಕುಟುಂಬಗಳಿಗೆ ನೀರು ಪೂರೈಕೆಯಾಗುವುದಿಲ್ಲ. ಈ ದಿನ ಕುಟುಂಬಗಳು ಹಾಗೂ ವಾಣಿಜ್ಯ ಬಳಕೆದಾರರು ನಗರದಾದ್ಯಂತವಿರುವ 200 ನೀರು ಸಂಗ್ರಹ ಸ್ಥಳಗಳಿಂದ ತಲಾ 25 ಲೀಟರ್ ನೀರನ್ನು ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಸುಧಾರಣೆ ಕಾಣುವ ತನಕ ಪಡೆಯಬಹುದು.

ಸದ್ಯ ಜನರಿಗೆ ದಿನವೊಂದಕ್ಕೆ ತಲಾ  50 ಲೀಟರ್ ನೀರು ಉಪಯೋಗಿಸುವಂತೆ ಹೇಳಲಾಗಿದೆ. ಜನರು ಹಗಲು ರಾತ್ರಿಯೆನ್ನದೆ ನಗರದಲ್ಲಿರುವ ನೀರು ಕೇಂದ್ರಗಳಲ್ಲಿ ಹೆಚ್ಚುವರಿ ನೀರಿಗಾಗಿ ಸರತಿ ನಿಲ್ಲುತ್ತಿದಾರೆ.

ನಗರದ ನೀರಿನ ಸಮಸ್ಯೆಯ ಬಗ್ಗೆ ಪ್ರವಾಸಿಗರನ್ನು ಎಚ್ಚರಿಸುವ ಸೂಚನಾ ಫಲಕಗಳೂ ವಿಮಾನ ನಿಲ್ದಾಣಗಳಲ್ಲಿ ಕಾಣಿಸುತ್ತಿವೆ.  ಪ್ರವಾಸಿಗರಿಗೂ ನೀರಿನ ಬಳಕೆಯ ಕುರಿತಾದ ಹಲವು ಮಾರ್ಗಸೂಚಿಗಳಿವೆ. ಭಾರತೀಯ ಕ್ರಿಕೆಟ್ ತಂಡ ಕೂಡ ದಕ್ಷಿಣ ಆಫ್ರಿಕಾ ತಂಡದೆದುರಿನ ಟೆಸ್ಟ್ ಸರಣಿಗಾಗಿ ಕೇಪ್ ಟೌನಿನಲ್ಲಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು. ಎಲ್ಲಾ ವಿಮಾನಗಳೂ ನಿಲ್ದಾಣ ತಲುಪುವ ಮುಂಚಿತವಾಗಿಯೇ  ನೀರಿನ ಸಮಸ್ಯೆಯ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡುತ್ತವೆ. ಹೊಟೇಲುಗಳು ತಮ್ಮ ಅತಿಥಿಗಳಿಗೆ ಆದಷ್ಟು ಕಡಿಮೆ ನೀರನ್ನು ಬಳಸುವಂತೆ ತಿಳಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News