ಮಠ, ದೇವಸ್ಥಾನ ವಶಪಡಿಸಿಕೊಳ್ಳುವ ಯೋಚನೆ ರಾಜ್ಯ ಸರ್ಕಾರಕ್ಕೆ ಇಲ್ಲ: ಸಿದ್ದರಾಮಯ್ಯ

Update: 2018-02-09 15:25 GMT

ಹರಿಹರ,ಫೆ.09: ಮಠ, ದೇವಸ್ಥಾನ ವಶಪಡಿಸಿಕೊಳ್ಳುವ ಯೋಚನೆ ರಾಜ್ಯ ಸರ್ಕಾರಕ್ಕೆ ಇಲ್ಲ. ಇದು ಕೆಲ ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯವಾಗಿ ನಮ್ಮನ್ನು ತೇಜೋವಧೆ ಮಾಡಲು ಮಾಡಿರುವ ಕುತಂತ್ರ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ತಾಲೂಕಿನ ಬೆಳ್ಳೂಡಿ ಗ್ರಾಮದ ಬಳಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ರಜತ ಮಹೋತ್ಸವ ಹಾಗೂ ಐಎಎಸ್, ಕೆಎಎಸ್ ತರಬೇತಿ ಕೇಂದ್ರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

2006ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಧಾರ್ಮಿಕ ದತ್ತಿ ಕಾಯ್ದೆಯನ್ನು ರದ್ದು ಪಡಿಸಿ, ಹೊಸ ಕಾನೂನು ರೂಪಿಸುವಂತೆ ಸೂಚನೆ ನೀಡಿತ್ತು. ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಕೇಳಲು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಧಾರ್ಮಿಕ ದತ್ತಿ ಸಚಿವರಾಗಿದ್ದ ವಿ.ಎಸ್.ಆಚಾರ್ಯರವರೇ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಾಮಾಜೋಯಿಷ್ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದ್ದರು. ಆ ಸಮಿತಿ ಹೊರಡಿಸಿದ್ದ ಪ್ರಕಟಣೆಯನ್ನೇ ಈಗ ನಮ್ಮ ಸರ್ಕಾರ ಹೊರಡಿಸಿದೆಯೇ ಹೊರತು, ಬೇರೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಮಗೆ ಮಠ, ದೇವಸ್ಥಾನ ತೆಗೆದುಕೊಳ್ಳುವ ಉದ್ದೇಶವೇ ಇಲ್ಲ. ಆದರೆ, ನಾನು 5 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸುತ್ತಿರುವುದು ತಡೆದುಕೊಳ್ಳಲಾಗದೇ ಹಾಗೂ ಮತ್ತೆ ನಾನೇ ಅಧಿಕಾರಕ್ಕೆ ಬರುತ್ತೇನೆಂದು ಅನೇಕ ಸಮೀಕ್ಷೆ ಹೇಳಿರುವುದು ತಡೆಯಲಾಗದೇ, ಹೊಟ್ಟೆಯುರಿಗೆ ಹೀಗೆ ಮಾಡುತ್ತಿದ್ದಾರೆ. ನಿಜಲಿಂಗಪ್ಪ, ದೇವರಾಜು ಅರಸ್ ಅವರ ನಂತರ 5 ವರ್ಷ ಸಂಪೂರ್ಣ ಪೂರ್ಣ ಮಾಡುತ್ತಿರುವವನು ನಾನೇ ಎಂದರು. 

ರಾಜ್ಯದ ಜನರ ಆಶೀರ್ವಾದದ ಮೇಲೆ ನಂಬಿಕೆ ಇಟ್ಟುಕೊಂಡವನು ನಾನು. ಈ 5 ವರ್ಷ ನನಗೆ ಯಾರೂ ಬೆರಳು ತೋರಿಸಿಲ್ಲ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಭ್ರಷ್ಟಾಚಾರ ಇಲ್ಲ. ಹಗರಣ ಇಲ್ಲ. ಯಾರು ನನ್ನ ಮೇಲೆ ವಿಶ್ವಾಸವಿಟ್ಟು, ನಂಬಿಕೆ ಇಟ್ಟು ಸಿಎಂ ಮಾಡಿದರೋ ಅವರಿಗೆ ಗೌರವ ತರುವ ಕೆಲಸ ಮಾಡಿದ್ದೇನೆ ಎಂದ ಅವರು, ಕೆಲವರು ನಾನು ಅಹಿಂದ ಪರವೆಂದರು. ಕೆಲವರು ಅಹಿಂದಕ್ಕೆ ಏನು ಮಾಡಿಲ್ಲವೆಂದರು. ಹಾಗಾಗಿ, ನಾನು ಈಗ ಡೊಳ್ಳು ತರಹ ಆಗಿ, ಎರಡೂ ಕಡೆ ಬಡಿಸಿಕೊಳ್ಳುವುದೇ ಆಗಿದೆ. ಆದರೆ, ಜನರ ಆಶೀರ್ವಾದ ಎಲ್ಲಿವರೆಗೆ ಇರುತ್ತದೋ ಅಲ್ಲಿವರೆಗೆ ನನ್ನನ್ನು ಯಾರೂ ಏನು ಮಾಡಲು ಸಾಧ್ಯವಿಲ್ಲ. ಯಾವುದೇ ಅಪಪ್ರಚಾರಕ್ಕೂ ಕಿವಿಗೊಡುವುದಿಲ್ಲ ಎಂದರು.

ತೋಳ, ಕುರಿ ಮರಿ ಕಥೆಯಂತೆ ಪ್ರಧಾನಿ ಮೋದಿ ಮಾತಿನಲ್ಲಿ ಸಬ್ ಕಾ ಸಾಥ್ ಸಬ್ ವಿಕಾಸ್ ಅಂತಾ ಹೇಳ್ತಾರೆ. ಆದರೆ, ಮುಸಲ್ಮಾನರೆ, ಕ್ರೈಸ್ತರೇ ನೀವು ಒಳಗೆ ಬರಬೇಡಿ ಅಂತಾರೆ. ಸಂವಿಧಾನದ ಬಗ್ಗೆ ಅರಿವಿಲ್ಲದಿದ್ದರೆ ಜನ ಪ್ರತಿನಿಧಿಯಾಗಲು ನಾಲಾಯಕ್ಕು ಎಂದ ಅವರು, ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಕೇಂದ್ರದ ಮಂತ್ರಿ ಗ್ರಾಮಪಂಚಾಯತ್ ಸದಸ್ಯನಾಗಲೂ ಲಾಯಕ್ಕಿಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಸರು ಹೇಳದೇ ಮಾತಿನ ಚಾಟಿ ಬೀಸಿದರು.

ನಮ್ಮ ಕೆಲಸ, ಕಾರ್ಯಕ್ರಮವನ್ನು ಹೆಮ್ಮೆಯಿಂದ ಹೇಳುತ್ತೇನೆ. ಯಾರಾದರೂ, ಯಾವುದಾದರೂ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರೆ ಅದು ನಮ್ಮ ಸರ್ಕಾರ ಮಾತ್ರ. ನುಡಿದಂತೆ ನಡೆದಿದ್ದರೆ, ಕೊಟ್ಟ ಮಾತು ಈಡೇರಿಸಿದ್ದರೆ ಅದು ನಮ್ಮ ಸರ್ಕಾರ. ಒಂದು ಸಮೂಹಕ್ಕೆ, ಒಂದು ವರ್ಗಕ್ಕೆ ಸೀಮಿತವಾಗಿದ್ದೇನೆಂಬ ಅಪಪ್ರಚಾರ ನೂರಕ್ಕೆ ನೂರು ಸುಳ್ಳು. ಸಮಾಜದ ಎಲ್ಲಾ ಬಡವರು, ಶೋಷಿತರು, ಅವಕಾಶ ವಂಚಿತ ಜನರಿಗೆ ಅವಕಾಶ ಸಿಗಬೇಕು. ಆ ಎಲ್ಲರಿಗೂ ಸಾಮಾಜಿಕ, ಆರ್ಥಿಕ ಶಕ್ತಿ ಸಿಗಬೇಕೆಂದು ಬಯಸುವವನು ನಾನು ಎಂದು ಅವರು ಹೇಳಿದರು.

ವಸತಿನಿಲಯ ನಿರ್ಮಾಣಕ್ಕೆ ಸಹಕರಿಸುವೆ: ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳ ಜೊತೆಗೆ ಶೈಕ್ಷಣಿಕ ಚಟುವಟಿಕೆಗೆ ಐಎಎಸ್, ಐಪಿಎಸ್, ಕೆಎಎಸ್ ಅಧ್ಯಯನ ತರಬೇತಿ ಕೇಂದ್ರ ಕೇಂದ್ರ ಸ್ಥಾಪನೆಯಾಗಿದ್ದು, ಎಲ್ಲಾ ಜಾತಿ, ಧರ್ಮದವರೂ ನಿರ್ಣಯ ಮಾಡುವ, ತೀರ್ಮಾನ ಕೈಗೊಳ್ಳುವ ಆಯಕಟ್ಟಿನ ಜಾಗದಲ್ಲಿ ಇರಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಗುಣಮಟ್ಟದ ತರಬೇತಿಗೆ ಸ್ಪರ್ಧಾತ್ಮಕ ತರಬೇತಿ ಅತ್ಯಗತ್ಯ. ಅದಕ್ಕಾಹಿ ಅರ್ಹ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ, ತರಬೇತಿ ಕೊಡಿ. ಇಲ್ಲಿ ವಸತಿ ನಿಲಯ ನಿರ್ಮಿಸುವುದಕ್ಕೆ ಸಂಪೂರ್ಣ ಸಹಕಾರ ನೀಡುವೆ ಎಂದರು. 

ನಿರಂಜನಾನಂದಪುರಿ ಶ್ರೀ ಮಾತನಾಡಿ, ಕಳೆದ ದಶಮಾನೋತ್ಸವ ಸಂದರ್ಭ ಕೈಗೊಂಡ ನಿರ್ಣಯದಿಂದ ವಿಧಾನಸೌಧಕ್ಕೆ ಕಂಬಳಿ ಬೀಸಿದ್ದಾಯ್ತು. ಇದೀಗ ನಮ್ಮ ಒಗ್ಗಟ್ಟು ಇಲ್ಲಿಗೆ ನಿಲ್ಲದೇ ದೆಹಲಿಯ ಕೆಂಪು ಕೋಟೆ ಮೇಲೂ ಕಂಬಳಿ ಬೀಸುವಂತಾಗಬೇಕು. ದೇಶದ ಪ್ರಧಾನಿ ಮೋದಿ ಸರಿಸಮಾನಾದ ನಾಯಕನೆಂದರೆ ಅದು ಸಿಎಂ ಸಿದ್ದರಾಮಯ್ಯ ಮಾತ್ರ. ಆದ್ದರಿಂದ ನೀವೆಲ್ಲರೂ ಯೋಚಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದು ಸೂಚ್ಯವಾಗಿ ತಿಳಿಸಿದರು.

ಸಮಾಜ ಕಟ್ಟಲು ಮನಸ್ಸು ಬೇಕು. ಸಮಾಜದಲ್ಲಿ ಒಬ್ಬನೇ ಶಕುನಿ ಇದ್ದರೆ ಸಮಾಜ ಕುರುಕ್ಷೇತ್ರವಾಗುತ್ತೆ. ಅದೇರೀತಿ, ಸಮಾಜ ಸುಭದ್ರಕ್ಕೆ ವೀರಭದ್ರನಂತ ಸಿದ್ದರಾಮಯ್ಯ ಬೇಕು ಎಂದ ಅವರು, ಅಚ್ಚುಕಟ್ಟು ಭಾಗದ ಕೊನೆ ರೈತರಿಗೆ ನೀರು ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಕ್ರಮ ಕೈಗೊಂಡು ಅಕ್ರಮ ಬೋರ್ ವೆಲ್‍ಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಬೇಕು. ಐಎಎಸ್, ಕೆಎಎಸ್ ಕೋಚಿಂಗ್‍ಗೆ ಬರುವ ವಿದ್ಯಾರ್ಥಿಗಳ ವಸತಿನಿಲಯಕ್ಕೆ ಸರ್ಕಾರದಿಂದ ಅನುದಾನ ನೀಡಬೇಕೆಂದು ಮನವಿ ಮಾಡಿದರು.

ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ರಾಜ್ಯದ ಅನೇಕ ಭಾಗಗಳಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನ ಸುತ್ತಮುತ್ತ ಆಸ್ತಿ ನಮ್ಮ ಸಮುದಾಯಕ್ಕೆ ಸೇರಿದೆ. ಆದರೆ, ಅದಕ್ಕೆ ಸಂಬಂಧಿಸಿದ ಯಾವುದೇ ಹಕ್ಕು ನಮಗಿಲ್ಲ. ನಮ್ಮಂತೆ ಅನೇಕ ಸಮುದಾಯಗಳ ದೇವಸ್ಥಾನ ಆಸ್ತಿ ಕೈತಪ್ಪಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಅವರು ಬೀರಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಆಸ್ತಿ ಉಳಿಸಿಕೊಳ್ಳುವ ಕುರಿತ ಕಾನೂನು ತರಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಕೆಲ್ಲೋಡ ಶಾಖಾಮಠದ ಈಶ್ವರಾನಂದಪುರಿ ಶ್ರೀ, ಕೆ,ಆರ್. ನಗರ ಶಾಖಾಮಠದ ಶಿವಾನಂದಪುರಿ ಶ್ರೀ, ತಿಂಥಣಿ ಶಾಖಾಮಠದ ಸಿದ್ದರಾಮನಂದಪುರಿ ಶ್ರೀ ಸಾನ್ನಿಧ್ಯ ವಹಿಸಿದ್ದರು. ಸಭಾಪತಿ ಕೆ.ಬಿ. ಕೋಳಿವಾಡ ಮಾತನಾಡಿದರು. ಮುಜರಾಯಿ ಸಚಿವ ರುದ್ರಪ್ಪ ಲಮಾಣಿ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಸಲೀಂ ಅಹಮದ್, ಶಾಸಕರಾದ ಎಚ್.ಪಿ. ರಾಜೇಶ್, ಶಿವಮೂರ್ತಿನಾಯ್ಕ ಮತ್ತಿತರರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News