ಪ್ರಧಾನಿ ಪಕೋಡ ಹೇಳಿಕೆಗೆ ಖಂಡನೆ: ಎನ್‍ಎಸ್‍ಯುಐ ಪ್ರತಿಭಟನೆ

Update: 2018-02-09 16:58 GMT

ಮೈಸೂರು,ಫೆ.9: ಕೇಂದ್ರ ಸರ್ಕಾರ ಯುವಜನತೆಗೆ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದ್ದು, ಪಕೋಡ ಮಾಡಿ ಜೀವನ ನಿರ್ವಹಿಸಲು ಹೇಳಿಕೊಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷದ ಎನ್‍ಎಸ್‍ಯುಐ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಲದರ್ಶಿನಿ ಬಳಿ ಸಂಸದ ಪ್ರತಾಪ್ ಸಿಂಹ ಕಛೇರಿ ಎದುರು ಶುಕ್ರವಾರ ಜಮಾಯಿಸಿದ ಎನ್.ಎಸ್.ಯು.ಐ ಕಾರ್ಯಕರ್ತರು ಪಕೋಡ ತಯಾರಿಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪ್ರಧಾನಿ ನರೇಂದ್ರ ಮೋದಿಯವರು ಪಕೋಡ ಮಾಡಿ ಸ್ವಾವಲಂಬನೆಯಾಗಿ ಜೀವನ ಮಾಡಿಕೊಳ್ಳಿ ಎಂಬ ಸಂದೇಶವನ್ನು ನೀಡುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿಯ ಹೇಳಿಕೆ ನೀಡುವ ಮೂಲಕ ಸ್ವಾಭಿಮಾನಿ ನಿರುದ್ಯೋಗಿಗಳನ್ನು ಅವಮಾನ ಮಾಡಿದ್ದಾರೆ. ಪಕೋಡ ಮಾಡಿ ಜೀವನ ಮಾಡುವುದು ಹೇಗೆ, ಯಾವ ಬ್ಯಾಂಕಿನಿಂದ ಸಾಲ ಕೊಡುತ್ತಾರೆ ಎಂಬುದಕ್ಕೆ ಸರಿಯಾದ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಸತೀಶ್ ನಾಯಕ, ಮೈಸೂರು ಜಿಲ್ಲಾ ಅಧ್ಯಕ್ಷ ಸಯ್ಯದ್ ಆಬ್ರಾರ್, ಪ್ರಧಾನ ಕಾರ್ಯದರ್ಶಿ  ಪುಟ್ಟೇಗೌಡ ಹಾಗೂ ವಿಶ್ವನಾಥ್, ಮಹದೇವ್,ವಿಜಯ್, ಆನೇಶ್ ಮೈಸೂರು ಬಸವಣ್ಣ ಸೇರಿದಂತೆ  ಹಲವು ನಿರುದ್ಯೋಗಿ ಯುವಕರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News