×
Ad

ಕಾಡಾನೆ ದಾಳಿ ತಡೆಗಟ್ಟಲು ಒತ್ತಾಯಿಸಿ ಫೆ.23 ರಂದು ಬೃಹತ್ ಪ್ರತಿಭಟನೆ

Update: 2018-02-09 22:45 IST

ಮಡಿಕೇರಿ, ಫೆ.9 : ಕಾಡಾನೆ ಮಾನವ ಸಂಘರ್ಷಕ್ಕೆ ಅಂತ್ಯ ಹಾಡಬೇಕು ಹಾಗೂ ಕಾಡಾನೆಗಳ ಉಪಟಳಕ್ಕೆ ಅಂಕುಶ ಹಾಕಬೇಕೆಂದು ಒತ್ತಾಯಿಸಿ ಫೆ.23 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ವೇದಿಕೆ ಸಜ್ಜುಗೊಂಡಿದೆ.  

ಜಿಲ್ಲೆಯ ಬೆಳೆಗಾರರು, ಕಾರ್ಮಿಕ ವರ್ಗ, ಕೃಷಿಕರು, ಸಾರ್ವಜನಿಕರು ಗಾಂಧಿ ಮೈದಾನದಿಂದ ಅರಣ್ಯ ಭವನದವರೆಗೆ ಮೆರವಣಿಗೆ ಮೂಲಕ ತೆರಳಿ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲು ನಗರದ ಬಾಲಭವನದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕರ್ನಾಟಕ ರೈತ ಸಂಘ, ಬೆಳೆಗಾರರು, ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ಪ್ರಮುಖರು ಸಭೆ ನಡೆಸಿ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ  ಅಸಮಾಧಾನ ವ್ಯಕ್ತಪಡಿಸಿದರು.

ಕಾಡಾನೆ ದಾಂಧಲೆ ಬಗ್ಗೆ ಸರಕಾರದ ಗಮನ ಸೆಳೆಯಲು ಫೆ.23 ರಂದು ಜನಶಕ್ತಿ ಪ್ರದರ್ಶನಕ್ಕೆ ರೈತ ಸಂಘಟನೆಗಳು, ಬೆಳೆಗಾರ ಒಕ್ಕೂಟಗಳ ಪ್ರಮುಖರು ನಿರ್ಧರಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಡಾನೆ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಕಳೆದ 30 ವರ್ಷಗಳಿಂದ ಕಾಡಾನೆ ಮಾನವ ಸಂಘರ್ಷ ಜಿಲ್ಲೆಯಲ್ಲಿ ಮುಂದುವರೆದಿದ್ದರೂ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಪ್ರಮುಖರು ಆರೋಪಿಸಿದರು.

ಮಾಲ್ದಾರೆಯ ರೈತ ಮುಖಂಡ ಚೇರಂಡ ನಂದಾ ಸುಬ್ಬಯ್ಯ ಮಾತನಾಡಿ, 3 ದಶಕಗಳಿಂದಲೂ ಕೊಡಗಿನಲ್ಲಿ ಕಾಡಾನೆ ದಾಂಧಲೆಯ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಈ ವರ್ಷವಂತೂ ಬೇಸಿಗೆಯಲ್ಲಿ ಕೊಡಗಿನಾದ್ಯಂತ ಕಾಡಾನೆಗಳ ದಾಳಿ ಮತ್ತಷ್ಟು ತೀವ್ರಗೊಳ್ಳುವ ಎಲ್ಲಾ ಸಾಧ್ಯತೆಗಳಿದೆ. ಸರ್ಕಾರ ಮತ್ತು ಅಧಿಕಾರಿಗಳು ಕಾಡಾನೆಗಳೂ ಸೇರಿದಂತೆ ವನ್ಯಜೀವಿಗಳಿಂದ ಜನರ ಜೀವ ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು. ಸರ್ಕಾರಿ ಅಧಿಕಾರಿಗಳಿಗೆ ಕಾಡಾನೆಯ ಜೀವ ರಕ್ಷಣೆ ಮುಖ್ಯವಾಗಿದೆಯೇ ಹೊರತು ಮನುಷ್ಯನ ಜೀವ ಉಳಿಸುವಿಕೆ ಮುಖ್ಯವಾಗುತ್ತಿಲ್ಲ ಎಂದು ದೂರಿದ ನಂದಾ ಸುಬ್ಬಯ್ಯ, ರಾಜ್ಯದ ಅರಣ್ಯ ಸಚಿವರು ಕಾಡಾನೆ ದಾಂಧಲೆ ವಿಚಾರದಲ್ಲಿ ನಿರ್ಜೀವವಾಗಿದ್ದಾರೆ ಎಂದು ಟೀಕಿಸಿದರು. 

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಕಾಡಾನೆಗಳಿಂದಾಗುತ್ತಿರುವ ಸಮಸ್ಯೆ ಸಂಬಂಧಿತ ಕೇಂದ್ರ ಮತ್ತು ರಾಜ್ಯದಲ್ಲಿ ಆಳುವ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ. ಅಮೂಲ್ಯವಾದ ಮಾನವನ ಜೀವವನ್ನು ಕಾಡಾನೆಗಳು ಹತ್ಯೆ ಮಾಡಿದರೆ ಕೇವಲ 5 ಲಕ್ಷ ರೂ. ನೀಡಿ ಕೈತೊಳೆದುಕೊಳ್ಳುತ್ತಿದೆ. ರಾಜ್ಯದ ಅರಣ್ಯ ಸಚಿವ ಬಿ.ರಮಾನಾಥ ರೈ ತಾವೊಬ್ಬರು ನಿಷ್ಕ್ರಿಯ ಸಚಿವ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಟೀಕಿಸಿದರು. ಗಂಜಿಗೋಸ್ಕರ ಕೂಲಿಕೆಲಸಕ್ಕೆ ಹೋಗುವ ಕಾರ್ಮಿಕರು ತೋಟದಿಂದ ತೋಟಕ್ಕೆ  ಹೆಜ್ಜೆ ಹಾಕುತ್ತಿರುವ ಕಾಡಾನೆಗಳಿಗೆ  ಬಲಿಯಾಗುತ್ತಿದ್ದಾರೆ. ಆನೆ ಕಂದಕಗಳು ಜಿಲ್ಲೆಯಲ್ಲಿ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ಪಟಾಕಿ ಸಿಡಿಸುತ್ತಾ, ಚಂಡೆ ಬಾರಿಸುತ್ತಾ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಕಾಡಾನೆಗಳನ್ನು ಓಡಿಸಿದರೆ ಪ್ರಯೋಜನವೇನು. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಬೇಡವೇ ಎಂದು ಪ್ರಶ್ನಿಸಿದರು.

ಸಿಪಿಐಎಂ ಪಕ್ಷದ ಮುಖಂಡ ಡಾ.ಇ.ರಾ.ದುರ್ಗಾಪ್ರಸಾದ್ ಮಾತನಾಡಿ, ಕರ್ನಾಟಕ ಸರ್ಕಾರ ಹೈಕೋರ್ಟ್ ಸೂಚನೆಯನ್ವಯ ರಚಿಸಿದ್ದ ಆನೆ ಕಾರ್ಯ ಪಡೆ ನೀಡಿದ ವರದಿಗೂ ಬೆಲೆಯಿಲ್ಲದಂತಾಗಿದೆ. ಶಾಸಕಾಂಗದ ದರ್ಬಾರಿನಲ್ಲಿ ಕಾರ್ಯಾಂಗ ತನ್ನಿಷ್ಟದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದರು.

ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಎಂ.ಎಂ.ತಿಮ್ಮಯ್ಯ ಮಾತನಾಡಿ,  ಕಾಡಾನೆಗಳನ್ನು ಒಂದೆಡೆ ಗೋಡೆ ಕಟ್ಟಿದ ಆವರಣದಲ್ಲಿ ಇರಿಸಬೇಕು. ತೋಟಗಳಿಂದ ಕಾಡಾನೆಗಳನ್ನು ಇಕ್ಕಟ್ಟಾದ ಕಾಡಿಗಟ್ಟುವುದರಲ್ಲಿ ಸಮಸ್ಯೆಗೆ ಪರಿಹಾರ ದೊರಕಿದಂತಾಗುವುದಿಲ್ಲ ಎಂದರು.

ಕೊಡಗು ಜನರಲ್ ವರ್ಕರ್ಸ್ ಯೂನಿಯನ್ ಮುಖಂಡ ಮಹದೇವ್, ಕೊಡಗು ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಸಿಐಟಿಯು  ಮುಖಂಡ ಎಚ್.ಬಿ.ರಮೇಶ್, ದ.ಸಂ.ಸ ಮುಖಂಡ ಪರಶುರಾಮ್, ಕಾರ್ಮಿಕ ಮುಖಂಡ ಎನ್.ಡಿ.ಕುಟ್ಟಪ್ಪ, ಬಾಳೆಲೆಯ ಕೃಷಿಕ ಸುಭಾಷ್, ಮಡಿಕೇರಿಯ ಎಸ್.ಐ.ಮುನೀರ್ ಅಹಮ್ಮದ್, ದುಲೀಪ್ ನಂಜಪ್ಪ, ಕಾರ್ಮಿಕ ಮುಖಂಡ ಪಿ.ಆರ್. ಭರತ್, ಸಭೆಯ ಸಂಘಟಕ ಪ್ರವೀಣ್ ಬೋಪಯ್ಯ  ಮಾತನಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News