×
Ad

ಶಿವಮೊಗ್ಗ: ಸರ್ಕಾರಿ ಅಧಿಕಾರಿಗೆ ಭೂ ಮಂಜೂರಾತಿ ಪ್ರಕರಣ; ಅರ್ಜಿದಾರರಿಗೆ ಸೂಕ್ತ ಮಾಹಿತಿ ನೀಡಲು ಸೂಚನೆ

Update: 2018-02-09 22:59 IST

ಶಿವಮೊಗ್ಗ, ಫೆ.9 : ಕರ್ನಾಟಕ ಉಪ ಲೋಕಾಯುಕ್ತ ಸುಭಾಷ್ ಅಡಿ ಯವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲೋಕಾಯುಕ್ತದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಪ್ರಕರಣಗಳ ವಿಚಾರಣೆ ನಡೆಸಿದರು.

ಅರಣ್ಯ ಹಕ್ಕು ಕಾಯ್ದೆ ಅನುಷ್ಟಾನದಲ್ಲಿನ ಲೋಪದೋಷಗಳು, ಅನಧಿಕೃತವಾಗಿ ಭೂ ಮಂಜೂರಾತಿ ಪ್ರಕರಣಗಳು, ನಿರ್ಮಾಣ ಕಾಮಗಾರಿಗಳಲ್ಲಿ ಅವ್ಯವಹಾರ ಸೇರಿದಂತೆ ಸುಮಾರು 40ಕ್ಕೂ ಅಧಿಕ ಪ್ರಕರಣಗಳನ್ನು ಉಪ ಲೋಕಾಯುಕ್ತರಿಗೆ ಸಲ್ಲಿಸಲಾಗಿತ್ತು. ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಅನುಸರಿಸದೇ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ನಿವೃತ್ತ ಫಾರೆಸ್ಟರ್ ವೈ.ಜಿ.ಯೋಗೇಂದ್ರ ಎಂಬವರು ಸಲ್ಲಿಸಿದ್ದ ದೂರಿನ ಸುದೀರ್ಘ ವಿಚಾರಣೆ ನಡೆಸಿದರು.

ನಿಗದಿತ ಪ್ರಕರಣಗಳಲ್ಲಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅಧಿಕಾರೇತರ ಸದಸ್ಯರನ್ನು ಸೇರಿಸಿಲ್ಲ. ಅರ್ಜಿ ಕುರಿತಾದ ಅಂತಿಮ ತೀರ್ಪಿನಲ್ಲಿ ಕೇವಲ ಅಧಿಕಾರಿಗಳ ಮಾತ್ರ ಸಹಿ ಇದ್ದು, ಅಧಿಕಾರೇತರ ನಾಮನಿರ್ದೇಶಿತ ಸದಸ್ಯರ ಸಹಿಯನ್ನು ಪಡೆದುಕೊಂಡಿಲ್ಲ. ಅದರಲ್ಲಿಯೂ ಸಹಿ ಮಾಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್ಚುವರಿ ಪ್ರಭಾರದಲ್ಲಿದ್ದು, ಅವರಿಗೆ ಕಾನೂನು ಪ್ರಕಾರ ಸಹಿ ಮಾಡುವ ಅಧಿಕಾರ ಇಲ್ಲ. ಆದರೂ ಅವರು ಸಹಿ ಮಾಡಿದ್ದು ಕಾನೂನು ಬಾಹಿರವಾಗಿದೆ. ಅರ್ಜಿಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಕೇವಲ ಮೂರು ತಲೆಮಾರಿನಿಂದ ವಾಸವಾಗಿರುವ ಬಗ್ಗೆ ಮಾತ್ರ ದೃಢೀಕರಣ ಕೇಳುತ್ತಿದ್ದಾರೆ. ಕಾಯ್ದೆಯಲ್ಲಿ ಒಟ್ಟು 13ಅಂಶಗಳ ಪರಿಶೀಲನೆಗೆ ಅವಕಾಶ ಕಲ್ಪಿಸಿದ್ದು, ಇದರಲ್ಲಿ ಪ್ರಮುಖವಾಗಿ ಕಾರ್ಯ ಯೋಜನೆ ಎಂಬ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಅಹವಾಲು ಮಂಡಿಸಿದರು.

ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆ ಅನುಷ್ಟಾನದ ಕುರಿತು ಮಾಹಿತಿಯನ್ನು ನೀಡಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶಿವಕುಮಾರ್, ಒಟ್ಟು 85518 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 2506 ಪ್ರಕರಣಗಳಲ್ಲಿ ಹಕ್ಕುಪತ್ರ ವಿತರಿಸಲಾಗಿದೆ. 43040 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದಂತೆ 4634 ಅರ್ಜಿಗಳ ಪೈಕಿ 2693 ಅರ್ಜಿಗಳನ್ನು ತಿರಸ್ಕರಿಸಿ 1940 ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದರು.

ಭದ್ರಾವತಿ ತಾಲೂಕಿನಲ್ಲಿ ಅನಧಿಕೃತವಾಗಿ ಸರ್ಕಾರಿ ಅಧಿಕಾರಿಯೊಬ್ಬರಿಗೆ ಭೂ ಮಂಜೂರಾತಿ ಮಾಡಲಾಗಿದ್ದು, ಈ ಕುರಿತಾಗಿ ದೂರು ನೀಡಿ ಮಾಹಿತಿ ಕೇಳಿದ್ದರೂ ತಹಶೀಲ್ದಾರ್ ಮಾಹಿತಿ ಒದಗಿಸುತ್ತಿಲ್ಲ ಎಂದು ಅರ್ಜಿದಾರರೊಬ್ಬರು ಅಹವಾಲು ಸಲ್ಲಿಸಿದರು. ಅರ್ಜಿದಾರರಿಗೆ ಕೇಳಿರುವ ಎಲ್ಲಾ ಮಾಹಿತಿಯನ್ನು ಒದಗಿಸುವಂತೆ ಮತ್ತು ಎಲ್ಲಾ ದಾಖಲೆಗಳನ್ನು ಪರಿಶೀಲನೆಗೆ ಲೋಕಾಯುಕ್ತಕ್ಕೆ ಸಲ್ಲಿಸುವಂತೆ ಉಪ ಲೋಕಾಯುಕ್ತರು ಈ ಸಂದರ್ಭದಲ್ಲಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್, ಪೊಲೀಸ್ ವರಿಷ್ಟಾಧಿಕಾರಿ ಅಭಿನವ ಖರೆ, ಮಹಾನಗರ ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್, ಲೋಕಾಯುಕ್ತ ಕಚೇರಿ ಅಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ದೂರುದಾರರು ಸಭೆಯಲ್ಲಿ ಉಪಸ್ಥಿತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News