ಕಾರು ಢಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು
ಶಿವಮೊಗ್ಗ, ಫೆ. 9: ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಕೋಟಿಪುರ ಗ್ರಾಮದಲ್ಲಿ ವರದಿಯಾಗಿದೆ.
ನೆಲ್ಲಿಕೊಪ್ಪ ಗ್ರಾಮದ ಶಿವಾನಂದ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ತಕ್ಷಣವೇ ಆನವಟ್ಟಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ಶಿವಾನಂದರವರು ಸ್ನೇಹಿತರೋರ್ವರ ಬೈಕ್‍ನಲ್ಲಿ ಲಕ್ಕವಳ್ಳಿ ಗ್ರಾಮಕ್ಕೆ ತೆರಳುತ್ತಿದ್ದು, ಮಾರ್ಗಮಧ್ಯೆ ಕೋಟಿಪುರ ಗ್ರಾಮದಲ್ಲಿ ಟೀ ಕುಡಿಯಲು ಬೈಕ್ ನಿಲ್ಲಿಸಿದ್ದರು. ಟೀ ಕುಡಿದು ರಸ್ತೆ ದಾಟುವ ವೇಳೆ ಮಿತಿಮೀರಿದ ವೇಗ, ಅಜಾಗರೂಕವಾಗಿ ಚಾಲನೆ ಮಾಡಿಕೊಂಡು ಬಂದ ಕಾರು ಚಾಲಕ ಢಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.