ನಿಯಂತ್ರಣ ಯಾಕೆ ಬೇಡ?

Update: 2018-02-10 04:09 GMT

ಮಠ ಮಂದಿರಗಳನ್ನು ಸರಕಾರ ಸ್ವಾಧೀನ ಪಡಿಸಲು ಹವಣಿಸುತ್ತಿದೆ ಎಂದು ಬಿಜೆಪಿ ಹೊಸತೊಂದು ವರಸೆ ತೆಗೆದಿದೆ. ತಾವೇ ವದಂತಿಯನ್ನು ಹಬ್ಬಿ, ತಾವೇ ಅದರ ವಿರುದ್ಧ ಪ್ರತಿಭಟಿಸಿ ಇದೀಗ ‘ಸರಕಾರ ನಮ್ಮ ಹೋರಾಟಕ್ಕೆ ಮಣಿದಿದೆ’ ಎಂದು ಬಿಜೆಪಿ ಹೇಳುತ್ತಿದೆ. ಇವೆಲ್ಲವೂ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯೇ ಸ್ವತಃ ಚಿತ್ರಕತೆ ಬರೆದು ನಡೆಸಿದ ಪ್ರಹಸನವೆನ್ನುವುದು ಮೇಲ್ನೋಟಕ್ಕೆ ಅರ್ಥ ಮಾಡಿಕೊಳ್ಳಬಹುದು. ಮುಖ್ಯವಾಗಿ ರಾಜ್ಯದ ಮಠಗಳು ಹಾಗೂ ಧಾರ್ಮಿಕ ಸಂಸ್ಥೆಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಪ್ರಸ್ತಾಪವನ್ನು ಸರಕಾರ ಮಾಡಿಯೇ ಇಲ್ಲ. ಈ ಬಗ್ಗೆ ಆದೇಶವನ್ನು ನೀಡಿರುವುದು ನ್ಯಾಯಾಲಯ. ಮತ್ತು ನ್ಯಾಯಾಲಯದ ಸೂಚನೆಯನ್ನು ಪಾಲಿಸದೇ ಇದ್ದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಆದೇಶಕ್ಕೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದವರೆಗಿನ ಇತಿಹಾಸವಿದೆ. ಆ ಸಂದರ್ಭದಲ್ಲಿ ರಾಮಾಜೋಯಿಸ್ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಂಸ್ಥೆಗಳು ಹಾಗೂ ಮಠಗಳಿಗೆ ನಿಯಂತ್ರಣ ಹೇರುವ ಬಗ್ಗೆ ವರದಿ ನೀಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು. ಅದೇ ಮಾದರಿಯಲ್ಲಿ ಇದೀಗ ನ್ಯಾಯಾಲಯದ ಆದೇಶದ ಕುರಿತಂತೆ ಮಠಗಳು ಮತ್ತು ಸಂಸ್ಥೆಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ವಿಚಾರವಾಗಿ ಸಲಹೆ ಸೂಚನೆಗಳನ್ನು ಸರಕಾರ ಕೇಳಿದೆ.

ಇದೀಗ ಆ ಸಲಹೆ ಸೂಚನೆಗಳ ಪತ್ರವನ್ನು ಕೂಡ ಸರಕಾರ ಹಿಂದಕ್ಕೆ ತೆಗೆದುಕೊಳ್ಳುವ ಎಂದು ಭರವಸೆ ನೀಡಿದೆ. ಇವೆಲ್ಲದರ ಹಿನ್ನೆಲೆ ಅರಿತವರಿಗೆ ಬಿಜೆಪಿ ಹೇಗೆ ಚುನಾವಣೆಗಾಗಿ ನ್ಯಾಯಾಲಯದ ಆದೇಶವನ್ನೇ ವಿರೂಪಗೊಳಿಸಿ ಜನರಜೊತೆಗೆ ಭಾವನಾತ್ಮಕವಾಗಿ ಆಟವಾಡಲು ಯತ್ನಿಸಿತು ಎನ್ನುವುದು ಅರ್ಥವಾಗಬಹುದು. ದೇವಸ್ಥಾನ, ಮಠಗಳನ್ನು ಮುಂದಿಟ್ಟು ಸುಳ್ಳು ಸುದ್ದಿಗಳನ್ನು ತೇಲಿ ಬಿಡುವುದು ಈ ಹಿಂದೆಯೂ ನಡೆದಿದೆ. ದೇವಸ್ಥಾನದ ಹಣದಿಂದ ಹಜ್ ಸಬ್ಸಿಡಿಯನ್ನು ನೀಡಲಾಗುತ್ತಿದೆ, ದೇವಸ್ಥಾನಗಳ ಹಣವನ್ನು ಚರ್ಚ್, ಮಸೀದಿಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎನ್ನುವ ಸುಳ್ಳನ್ನು ಪದೇ ಪದೇ ಆಡುತ್ತಾ ಅದನ್ನು ನಿಜ ಮಾಡುವುದಕ್ಕೆ ಗರಿಷ್ಠ ಪ್ರಯತ್ನವನ್ನು ಸಂಘಪರಿವಾರ ಮಾಡಿದೆ. ಆದರೆ ದೇವಸ್ಥಾನದ ಎಲ್ಲ ಹಣದ ಮೇಲೆ ಸರಕಾರ ಅಧಿಕಾರ ಹೊಂದಿಲ್ಲ ಮತ್ತು ದೇವಸ್ಥಾನದ ಹಣದ ವ್ಯವಹಾರಗಳನ್ನು ನೋಡಿಕೊಳ್ಳಲು ಅದಕ್ಕೆ ಸಂಬಂಧ ಪಟ್ಟ ಮುಜರಾಯಿ ಇಲಾಖೆ ಇದೆ ಎನ್ನುವ ಸಣ್ಣ ಸತ್ಯವನ್ನು ಗಟ್ಟಿಯಾಗಿ ಹೇಳುವುದಕ್ಕೆ ಮಾತ್ರ ಬಿಜೆಪಿಯೇತರ ಪಕ್ಷಗಳು ವಿಫಲವಾಗಿವೆ. ಇಂದು ಮುಜರಾಯಿ ಇಲಾಖೆಯ ಅಡಿಯಲ್ಲಿ ಬರದೇ ಇರುವ ಶ್ರೀಮಂತ ದೇವಸ್ಥಾನಗಳೇ ನೂರಾರಿವೆ. ಜನ ಸಾಮಾನ್ಯರ ಹಣಚಿವನ್ನು ದೇವರ ಹೆಸರಿನಲ್ಲಿ ಯಾರ್ಯಾರೋ ಲೂಟಿ ಹೊಡೆಯುತ್ತಿದ್ದಾರೆ. ದೇವಸ್ಥಾನದಿಂದ ವಸೂಲಾಗಿರುವ ಹಣವನ್ನು ದೇವಸ್ಥಾನದ ಏಳಿಗೆಗೆ ಮತ್ತು ಧಾರ್ಮಿಕವಾಗಿ ಪೂರಕವಾಗಿರುವ ಚಟುವಟಿಕೆಗಳಿಗೇ ಸರಕಾರ ಬಳಸುತ್ತದೆ.

ಅದಕ್ಕಾಗಿಯೇ ಮುಜರಾಯಿ ಇಲಾಖೆಯಿದೆ ಮತ್ತು ಅದಕ್ಕೊಬ್ಬ ಸಚಿವರೂ ಇದ್ದಾರೆ. ಹಾಗೆ ನೋಡಿದರೆ, ಸರಕಾರ ಜನರ ತೆರಿಗೆಯ ಹಣವನ್ನೂ ವಿವಿಧ ಧಾರ್ಮಿಕ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅನುದಾನವಾಗಿ ನೀಡುತ್ತಾ ಬಂದಿದೆ. ಹಲವು ಮಠಗಳು, ಸ್ವಾಮೀಜಿಗಳು ಇದರ ಫಲಾನುಭವಿಗಳಾಗಿದ್ದಾರೆ. ಇವೆಲ್ಲವನ್ನೂ ಜನರಿಗೆ ಸರಕಾರ ಜೋರು ದನಿಯಲ್ಲಿ ಸ್ಪಷ್ಟ ಪಡಿಸುವುದರಿಂದ ಮಾತ್ರ ಬಿಜೆಪಿಯೊಳಗಿರುವ ಕೂಗು ಮಾರಿಗಳ ಬಾಯಿಯನ್ನು ಮುಚ್ಚಿಸಬಹುದು. ಇತ್ತೀಚಿನವರೆಗೂ ಹಜ್ ಸಬ್ಸಿಡಿಯ ಬಗ್ಗೆ ಸಂಘಪರಿವಾರ ಜನರನ್ನು ದಾರಿ ತಪ್ಪಿಸುತ್ತಾ ಬಂದಿತ್ತು. ಆದರೆ ಹಜ್ ಸಬ್ಸಿಡಿಯ ಹೆಸರಿನಲ್ಲಿ ಯಾತ್ರಿಕರಿಂದಲೇ ಅತ್ಯಧಿಕ ಹಣವನ್ನು ವಸೂಲಿ ಮಾಡಿ, ಅದನ್ನು ಏರ್‌ಇಂಡಿಯಾ ಉಳಿವಿಗಾಗಿ ಸರಕಾರ ಬಳಸುತ್ತಾ ಬಂದಿದೆ. ಒಂದು ರೀತಿಯಲ್ಲಿ, ಏಕಸ್ವಾಮಿತ್ವದ ಮೂಲಕ ಏರ್‌ಇಂಡಿಯಾ ಹಜ್ ಯಾತ್ರಿಕರನ್ನು ಶೋಷಿಸುತ್ತಾ ಬಂದಿದೆ. ಆದರೆ ಸಂಘಪರಿವಾರ ಮಾತ್ರ ಇದನ್ನು ಮರೆ ಮಾಚಿ, ಹಜ್ ಯಾತ್ರೆಗೆ ಸಬ್ಸಿಡಿ ನೀಡಲು ದೇವಸ್ಥಾನಗಳ ಹಣವನ್ನು ಬಳಸಲಾಗುತ್ತಿದೆ ಎಂದು ಹೇಳುತ್ತಾ ಬಂತು. ವಿಪರ್ಯಾಸವೆಂದರೆ ವಿರೋಧ ಪಕ್ಷಗಳು ಎಲ್ಲೂ ಇದನ್ನು ಸಮರ್ಥವಾಗಿ ನಿರಾಕರಣೆ ಮಾಡಲಿಲ್ಲ.

ಮುಸ್ಲಿಮರ ಮಸೀದಿ, ಮದ್ರಸಗಳ ಏಳಿಗೆಗೆ ವಕ್ಫ್ ಇಲಾಖೆ ಇದೆ. ಈ ಇಲಾಖೆಗೆ ಜನರ ತೆರಿಗೆಯ ಹಣವನ್ನು ಬಳಸುತ್ತಿಲ್ಲ ಎನ್ನುವುದನ್ನೂ ನಾವು ಗಮನಿಸಬೇಕು. ದೇಶಾದ್ಯಂತ ನಾಲ್ಕು ಲಕ್ಷ ಎಕರೆಗೂ ಅಧಿಕ ವಕ್ಫ್ ಭೂಮಿ ಇದಕ್ಕಾಗಿ ಇದೆ. ಈ ಭೂಮಿಯನ್ನು ಹಿಂದಿನ ತಲೆಮಾರಿನ ಜನರು ದೇವರ ಹೆಸರಿನಲ್ಲಿ ಮುಸ್ಲಿಮರ ಅಭಿವೃದ್ಧಿಗಾಗಿ ದಾನ ಮಾಡಿರುವುದು. ಇಷ್ಟೂ ಭೂಮಿಯ ನಿಯಂತ್ರಣವೂ ವಕ್ಫ್ ಇಲಾಖೆಯ ಕೈಯಲ್ಲಿದೆ ಎನ್ನುವುದನ್ನು ಗಮನಿಸಬೇಕು. ಈ ಭೂಮಿಯಿಂದ ಇಲಾಖೆಗೆ ಆದಾಯ ಬರುತ್ತದೆ. ಆದರೆ ಇಂದು ಈ ಭೂಮಿ ಭಾಗಶಃ ಒತ್ತುವರಿಯಾಗಿ ಕಂಡವರ ಪಾಲಾಗಿದೆ. ಹಲವರು ವಕ್ಫ್ ಇಲಾಖೆಗೆ ವಂಚಿಸಿ ಆ ಭೂಮಿಯನ್ನು ಅನುಭವಿಸುತ್ತಿದ್ದಾರೆ. ಕಾಟಾಚಾರಕ್ಕಷ್ಟೇ ವಕ್ಫ್ ಇಲಾಖೆಗೆ ಒಂದಿಷ್ಟು ಹಣ ಸಂದಾಯವಾಗುತ್ತದೆ.

ಇಂದು ಸುಮಾರು ಒಂದೂವರೆ ಲಕ್ಷ ಎಕರೆ ಭೂಮಿ ರಾಜ್ಯ ಸರಕಾರದ ನಿಯಂತ್ರಣ ಅಂದರೆ ವಕ್ಫ್ ಇಲಾಖೆಯ ನಿಯಂತ್ರಣದಲ್ಲಿಯೇ ಇದೆ. ಆದುದರಿಂದ ಮಠಗಳನ್ನು, ಧಾರ್ಮಿಕ ಕೇಂದ್ರಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸರಕಾರಕ್ಕೆ, ಮಸೀದಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವೇ? ಎಂದು ಕೇಳುವಂತಿಲ್ಲ. ಇಷ್ಟಕ್ಕೂ ಮಠ, ಮಂದಿರಗಳಲ್ಲಿ ಆಗುವಷ್ಟು ಹಣದ ವ್ಯವಹಾರ ಮಸೀದಿಗಳಲ್ಲಿ ಆಗುವುದಿಲ್ಲ. ಇರುವ ವಕ್ಫ್ ಭೂಮಿಯೆಲ್ಲವೂ ಸರಕಾರದ ನಿಯಂತ್ರಣದಲ್ಲೇ ಇದೆ. ಹೀಗಿರುವಾಗ, ಮುಸ್ಲಿಮರು ಕೂಡ ವಕ್ಫ್ ಆಸ್ತಿಯ ಮೇಲೆ ಸರಕಾರದ ನಿಯಂತ್ರಣ ಯಾಕೆ ಬೇಕು? ಎಂದು ಕೇಳುವ ದಿನ ಬರಬಹುದೇನೋ. ದೇವಸ್ಥಾನಗಳಲ್ಲಿ ಹಣ ದೋಚುವುದಕ್ಕೆ ಬೇರೆ ಬೇರೆ ಮಾರ್ಗಗಳಿವೆ. ದೇವರ ಆಭರಣ, ಕಿರೀಟಗಳಿಂದ ಹಿಡಿದು ಹುಂಡಿಗೆ ಬೀಳುವ ಕೋಟಿಗಟ್ಟಳೆ ಹಣ ಮಾತ್ರವಲ್ಲ, ಇಲ್ಲಿ ಪ್ರತಿ ಅರ್ಚನೆಗಳಿಗೂ ಭಕ್ತರಿಂದ ಹಣವಸೂಲಿ ಮಾಡಲಾಗುತ್ತದೆ. ಬಡವರಿಗೆ ಬೇಕಾದ ಅಗ್ಗದ ಅರ್ಚನೆ, ಶ್ರೀಮಂತರಿಗೆ ಬೇಕಾದ ದುಬಾರಿ ಅರ್ಚನೆ ಇವೆಲ್ಲವೂ ಪರೋಕ್ಷವಾಗಿ ವ್ಯವಹಾರಗಳೇ ಆಗಿವೆ.

 ಒಂದಂತೂ ನಿಜ. ಹಲವು ದೇವಸ್ಥಾನ, ಮಠಗಳು ಮಿತಿಯನ್ನು ಮೀರಿದ ಆದಾಯವನ್ನು ಹೊಂದಿವೆ. ತಮ್ಮ ಕಪ್ಪು ಹಣವನ್ನು ಬಿಳುಪು ಮಾಡುವುದಕ್ಕೆ ಪಾತಕ ಜಗತ್ತು ಇಂತಹ ಶ್ರೀಮಂತ ದೇವಸ್ಥಾನಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಅಷ್ಟೇ ಏಕೆ? ಇತ್ತೀಚೆಗೆ ನೋಟು ನಿಷೇಧವಾದಾಗ, ಇಂತಹ ಶ್ರೀಮಂತ ದೇವಾಲಯಗಳ ಮೂಲಕ ಹಲವು ರಾಜಕಾರಣಿಗಳು, ಉದ್ಯಮಿಗಳು ಗುಟ್ಟಾಗಿ ಕಪ್ಪನ್ನು ಬಿಳಿ ಮಾಡಿಕೊಂಡಿದ್ದಾರೆ. ಆದರೆ ‘ದೇವರು’ ಎನ್ನುವ ಭಾವನಾತ್ಮಕ ಗುಮ್ಮನನ್ನು ತೋರಿಸಿ ಕಾನೂನಿನ ಕೈಗಳನ್ನು ಇವರು ಕಟ್ಟಿಹಾಕಿದ್ದಾರೆ. ಇಂದು ವಿದೇಶದಲ್ಲಿರುವ ಕಪ್ಪುಹಣಕ್ಕಿಂತ ಅಧಿಕ ಇಂತಹ ಮಠ, ಮಂದಿರಗಳಲ್ಲಿವೆ. ನೋಟು ನಿಷೇಧದ ಹೆಸರಿನಲ್ಲಿ ಬಡವರ ಕೈಯಲ್ಲಿರುವ ಐನೂರು, ಒಂದು ಸಾವಿರ ರೂಪಾಯಿಯ ನೋಟುಗಳನ್ನು ಕಿತ್ತುಕೊಂಡ ಸರಕಾರಕ್ಕೆ ಇವರ ಮೇಲೆ ನಿಯಂತ್ರಣ ತರಲು ಇನ್ನೂ ಸಾಧ್ಯವಾಗಿಲ್ಲ. ಕನಿಷ್ಠ ಕಪ್ಪು ವ್ಯವಹಾರಗಳನ್ನು ತಪ್ಪಿಸುವುದಕ್ಕಾದರೂ ಇಂತಹ ಶ್ರೀಮಂತ ಮಠ, ಮಂದಿರಗಳನ್ನು ಗುರುತಿಸಿ ಮುಜರಾಯಿ ಇಲಾಖೆಯ ನಿಯಂತ್ರಣಕ್ಕೆ ಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News