×
Ad

ಹನೂರು : ಸರ್ಕಾರಿ ಶಾಲೆಯಲ್ಲಿ ಕಳ್ಳತನ

Update: 2018-02-10 20:59 IST

ಹನೂರು: ಸಮೀಪದ ಮಣಗಳ್ಳಿ ಗ್ರಾಮದ ಸರ್ಕಾರಿ ಪ್ರೌಢಾಶಾಲೆಯ ಮುಖ್ಯ ಶಿಕ್ಷಕರ ಕಚೇರಿಯ ಬಾಗಿಲು ಬೀಗ ಹೊಡೆದು ಲ್ಯಾಪ್‍ಟಾಪ್, ಗ್ಯಾಸ್ ಸಿಲಿಂಡರ್ ಹಾಗೂ ಬಿಸಿಯೂಟಕ್ಕೆ ಬಳಸುವ 2 ಮೂಟೆ ಅಕ್ಕಿ ಕಳ್ಳತನವಾಗಿದೆ. 

ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಶುಕ್ರವಾರ ರಾತ್ರಿ ಕಳ್ಳರು ಲಗ್ಗೆ ಹಾಕಿದ್ದು, ಮುಖ್ಯ ಶಿಕ್ಷಕರ ಕಚೇರಿಯ ಬಾಗಿಲು ಬೀಗ ಹೊಡೆದು ಒಳನುಗ್ಗಿರುವ ಕಳ್ಳರು ಕಚೇರಿಯಲ್ಲಿದ್ದ 4 ಅಲ್ಮೇರಾಗಳಲ್ಲಿ 3ರ ಬೀಗ ಹೊಡೆದು 25 ಸಾವಿರ ಮೌಲ್ಯವುಳ್ಳ ಲ್ಯಾಪ್‍ಟಾಪ್ ಕಳ್ಳತನ ಮಾಡಿದ್ದಾರೆ. ಅಲ್ಲದೇ ಬಿಸಿಯೂಟಕ್ಕೆ ಬಳಸುವ ಗ್ಯಾಸ್ ಸಿಲಿಂಡರ್ ಹಾಗೂ 2 ಮೂಟೆ ಅಕ್ಕಿ ಕಳ್ಳತನವಾಗಿದೆ. ಶನಿವಾರ ಬೆಳಗ್ಗೆ 7ರ ವೇಳೆಯಲ್ಲಿ ಶಾಲೆಯ ಡಿ ಗ್ರೂಪ್ ನೌಕರ ಮುತ್ತಪ್ಪ ಅವರು ಶಾಲೆಗೆ ಆಗಮಿಸಿದಾಗ ಕಚೇರಿಯ ಬೀಗ ಹೊಡೆದಿರುವುದು ತಿಳಿದು ಬಂದಿದ್ದು, ಮುಖ್ಯ ಶಿಕ್ಷಕಿ ಚಿನ್ನಮ್ಮ ಅವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ.

ಬಳಿಕ ಮುಖ್ಯ ಶಿಕ್ಷಕಿ ಸಹ ಶಿಕ್ಷಕರು ಹಾಗೂ ಗ್ರಾಮಸ್ಥರಿಗೆ ವಿಷಯ ತಿಳಿಸಿ ಶಾಲೆಗೆ ಆಗಮಿಸಿ ಪರಿಶೀಲನೆ ನಡೆಸಿದಾಗ ಕಳ್ಳತನ ನಡೆದಿರುವುದು ದೃಢಪಟ್ಟಿದೆ. 
ಈ ಬಗ್ಗೆ  ಮುಖ್ಯ ಶಿಕ್ಷಕಿ ಚಿನ್ನಮ್ಮ ಹನೂರು ಪೋಲಿಸರಿಗೆ ದೂರು ನೀಡಿದರು. ಬಳಿಕ ಸ್ಥಳಕ್ಕಾಗಮಿಸಿದ ಪೋಲಿಸರು ಪರಿಶೀಲನೆ ನಡೆಸಿದರಲ್ಲದೇ ಶ್ವಾನದಳದಿಂದ ತಪಾಸಣೆ ನಡೆಸಿದರು. ಈ ಸಂಬಂಧ ಹನೂರು ಪೋಲಿಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News