×
Ad

100 ಸರಕಾರಿ ಶಾಲೆಗಳನ್ನು ‘ಗ್ರೀನ್ ಪವರ್ ಶಾಲೆ’ಗಳೆಂದು ಘೋಷಣೆ : ಸಚಿವ ತನ್ವೀರ್‌ಸೇಠ್

Update: 2018-02-10 21:15 IST

ಬೆಂಗಳೂರು, ಫೆ.10: ರಾಜ್ಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳಲ್ಲಿ 100 ಸರಕಾರಿ ಶಾಲೆಗಳನ್ನು ‘ಗ್ರೀನ್ ಪವರ್ ಶಾಲೆ’ಗಳೆಂದು ಘೋಷಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ವಿ.ಸುನೀಲ್‌ಕುಮಾರ್ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, 2015-16ನೆ ಸಾಲಿನ ಬಜೆಟ್‌ನಲ್ಲಿ ‘ಗ್ರೀನ್ ಪವರ್ ಶಾಲೆ’ ಘೋಷಿಸುವ ಕುರಿತು ಉಲ್ಲೇಖಿಸಲಾಗಿತ್ತು ಎಂದು ಹೇಳಿದ್ದಾರೆ.

ಐಸಿಟಿ ಹಂತ-2 ಯೋಜನೆ ಅನುಷ್ಠಾನಗೊಮಡಿರುವ ಶಾಲೆಗಳು ಹಾಗೂ ಎಸೆಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರಕ್ಕಾಗಿ ಗುರುತಿಸಲಾಗಿರುವ ಶಾಲೆಗಳನ್ನು ಆದ್ಯತೆಯ ಮೇರೆಗೆ ಇದಕ್ಕೆ ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಚಟುವಟಿಕೆಯಡಿಯಲ್ಲಿ ಆಯ್ಕೆಯಾದ ಶಾಲೆಗಳು ಹಾಗೂ ಬೆಸ್ಕಾಂರವರು ಸೋಲಾರ್ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿರುವ ಶಾಲೆಗಳು ಪುನರಾವರ್ತನೆ ಆಗಬಾರದು. ಪ್ರತಿ ಶಾಲೆಗೆ 3-5 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತನ್ವೀರ್‌ಸೇಠ್ ಹೇಳಿದ್ದಾರೆ.

ಪ್ರತಿ ಘಟಕದ ಸ್ಥಾಪನೆಗೆ ಸಾಮರ್ಥ್ಯದ ಆಧಾರ ಪ್ರತಿ ಕಿಲೋ ವ್ಯಾಟ್‌ಗೆ ಒಂದು ಲಕ್ಷ ರೂ.ಗಳಂತೆ 3-5 ಲಕ್ಷ ರೂ.ಗಳ ಅನುದಾನ ಬೇಕಾಗುತ್ತದೆ. ಸೋಲಾರ್ ವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿ ಕರ್ನಾಟಕ ಪಾರದರ್ಶಕ ಸಂಗ್ರಹಣ ಕಾಯ್ದೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಸೋಲಾರ್ ವಿದ್ಯುತ್ ಘಟಕಗಳಿಗೆ ಕೇಂದ್ರ ಸರಕಾರದಿಂದ ಹಾಗೂ ರಾಜ್ಯ ಸರಕಾರದಿಂದ ದೊರೆಯುವ ರಿಯಾಯಿತಿಗಳನ್ನು ಪಡೆಯಬೇಕು. ಸೋಲಾರ್ ವಿದ್ಯುತ್ ಘಟಕಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಸೋಲಾರ್ ವಿದ್ಯುತ್ ಘಟಕಗಳ ಅಳವಡಿಕೆಗೆ ಸಂಬಂಧಿಸಿದಂತೆ ಕ್ರೆಡಿಲ್‌ಗೆ ಸಲ್ಲಿಸಿ ಅಗತ್ಯ ರಿಯಾಯಿತಿ ಪಡೆಯಬೇಕು ಎಂದು ತನ್ವೀರ್‌ಸೇಠ್ ಹೇಳಿದ್ದಾರೆ.

ಈ ಕಾರ್ಯಕ್ರಮ ಅನುಷ್ಠಾನಗೊಳಿಸುವುದರಿಂದ ಶಾಲೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಿದಂತಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುವುದಿಲ್ಲ. ಹಾಗೂ ಹೆಚ್ಚುವರಿ ವಿದ್ಯುತ್‌ನ್ನು ಕೆಪಿಟಿಸಿಎಲ್ ಖರೀದಿಸುವುದರಿಂದ ಬರುವ ಆದಾಯವನ್ನು ಶಾಲಾ ಪ್ರಗತಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News