×
Ad

ಮಂಗಳೂರು ಅಥವಾ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಪ್ರತಿಮೆ ನಿರ್ಮಾಣವಾಗಲಿ : ಎಚ್.ಡಿ.ದೇವೇಗೌಡ

Update: 2018-02-10 21:24 IST

ಮೈಸೂರು,ಫೆ.10:  ಪೋರ್ಚುಗೀಸರಿಗೆ ಸಡ್ಡು ಹೊಡೆದು ಸ್ವಾಭಿಮಾನದಿಂದ ಹೋರಾಟ ನಡೆಸಿದ ರಾಣಿ ಅಬ್ಬಕ್ಕಳ ಇತಿಹಾಸವನ್ನು ಮಲ್ಲಿಗೆ ನಗರಿಯಲ್ಲಿ ಪಸರಿಸುವುದಲ್ಲದೆ, ಕನ್ನಡ ನಾಡಿನ ಕರಾವಳಿ ತೀರದ ಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯದ ಸೊಬಗನ್ನು ಇತರರಿಗೆ ಪರಿಚಯಿಸುವ ಮಹೋನ್ನತ ಉದ್ದೇಶದಿಂದ ನಗರದಲ್ಲಿ ಆಯೋಜಿಸಿರುವ ರಾಣಿ ಅಬ್ಬಕ್ಕ ಸಾಂಸ್ಕೃತಿಕ ಉತ್ಸವಕ್ಕೆ ಶನಿವಾರ ಅದ್ಧೂರಿಯಾಗಿ ಆರಂಭವಾಯಿತು. 

ದಕ್ಷಿಣ ಕನ್ನಡ ಜಿಲ್ಲಾ ಸಂಘ, ಮೈಸೂರಿನಲ್ಲಿರುವ ಕರಾವಳಿ ಮೂಲದ ಸಂಸ್ಥೆಗಳ ಸಹಯೋಗದಲ್ಲಿ, ಮಂಗಳೂರಿನ ಉಳ್ಳಾಲದ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಸಹಕಾರದೊಂದಿಗೆ ಆಯೋಜಿಸಿರುವ ಎರಡು ದಿನಗಳ ರಾಣಿ ಅಬ್ಬಕ್ಕ ಸಾಂಸ್ಕೃತಿಕ ಉತ್ಸವಕ್ಕೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಬೃಹತ್ ಮಂಟದ ಪರಶುರಾಮ ವೇದಿಕೆಯಲ್ಲಿ ಮಾಜಿ ಪ್ರಧಾನಿ, ಜಾತ್ಯತೀತ ಜನತಾದಳ ವರಿಷ್ಠ ಎಚ್.ಡಿ.ದೇವೇಗೌಡ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ನಾವು ಅಧಿಕಾರದಲ್ಲಿದ್ದಾಗ ಕೂಡ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕನನ್ನು ಮರೆತಿದ್ದೆವು. ಸ್ವಾತಂತ್ರ್ಯ ಹೋರಾಟಗಾರರಾದ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ಸ್ಮರಿಸುವಂತೆಯೇ ಅಬ್ಬಕ್ಕನನ್ನು ನೆನಪು ಮಾಡಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಅವರು ಇತಿಹಾಸದಿಂದಲೇ ಮರೆತು ಹೋಗುತ್ತಾರೆ ಎಂದು ಎಚ್ಚರಿಸಿದರು. 

ಮಂಗಳೂರು ಅಥವಾ ಉಳ್ಲಾಲದಲ್ಲಿ ರಾಣಿ ಅಬ್ಬಕ್ಕ ಪ್ರತಿಮೆಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.

ಮಂಗಳೂರಿನಲ್ಲಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸ್ಥಾಪಿಸಿರುವ ಡಾ.ಆಶಾಲತಾ ಎಸ್.ಸುವರ್ಣ ಮತ್ತು ತುಕಾರಾಮ ಪೂಜಾರಿ ದಂಪತಿಗೆ ದೇವೇಗೌಡ ಮತ್ತಿತರ ಗಣ್ಯರು ರಾಣಿ ಅಬ್ಬಕ್ಕ ಪ್ರಶಸ್ತಿ ಪ್ರದಾನ ಮಾಡಿದರು.

ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವರಾದ ಡಾ.ಗೀತಾ ಮಹದೇವಪ್ರಸಾದ್ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಹಾರ, ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಮಾತನಾಡಿದರು. 

ರಾಣಿ ಅಬ್ಬಕ್ಕ ಸಾಂಸ್ಕೃತಿಕ ಉತ್ಸವ ಸಮಿತಿ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದೆ ಶಾಲಾಪಠ್ಯದಲ್ಲಿ ರಾಣಿ ಅಬ್ಬಕ್ಕ ಚರಿತ್ರೆ ಕುರಿತ ಪಾಠ ಇತ್ತು. ಇತ್ತೀಚೆಗೆ ಅದನ್ನು ಕೈಬಿಡಲಾಗಿದೆ. ಮತ್ತೆ ಅದನ್ನು ಪಠ್ಯಕ್ಕೆ ಸೇರಿಸಲು ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಉಳ್ಳಾಲದ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿದರು. ರಘುಲೀಲಾ ಸಂಗೀತ ಶಾಲೆ ತಂಡದವರು ನಾಡಗೀತೆ ಹಾಡಿದರು. ಅರುಣ್ ಉಳ್ಳಾಲ್ ನಿರೂಪಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮೈಸೂರು ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ದಕ್ಷಿಣ ಕನ್ನಡ ಜಿಲ್ಲಾ ಸಂಘದ ಅಧ್ಯಕ್ಷ ವಿ.ಶ್ರೀನಿವಾಸ ರಾವ್, ಭಾಸ್ಕರ್, ಧನಲಕ್ಷ್ಮಿ, ಕೃಷ್ಣಕುಮಾರ್, ರವಿಶಾಸ್ತ್ರಿ, ಅಬ್ದುಲ್, ಮಹೇಶ್ ಕಾಮತ್,  ಪ್ರೊ.ಕೆ.ರಾಮಮೂರ್ತಿ ರಾವ್, ಅಮಿತ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಪಿ.ಎನ್.ಕುಂದರ್, ಎನ್.ವಿ.ಹೆಗ್ಡೆ, ಡಿ.ಚಂದ್ರಶೇಖರ್, ಸುಧೀರ್ ಶೆಟ್ಟಿ, ಜನಾರ್ಧನ್ ಬೆಮೆಲ್, ಎ.ಎಸ್.ಬಿ.ಭಂಡಾರಿ, ರತ್ನರಾಜ್, ಜಯಚಂದ್ರ, ಅನಂತಗೌಡ, ಎಂ.ಕೆ.ಪುರಾಣಿಕ್ ಸೇರಿದಂತೆ ಮಂಗಳೂರು, ಉಡುಪಿ ಜಿಲ್ಲೆಗಳ ಜನರು ಕೂಡ ಪಾಲ್ಗೊಂಡಿದ್ದರು.

ಶನಿವಾರ ಉತ್ಸವದಲ್ಲಿ ಕರಾವಳಿ ಜಿಲ್ಲೆಗಳ ಪರಂಪರೆ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ತುಳುನಾಡ ಸಂಸ್ಕೃತಿ ಸಮೂಹ ನೃತ್ಯ, 'ಕರ್ನಾಟಕದ ವೀರರಾಣಿಯರು' ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News