ಸುಬ್ಬಣ್ಣನೂ ‘ಶ್ರೀರಂಗ ಸಂಪದ’ವೂ....

Update: 2018-02-10 18:38 GMT

ಜಿ.ಎಸ್.ಆಮೂರರು ವರ್ಣಿಸಿರುವಂತೆ, ಸುಬ್ಬಣ್ಣನಿಗೆ ಶ್ರೀರಂಗರಲ್ಲಿ ಆಂಜನೇಯ ಭಕ್ತಿ. ಶ್ರೀರಂಗರ ಕಷ್ಟಸುಖಗಳ ಕಾಳಜಿಮಾಡುವುದರಿಂದ ಹಿಡಿದು ಅವರ ಹಲವಾರು ನಾಟಕಗಳ ನಿರ್ದೇಶನ, ಅವರ ದಾಖಲೆಗಳ ಸಂಗ್ರಹ ಮೊದಲಾಗಿ ಹಲವು ರೀತಿರಿವಾಜುಗಳಲ್ಲಿ ಈ ‘ಭಕ್ತಿ’ ಪ್ರಕಟಗೊಂಡಿರುವುದುಂಟು. ಶ್ರೀರಂಗರ ಬಗ್ಗೆ ಒಂದು ವಸ್ತು ಸಂಗ್ರಹಾಲಯ ತುಂಬುವಷ್ಟು ಸಾಮಗ್ರಿಯನ್ನು ಕಲೆಹಾಕಿರುವ ರಂಗ ದಾಖಲೆಯ ಹರಿಕಾರ ವೆಂಕಟಸುಬ್ಬಯ್ಯ ‘ಸುಬ್ಬಣ’ನ ಹಲವಾರು ವರ್ಷಗಳ ಕನಸು: ಶ್ರೀರಂಗ ಸಂಪದ ಪ್ರಕಟನೆ.

ಬೆಂಗಳೂರು ಮಹಾನಗರದಲ್ಲಿ ರಂಗಭೂಮಿ ಎಂದರೆ ರವೀಂದ್ರ ಕಲಾಕ್ಷೇತ್ರ ಎನ್ನುವ ಒಂದು ಕಾಲ ಇತ್ತು. ಈಗ ಹಾಗಿಲ್ಲ. ನಗರದ ವಿವಿಧ ಬಡಾವಣೆಗಳಲ್ಲಿ ಹೊಸ ರಂಗಮಂದಿರಗಳು ತಲೆ ಎತ್ತಿವೆ. ಇವುಗಳಲ್ಲಿ ಮುಖ್ಯವಾಗಿ ಎರಡು ರಂಗಮಂದಿರಗಳು ತಮ್ಮ ಕ್ರಿಯಾಶೀಲತೆಯಿಂದ ನಮ್ಮ ಗಮನ ಸೆಳೆಯುತ್ತವೆ.ಒಂದು, ಜೆ.ಪಿ.ನಗರದ ‘ರಂಗ ಶಂಕರ’. ಎರಡನೆಯದು, ಬೆಂಗಳೂರು ವಿಶ್ವವಿದ್ಯಾನಿಲಯದ ಸಮೀಪ ಇರುವ ಮಲ್ಲತ್ತಹಳ್ಳಿಯ ಕಲಾಗ್ರಾಮದ ರಂಗ ಮಂದಿರ. ‘ರಂಗ ಶಂಕರ’ದಲ್ಲಿ ನಿತ್ಯನಿರಂತರವಾಗಿ ಹೊಸನಾಟಕಗಳು ಪದರ್ಶನಗೊಳ್ಳುತ್ತಿವೆ. ಈ ಮುಖೇನ ಅಭಿನಯ, ನಿರ್ದೇಶನ, ಬೆಳಕು, ರಂಗಸಜ್ಜಿಕೆ, ರಂಗ ಸಂಗೀತ ಮೊದಲಾದವುಗಳಲ್ಲಿ ಹೊಸಹೊಸ ಪ್ರತಿಭೆಗಳ ಪರಿಚಯವಾಗುತ್ತಿದೆ. ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲೂ ಬಹುತೇಕ ನಾಟಕಗಳ ಪ್ರದರ್ಶನ ತಪ್ಪದೆ ನಡೆಯುತ್ತಿದೆ. ಇತ್ತೀಚೆಗೆ ಇಲ್ಲಿ ಹಲವು ದಿಗಳ ಕಾಲ ‘ಮಲೆಗಳಲ್ಲಿ ಮದುಮಗಳು’ ಅಹೋರಾತ್ರಿ ನಾಟಕ ಪ್ರದರ್ಶನಗೊಂಡದ್ದು ಒಂದು ಅಭೂತಪೂರ್ವ ನಿದರ್ಶನ.

ಬೆಂಗಳೂರು ಮಹಾನಗರದಲ್ಲಿ ಕನ್ನಡ ರಂಗಭೂಮಿ ಪುನರುಜ್ಜೀವ ಗೊಳ್ಳುತ್ತಿರುವುದು ಹಾಗೂ ‘ಸಿಲಿಕಾನ್ ಸಿಟಿ’ಯ ಹೊಸ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವುದು ಸ್ವಾಗತಾರ್ಹವಾದ ಬೆಳವಣಿಗೆ. ಈ ಎಲ್ಲ ಹೊಸ ಬೆಳೆ ಮಧ್ಯೆ ಹಳೆಯ ತಲೆಗಳ ಲೆಕ್ಕ ಹಿಡಿಯುವವರು ಯಾರು? ಅವರನ್ನು ಸ್ಮರಿಸುವವರು ಯಾರು? ನಾಣಿ, ಪದ್ದಣ್ಣ, ಸುಬ್ಬಣ್ಣ, ಸೂತ್ರಧಾರ ರಾಮಯ್ಯ, ದೀವಟಿಗೆ ಕೃಷ್ಣಪ್ಪ ಎಂದರೆ, ‘ಯಾರಿವರೆಲ್ಲ?’ ಎಂದು ನಮ್ಮ ‘ರಂಗಶಂಕರ’-ಕಲಾಗ್ರಾಮಗಳ ಹೊಸಪೀಳಿಗೆ ಕಕವಾಗಳಂತೆ ಕಣ್ಕಣ್ ಬಾಯ್ಬಾಯಿ ಬಿಡಬಹುದು. ಕಪ್ಪಣ್ಣ, ಜೆ.ಲೋಕೇಶ್ ಒಂದು ಅಪವಾದ. ಅಧಿಕೃತ ಕಾರಣಗಳಿಂದಾಗಿ ಇನ್ನೂ ಚಲಾವಣೆಯಲ್ಲರುವ ಹಳೆಯ ಮುಖಗಳು. ಈ ನಾಣಿ, ಪದ್ದಣ್ಣ, ಸುಬ್ಬಣ್ಣ, ದೀವಟಿಗೆ ಕೃಷ್ಣಪ್ಪಇವರೆಲ್ಲ ಅರವತ್ತರ ದಶಕದ ಆರಂಭದಿಂದ ಎಪ್ಪತ್ತು ಎಂಬತ್ತರ ವೈಭವದ ದಿನಗಳವರೆಗಿನ ಹೆಸರಾಂತ ರಂಗಕರ್ಮಿಗಳು. ಸೂತ್ರಧಾರ ರಾಮಯ್ಯ ರಂಗಭೂಮಿಗಾಗಿ ಆ ದಿನಗಳಲ್ಲಿ ‘ಸೈಕಲ್’ ಹೊಡಯುತ್ತಿದ್ದವರೆಲ್ಲರ ಜಾತಕಗಳನ್ನು ಜಾಲಾಡುತ್ತಿದ್ದ ‘ನಮ್ಮಿಳಗಣ ವಿಮರ್ಶಕ’(ಇನಸೈಡರ್ ಕ್ರಿಟಿಕ್). ಆ ದಿನಗಳಲ್ಲಿ ರವೀಂದ್ರ ಕಲಾಕ್ಷೇತ್ರದ ಕಲ್ಲಿನ ಗೋಡಗಳಿಗೆ ಹೀಗೊಂದು ಠೇಕಾ ಹೊಡೆದರೆ, ಅವು ‘ಪದ್ದಣ್ಣ ಸುಬ್ಬಣ್ಣ’ ಎಂದು ಧ್ವನಿ ತರಂಗಳನ್ನೆಬ್ಬಿಸುತ್ತಿದ್ದವು. ನಾಣಿ, ಪದ್ದಣ್ಣ ಹವ್ಯಾಸಿ ರಂಗಭೂಮಿಯಲ್ಲ್ಲಿ ತಮ್ಮ ಛಾಪನ್ನು ಸ್ಪಷ್ಟವಾಗಿ ಮೂಡಿಸಿದವರು, ನಮ್ಮನ್ನಗಲಿ ವರ್ಷಗಳಾದವು. ಉಳಿದ ಗೆಳೆಯರಿಗಾಗಿ ಬೆಂಗಳೂರಿನ ಬಡಾವಣೆಗಳಲ್ಲಿ ದೀಪ ಹಿಡಿದು ಹುಡುಕ ಬೇಕು. ಹೀಗಿರಲು ಒಂದೆರಡು ತಿಂಗಳ ಹಿಂದೆ ಸುಬ್ಬಣ್ಣ ಫೋನ್ ಮಾಡಿದ್ದರು-ನನ್ನ ವಿಳಾಸಕ್ಕಾಗಿ. ತಾವು ಸಂಪಾದಿಸಿರುವ ‘ಶ್ರೀರಂಗ ಸಂಪದ’ವನ್ನು ತುರ್ತಾಗಿ ನನಗೆ ತಲುಪಿಸುವ ತಹತಹ ಅವರ ದನಿಯಲ್ಲಿತ್ತು. ಸುಬ್ಬಣ್ಣನ ನಿಜನಾಮಧೇಯ ಎಚ್.ವಿ. ವೆಂಕಟಸುಬ್ಬಯ್ಯ ಅಂತ. ರಂಗಭೂಮಿ ವಲಯಗಳಲ್ಲಿ ಹಾಗಂತ ಕರೆದರೆ, ‘‘ಯಾರವರು ಅಂತ?’’ ಕಿವಿ ಏರಿಸ್ತಾರೆ. ನಿಧಾನವಾಗಿ ಜ್ಞಾನೋದಯವಾಗಿ ‘‘ಓ...ನಮ್ಮ ಸುಬ್ಬಣ್ಣಾನಾ’’ ಅಂತ ಅವರ ಸಾಧನೆಗಳ ಖಾನೆಶುಮಾರಿ ಕಿರ್ದಿ ತೆಗೀತಾರೆ. ಸೌಂಡ್ ಇಂಜಿನಿಯರಿಂಗ್ ಹಾಗೂ ಡ್ರಾಮಾದಲ್ಲಿ ಡಿಪ್ಲೊಮಾದಾರನಾದ ವೆಂಕಟಸುಬ್ಬಯ್ಯ ಉರುಫ್ ಸುಬ್ಬಣ್ಣನಿಗೂ ಕನ್ನಡ ಹವ್ಯಾಸಿ ರಂಗಭೂಮಿಗೂ 1950ರಿಂದಲೇ ಶುರವಾದ ನಂಟು. ನಾಟಕ ರಚನೆ, ನಾಟಕ ನಿರ್ದೇಶನ, ರಂಗ ವಿನ್ಯಾಸ, ಪರದೆ ಕಟ್ಟೋದು, ಸ್ಪಾಟ್ ಹಾಕೋದು, ಹೈಸ್ಕೂಲು, ಕಾಲೇಜು ಪಡ್ಡೆಗಳಿಗೆ ರಂಗ ಶಿಕ್ಷಣ ಕೊಡೋದು-ಹೀಗೆ ರಂಗಕರ್ಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವ ಸವೆಸುತ್ತಿರುವ ರಂಗಕರ್ಮಿ ವೆಂಕಟಸುಬ್ಬಯ್ಯ ಉರುಫ್ ಸುಬ್ಬಣ್ಣ. ಈ ಸುಬ್ಬಣ್ಣನ ಇನ್ನೊಂದು ಮುಖ್ಯ ಕಾಳಜಿಯೆಂದರೆ ಕನ್ನಡ ರಂಗಭೂಮಿಗೆ ಸಂಬಂಧಿಸಿದ ಕಾಗದಪತ್ರ, ಛಾಯಾಚಿತ್ರಗಳು, ಪೋಸ್ಟರುಗಳು, ಕರಪತ್ರಗಳು, ವಸ್ತು, ವಸ್ತ್ರ, ಉಪಕರಣ ವಿಶೇಷಗಳು ಇತ್ಯಾದಿ ಎಲ್ಲವನ್ನೂ ಸಂಗ್ರಹಿಸಿಡುವುದು. ಇದೊಂದು ಸುಬ್ಬಣ್ಣನ ರೀತಿಯ ದಾಖಲೀಕರಣ-ಡಾಕ್ಯುಮೆಂಟೇಶನ್. ರಂಗಭೂಮಿಯ ಪೋಸ್ಟರುಗಳು, ಕರಪತ್ರಗಳು, ಬ್ರೋಷರುಗಳು, ನಾಟಕಗಳ ಛಾಯಾಚಿತ್ರಗಳು, ನಾಟಕ ಪ್ರದರ್ಶನ ವಿಮರ್ಶೆಗಳು-ವರದಿಗಳು, ನಾಟಕದ ಹಸ್ತಪ್ರತಿಗಳು- ರಂಗಭೂಮಿಗೆ ಸಂಬಂಧಿಸಿದಂತೆ ಕೈಗೆ ಸಿಕ್ಕ ಮಹತ್ವದ ದಾಖಲೆಗಳೆಲ್ಲವನ್ನೂ ಸಂಗ್ರಹಿಸಿ ಕಾಪಿಡುವ ಸುಬ್ಬಣ್ಣನ ಹವ್ಯಾಸ ದಿನೇದಿನೇ ಒಂದು ಕಾಯಕವೇ ಆಗಿ ಅವರೊಂದು ರೀತಿ ಅನಧಿಕೃತ ‘ಚಾರಿತ್ರ’ಕ ದಾಖಲೆಕಾರರಾದರು. ಕನ್ನಡ ಹವ್ಯಾಸಿ ರಂಗಭೂಮಿಗೆ ಸಂಬಂಧಿಸಿದ ದಾಖಲೆ ಏನಾದರೂ ಬೇಕೆಂದರೆ, ಸುಬ್ಬಣ್ಣನನ್ನು ಕೇಳು ಎನ್ನುವಂತಾಯಿತು. ಇನ್ನು ಮನೆಯಲ್ಲೋ, ಪತ್ನಿ ಶ್ರೀಮತಿ ಶಾರದಾ ಸ್ವತಃ ಡಾಕ್ಟರಾದರೂ ಗಂಡನ ಈ ‘ಹುಚಿ’್ಚಗೆ ಅವರಲ್ಲಿ ಮದ್ದಿಲ್ಲ. ‘‘ನೋಡ್ರೀ ಸುಬ್ಬಣ್ಣ ಮನೆಯೆಲ್ಲವನ್ನೂ ಆವರಿಸಿಕೊಂಡು ಕಾಲಿಡಲೂ ಜಾಗವಿಲ್ಲದಂತೆ ಮಾಡಿದ್ದಾರೆ’’ ಎಂದು ಪರಿತಪಿಸುವಂತಾಯಿತು.

 ಈ ನಮೂನೆಯ ರಂಗಕರ್ಮಿಗೂ ನಾಟಕಕಾರ ಶ್ರೀ ರಂಗರಿಗೂ ಯಾವಜನ್ಮದ ನಂಟೋ ತಿಳಿಯದು. ಅರವತ್ತರ ದಶಕದಲ್ಲಿ ಸಾಗರದಲ್ಲಿ ಉದಯ ಕಲಾವಿದರು ಎಂಬ ಹವ್ಯಾಸಿ ನಾಟಕ ತಂಡವೊಂದಿತ್ತು. ಅದರ ಜೀವನಾಡಿ ಶ್ರೀ ಮಾಸೂರ್ ಎಂಬವರು. ಹಳೆಯ ಮೈಸೂರಿನಲ್ಲಿ ಶ್ರೀರಂಗರ ನಾಟಕಗಳನ್ನು ರಂಗಕ್ಕೆ ತಂದು ನಾಟಕಪ್ರಿಯರಿಗೆ ಪರಿಚಯಿಸಿದ ಕೀರ್ತಿಯ ಪಾಲಿನಲ್ಲಿ ಮೊದಲಿಗರು ಶ್ರೀ ಮಾಸೂರರು. ನಂತರ ಶ್ರೀರಂಗರ ನಾಟಕಗಳನ್ನು ಬೆಂಗಳೂರು ನಗರದಲ್ಲಿ ಹೆಚ್ಚಾಗಿ ಪ್ರದರ್ಶಿಸಿದ ಖ್ಯಾತಿ ವೆಂಕಟಸುಬ್ಬಯ್ಯನವರದು. ಹೀಗಾಗಿಯೇ ಮೈಸೂರಿನ ನಾಟಕಕಾರ ಡಾ.ರತ್ನರಂಥವರು ವೆಂಕಟಸುಬ್ಬಯ್ಯನವರನ್ನು ‘ಬೆಂಗಳೂರಿನ ಮಾಸೂರ್’ ಎಂದು ಪ್ರೀತಿಯಿಂದ ಕರೆಯುತ್ತಾರೆ. ಶ್ರೀರಂಗರು ಬೆಂಗಳೂರಿಗೆ ಬಂದು ನೆಲೆಸಿದ ಮೇಲಂತೂ ಅವರೊಂದಿಗೆ ವೆಂಕಟಸುಬ್ಬಯ್ಯನವರ ಈ ನಂಟು ಆಪ್ತವಾಗಿ ಇನ್ನಷ್ಟು ಗಟ್ಟಿಯಾಗಿ ಅಂಟಿಕೊಂಡಿತ್ತು. ಜಿ.ಎಸ್.ಆಮೂರರು ವರ್ಣಿಸಿರುವಂತೆ, ಸುಬ್ಬಣ್ಣನಿಗೆ ಶ್ರೀರಂಗರಲ್ಲಿ ಆಂಜನೇಯ ಭಕ್ತಿ. ಶ್ರೀರಂಗರ ಕಷ್ಟಸುಖಗಳ ಕಾಳಜಿಮಾಡುವುದರಿಂದ ಹಿಡಿದು ಅವರ ಹಲವಾರು ನಾಟಕಗಳ ನಿರ್ದೇಶನ, ಅವರ ದಾಖಲೆಗಳ ಸಂಗ್ರಹ ಮೊದಲಾಗಿ ಹಲವು ರೀತಿರಿವಾಜುಗಳಲ್ಲಿ ಈ ‘ಭಕ್ತಿ’ ಪ್ರಕಟಗೊಂಡಿರುವುದುಂಟು. ಶ್ರೀರಂಗರ ಬಗ್ಗೆ ಒಂದು ವಸ್ತು ಸಂಗ್ರಹಾಲಯ ತುಂಬುವಷ್ಟು ಸಾಮಗ್ರಿಯನ್ನು ಕಲೆಹಾಕಿರುವ ರಂಗ ದಾಖಲೆಯ ಹರಿಕಾರ ವೆಂಕಟಸುಬ್ಬಯ್ಯ ‘ಸುಬ್ಬಣ’ನ ಹಲವಾರು ವರ್ಷಗಳ ಕನಸು: ಶ್ರೀರಂಗ ಸಂಪದ ಪ್ರಕಟನೆೆ.

ನಟ, ನಿರ್ದೇಶಕ, ನಾಟಕಕಾರ, ಕಾದಂಬರಿಕಾರ, ನಾಟ್ಯಶಾಸ್ತ್ರ ಕೋವಿದ ಇತ್ಯಾದಿ ವಿದ್ಯಾಸಂಪನ್ನರಾದ ಆದ್ಯರು ಕಾಳಿದಾಸನಿಂದ ಹಿಡಿದು ಅಡಿಗರವರೆಗೆ ಕಾವ್ಯವನ್ನು ಆಸಕ್ತಿಯಿಂದ ಅಭ್ಯಾಸಮಾಡಿ ಬರೆದಿದ್ದಾರೆ. ಆದೇ ಶ್ರೀರಂಗರ ಬಗ್ಗೆ ನಾವು ಅಭ್ಯಾಸ ಮಾಡುವುದು ಮುಖ್ಯ ಅಲ್ಲವೇ? ಎಂಬ ತೀವ್ರ ಕಾಳಜಿಯಿಂದ ಅಧ್ಯಯನಾಸಕ್ತರಿಗೆ ನೆರವಾಗುವಂಥ ಆಕರ ಗ್ರಂಥವೊಂದನ್ನು ಪ್ರಕಟಿಸುವ ಆಸೆ ಸುಬ್ಬಣ್ಣನ ಮನದಲ್ಲಿ ಮೊಳೆತು ಎಷ್ಟೋ ವರ್ಷಗಳಾದವು. ಅದೀಗ ಕೃತಿ ರೂಪದಲ್ಲಿ ಪ್ರಕಟಗೊಂಡಿದೆ.

ಶ್ರೀರಂಗರು ನವೋದಯ ಕಾಲಘಟ್ಟದ ಕನ್ನಡದ ಪ್ರಮುಖ ನಾಟಕಕಾರರು, ಕಾದಂಬರಿಕಾರರು. ರಂಗಾಚಾರ್ಯ ವಾಸುದೇವಾ ಚಾರ್ಯ ಜಾಗೀರದಾರ ಅವರ ಹುಟ್ಟು ಹೆಸರು. ನಂತರ ಆದ್ಯ ರಂಗಾಚಾರ್ಯ ಎಂದು ಹೆಸರು ಬದಲಾಯಿಸಿಕೊಂಡು ‘ಶ್ರೀ ರಂಗ’ ಆದರು. ಸಂಸ್ಕೃತ ಪ್ರಾಧ್ಯಾಪಕರಾಗಿ ಒಂದಷ್ಟು ಕಾಲ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ (1947-48) ದುಡಿದವರು. ಸಾಹಿತ್ಯ ಜೀವಿಯಾದ ಶ್ರೀರಂಗರು ಕಾದಂಬರಿ ಮೊದಲಾಗಿ ಹಲವಾರು ಗದ್ಯ ಕೃತಿಗಳನ್ನು ರಚಿಸಿದ್ದರೂ ಅವರ ಸೃಜನಶೀಲ ಪ್ರತಿಭೆ ಹೆಚ್ಚಾಗಿ ಅಭಿವ್ಯಕ್ತಗೊಂಡಿರುವುದು ನಾಟಕ ಸಾಹಿತ್ಯದಲ್ಲಿ. ಅವರು ನಾಟಕಕಾರಾಗಿಯೇ ಕನ್ನಡ ಸಾರಸ್ವತ ಲೋಕದಲ್ಲಿ ಸುಪರಿಚಿತರು. ನಲವತ್ತೈದಕ್ಕೂ ಹೆಚ್ಚು ಪೂರ್ಣಾವಧಿ ನಾಟಕಗಳನ್ನೂ ಅರವತ್ತೇಳು ಏಕಾಂಕ ನಾಟಕಗಳನ್ನೂ ರಚಿಸಿರುವ ಶ್ರೀರಂಗರ ಮುಖ್ಯ ಕಾಳಜಿ ಮತ್ತು ಕಳಕಳಿ ಸಾಹಿತ್ಯ ಮಾಧ್ಯಮದ ಮುಖೇನ ಸಾಮಾಜಿಕ ಸುಧಾರಣೆ. ಈ ಸುಧಾರಣೆಯ ಮಾರ್ಗವೂ ವಿಡಂಬನೆಯ ಮೂಲಕವೇ. ಸಹಜವಾಗಿಯೇ ಹೆಚ್ಚು ಜನರಿಗೆ ತಲುಪುವ ರಂಗಭೂಮಿ ಸೂಕ್ತ ಮಾಧ್ಯಮ. ಅವರ ಸಾಮಾಜಿಕ ವಿಡಂಬನೆ, ಅದರ ಹಿಂದಿರುವ ಸುಧಾರಣಾ ಕಳಕಳಿ 1934ರಲ್ಲಿ ಪ್ರಕಟವಾದ ‘ಹರಿಜನ್ವಾರ’ ನಾಟಕದಿಂದಲೇ ಶುರುವಾಗಿದೆ. ಶ್ರೀರಂಗರ ನಾಟಕ ಸಾಹಿತ್ಯ ಹಾಗೂ ಕಾದಂಬರಿ ಇನ್ನಿತರ ಗದ್ಯ ಸಾಹಿತ್ಯವನ್ನು ಇಡಿಯಾಗಿ ಗ್ರಹಿಸಿ ಮೌಲ್ಯದ ನಿಕಷಕ್ಕೆ ಒಡ್ಡುವಂಥ ಕೆಲಸ ಇನ್ನೂ ಆಗಬೇಕಾಗಿದೆ. ಶ್ರೀರಂಗರ ವ್ಯಕ್ತಿತ್ವ ಹಾಗೂ ಅವರ ಸಾಹಿತ್ಯ ಕುರಿತು ಬಿಡಿಬಿಡಿಯಾಗಿ ಸಾವಿರಾರು ಪುಟಗಳಷ್ಟು ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪರಿಚಯ ಸ್ವರೂಪದ ಎರಡು ಮೂರು ಪುಸ್ತಕಗಳೂ (ನೆಗಳೂರು ರಂಗನಾಥ, ಎನ್ಕೆ ಅವರ ಕೃತಿಗಳು ಹಾಗೂ ಶ್ರೀಮತಿ ವಿಜಯಾ ಅವರ ಪಿಎಚ್.ಡಿ. ಸಂಪ್ರಬಂಧ ಗ್ರಂಥ) ಬಂದಿವೆ. ನಾಟಕ, ಕಾದಂಬರಿ, ಪ್ರಬಂಧ, ನಾಟ್ಯ ಶಾಸ್ತ್ರ, ಸಾಹಿತಿಯ ಆತ್ಮ ಜಿಜ್ಞಾಸೆ, ಗೀತಾ ಗಾಂಭೀರ್ಯ-ಹೀಗೆ ಶ್ರೀರಂಗರ ಸಾಹಿತ್ಯ ಸೃಷ್ಟಿ ಅಗಾಧವಾದದ್ದು. ಈ ಪರಿಯ ಸಮೃದ್ಧ ಸಾಹಿತ್ಯದ ಸಮಗ್ರ ಅವಲೋಕನ ಮಾಡಿಸುವ ಪ್ರಯತ್ನ ಇನ್ನೂ ನಡೆದಿಲ್ಲ ಎಂಬುದು ಕನ್ನಡ ಸಹೃದಯತೆಯ ಆಲಸ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಖ್ಯಾತ ವಿಮರ್ಶಕ ಜಿ.ಎಸ್.ಆಮೂರರ ಶ್ರೀರಂಗ ಸಾಹಿತ್ಯ ಸಮೀಕ್ಷೆ-‘ಆಧುನಿಕ ಕನ್ನಡ ಸಾಹಿತ್ಯದ ವಿರಾಟ ಪುರುಷ’- ಸ್ವಲ್ಪಮಟ್ಟಿಗೆ ಈ ಕೊರತೆಯನ್ನು ತುಂಬುತ್ತದೆ. ಏಕೆಂದರೆ ಆಮೂರರ ಅಧ್ಯಯನ ಸಹಜವಾಗಿಯೇ ಶ್ರೀರಂಗರ ನಾಟಕ ಸಾಹಿತ್ಯ ಮತ್ತು ಕಾದಂಬರಿ ಪ್ರಪಂಚದಲ್ಲಿ ಕೇಂದ್ರಿತವಾಗಿದೆ. ಶ್ರೀರಂಗರ ಸೃಜನಶೀಲ ಸಾಹಿತ್ಯವನ್ನು ಕನ್ನಡದ ಸಾಂಸ್ಕೃತಿಕ ಸಂದರ್ಭದಲ್ಲಿ ವಿವೇಚಿಸಿರುವ ಆಮೂರರು ಶ್ರೀರಂಗರನ್ನು ಆಧುನಿಕ ಕನ್ನಡ ಸಾಹಿತ್ಯದ ‘ವಿರಾಟ ಪುರುಷ’ರೆಂದು ಕರೆದಿದ್ದಾರೆ. ಗ್ರಂಥದ ಹೆಸರೂ ‘ಆಧುನಿಕ ಕನ್ನಡ ಸಾಹಿತ್ಯದ ವಿರಾಟ ಪುರುಷ’ ಆಗಿದ್ದು, ಶೀರ್ಷಿಕೆ ಕನ್ನಡ ಸಾರಸ್ವತ ಲೋಕದಲ್ಲಿ ಶ್ರೀರಂಗರ ಸ್ಥಾನದ ಧ್ವನಿಸೂಚಿಯೂ ಆಗಿ ನಮ್ಮ ಗಮನ ಸೆಳೆಯುತ್ತದೆ. ಸಾಹಿತ್ಯ ವಿರಾಟ್ ರೂಪಿಯಾಗಿ ಎಲ್ಲವನ್ನೂ ಒಳಗೊಳ್ಳಬೇಕು ಎನ್ನುತ್ತಾರೆ ಬೇಂದ್ರೆ. ಶ್ರೀರಂಗರ ಸಮೃದ್ಧ ಸಾಹಿತ್ಯ ಅಂಥ ವಿರಾಟ್ ಸ್ವರೂಪದ್ದು, ಕ್ರಾಂತಿಕಾರಕ ದರ್ಶನದ್ದು. ಎಂದೇ ಆಮೂರರು ಶ್ರೀರಂಗರಿಗೆ ಹಚ್ಚಿರುವ ಈ ವಿರಾಟ್‌ತನ ಯೋಗ್ಯವಾದ ವಿಶೇಷಣವೇ ಆಗಿದೆ. ಸಾಹಿತ್ಯ ಮತ್ತು ಅದರ ರಸಾನುಭವ ಕುರಿತ ಶ್ರೀರಂಗರ ಪರಿಕಲ್ಪನೆಯಲ್ಲೇ ಈ ಒಂದು ವಿರಾಟ್ ದರ್ಶನವಿದೆ. ಶ್ರೀರಂಗರು ಹೇಳುತ್ತಾರೆ:

‘‘ಯಾವುದು ಗೀತೆಯಲ್ಲಿ ಹೇಳಿದಂತೆ ಪರಿಣಾಮೇ ಸುಖಾವಹಮ್(‘ಕೊನೆಗೆ ಸುಖ ತರವುದು’)ಅದೇ ಸಾಹಿತ್ಯದ ಸವಿಯು. ಸೃಷ್ಟಿಯು ಬೆಳೆಯುವುದು ಉಳಿಯುವುದು ಈ ಸವಿಯಿಂದಲೇ; ನಮ್ಮ ಅನುಭವದಲ್ಲಿ ನಾವು ಅದಕ್ಕೆ ಆನಂದವೆಂದು ಹೇಳುವುದುಂಟು.ಸಂಸಾರದಲ್ಲಿ ಆನಂದವನ್ನನುಭವಿಸುವ ಶಕ್ತಿ ಇದ್ದವನು ಸಾಹಿತಿಯು.ಆನಂದದ ಅನುಭವವೇ ಸಾಹಿತ್ಯವು.’’  

ಶ್ರೀರಂಗರ ವಿರಾಟ್ ಸಾಹಿತ್ಯವನ್ನು ಅವರದೇ ಆದ ಮೇಲಿನ ಮಾನದಂಡದ ನಿಕಷಕ್ಕೆ ಒಡ್ಡಿ ಅರ್ಥೈಸಲು ಉಪಯುಕ್ತ ಆಕರ ಗ್ರಂಥವಾಗಿ ಒದಗಿ ಬಂದಿದೆ ಶ್ರೀರಂಗ ಸಂಪದ. 624 ಪುಟಗಳ ಈ ಬೃಹದ್ಗ್ರಂಥ ಶ್ರೀರಂಗರ ಸಾಹಿತ್ಯ ವಿಮರ್ಶೆ, ವ್ಯಕ್ತಿತ್ವ ದರ್ಶನ/ಸಾಧನೆ, ಸಂದರ್ಶನ ಹೀಗೆ ಮೂರು ಭಾಗಗಳನ್ನೊಳಗೊಂಡಿದ್ದು ನೂರ ಆರು ಲೇಖನಗಳು ಇಲ್ಲಿವೆ. ಶ್ರೀರಂಗರ ಸಮಕಾಲೀನರಿಂದ ಹಿಡಿದು ನಂತರದ ತಲೆಮಾರುಗಳ ಲೇಖಕರುಗಳು ಬರೆದಿರುವ ಇಲ್ಲಿನ ಲೇಖನಗಳ ಹರಹು, ಆಯಾಮಗಳೂ ವಿರಾಡ್ರೂಪದ್ದು. ಶ್ರೀರಂಗರು ಮತ್ತು ಅವರ ಸಾಹಿತ್ಯದ ವಿಪುಲ ಮಾಹಿತಿ ಈ ಗ್ರಂಥದಲ್ಲಿದೆ. ಬಹಳ ವರ್ಷಗಳಿಂದ ಕುಂಟುತ್ತಾ ಸಾಗಿದ್ದ ‘ಶ್ರೀರಂಗ ಸಂಪದ’ ಕೊನೆಗೂ ಪ್ರಕಟಣೆಗೆ ಸಿದ್ಧವಾಗುವುದಕ್ಕೂ ವೆಂಕಟಸುಬ್ಬಯ್ಯ‘ಸುಬ್ಬಣ್ಣ’ನಿಗೆ ಪ್ರಾಯ ಎಂಬತ್ತು ತುಂಬುವುದಕ್ಕೂ ಯೋಗಾಯೋಗವೆಂಬಂತೆ ತಳುಕುಬಿತ್ತು. ಗೆಳೆಯರ ಹುಮ್ಮಸ್ಸೂ ಗರಿಗೆದರಿತು. ನಮ್ಮ ಸುಬ್ಬಣ್ಣ-ರಂಗ ದಾಖಲೆಯ ಹರಿಕಾರ’ ಅಭಿನಂದನಾ ಗ್ರಂಥ ಸಿದ್ಧವಾಯಿತು.

ಸುಬ್ಬಣ್ಣನನ್ನು ಹತ್ತಿರದಿಂದ-ಒಂದು ಮಾರು ದೂರದಿಂದ ಕಂಡಿರುವ ಎಪ್ಪತ್ತು ಜನರ ಲೇಖನಗಳು ಮತ್ತು ಕೊನೆಯಲ್ಲಿನ ಚಿತ್ರಗುಚ್ಛದಿಂದಾಗಿ ಈ ಅಭಿನಂದನಾ ಗಂಥ ಬೆಂಗಳೂರಿನ ಹವ್ಯಾಸಿ ರಂಗಭೂಮಿಯ ಒಂದು ಮಾಹಿತಿ ಕೋಶವಾಗಿಯೂ ನಮ್ಮ ಗಮನ ಸೆಳೆಯುತ್ತದೆ.ಕಳೆದ ವರ್ಷದ ಕೊನೆಯಲ್ಲಿ ದಿನವಿಡೀ ನಡೆದ ರಂಗಸಮಾರಂಭದಲ್ಲಿ ‘ಶ್ರೀರಂಗ ಸಂಪದ’ ಗ್ರಂಥದ ಲೋಕಾರ್ಪಣೆ ಹಾಗೂ ರಂಗಕರ್ಮಿ ಸುಬ್ಬಣ್ಣನಿಗೆ ಅಭಿನಂದನಾ ಗ್ರಂಥ ಸಮರ್ಪಣೆ, ಸನ್ಮಾನ ಎಲ್ಲವೂ ಸಡಗರ ಸಂಭ್ರಮಗಳಿಂದ ಜರುಗಿ ಪತ್ರಿಕೆಗಳಲ್ಲಿ ಸಣ್ಣ ಸುದ್ದಿಯಾಯಿತು. ಹೀಗೆ ಇತಿಹಾಸದ ಪುಟಗಳು ಮಗುಚಿಕೊಳ್ಳುತ್ತವೆ. ಸುಬ್ಬಣ್ಣನ ಸಂಗ್ರಹದಲ್ಲಿರುವ ರಂಗಭೂಮಿಯ ಎಲ್ಲ ದಾಖಲೆಗಳನ್ನೂ ಕರ್ನಾಟಕ ನಾಟಕ ಅಕಾಡಮಿ ತನ್ನ ಪತ್ರಾಗಾರದ ವಶಕ್ಕೆ ತೆಗೆದು ಕೊಂಡು ಜೋಪಾನಮಾಡಿದಲ್ಲಿ ಅದು ಭವಿಷ್ಯಕ್ಕೆ ಪರಂಪರೆು ಕೊಂಡಿಯಾಗಿಸುವ ಬೆಳಕಾಗಬಹುದು.

Writer - ಜಿ.ಎನ್. ರಂಗನಾಥ ರಾವ್

contributor

Editor - ಜಿ.ಎನ್. ರಂಗನಾಥ ರಾವ್

contributor

Similar News