ಬಿಜೆಪಿ ಅಧಿಕಾರಕ್ಕೆ ಬಂದರೆ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ : ಯಡಿಯೂರಪ್ಪ
ಬೆಂಗಳೂರು, ಫೆ. 11: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸುವುದಲ್ಲದೆ, ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಶನಿವಾರ ರಾತ್ರಿ ಇಲ್ಲಿನ ಗಾಂಧಿ ನಗರ ಕ್ಷೇತ್ರದ ಲಕ್ಷ್ಮಣಪುರಿ ಕೊಳೆಗೇರಿಯಲ್ಲಿ ಮುನಿರತ್ನ ಎಂಬವರ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದ ಯಡಿಯೂರಪ್ಪ, ಅವರ ನಿವಾಸದಲ್ಲಿ ಬೆಳಗಿನ ಉಪಾಹಾರ ಇಡ್ಲಿ-ಉಪ್ಪಿಟ್ಟು ಸೇವಿಸಿದರು. ಆ ಬಳಿಕ ಮಾತನಾಡಿದ ಅವರು, ರಾಜ್ಯದ ಕೊಳೆಗೇರಿಗಳ ದುಸ್ಥಿತಿಗೆ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಟೀಕಿಸಿದರು.
ಅರವತ್ತು ವರ್ಷಗಳಿಂದ ಕೊಳೆಗೇರಿ ನಿವಾಸಿಗಳನ್ನು ಕಾಂಗ್ರೆಸ್ ಪಕ್ಷ ಕೇವಲ ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಂಡಿದೆ. ಆದರೆ, ಅಧಿಕಾರಕ್ಕೆ ಬಂದ ನಂತರ ಅವರ ಕಷ್ಟ-ಸುಖಗಳನ್ನು ಆಲಿಸಿಲ್ಲ ಎಂದ ಅವರು, ಕೊಳಗೇರಿ ನಿವಾಸಿಗಳ ಸ್ಥಿತಿಗತಿಯನ್ನು ಅರಿಯಲು ಸ್ಲಂ ವಾಸ್ತವ್ಯ ಮಾಡಲಾಗುತ್ತಿದೆ ಎಂದರು.
ಕೊಳೆಗೇರಿ ವಾಸ್ತವ್ಯ, ಉಪಾಹಾರ ಸೇವಿಸಿರುವುದು ಗಿಮಿಕ್ ಅಲ್ಲ. ರಾಜಕೀಯ ಕಾರಣಗಳಿಗಾಗಿ ಖಂಡಿತ ಅಲ್ಲ. ಕೊಳಚೆ ಪ್ರದೇಶದ ನಿವಾಸಿಗಳ ಸ್ಥಿತಿ ಅರಿಯಲು ವಾಸ್ತವ್ಯ ಮಾಡಲಾಗಿದೆ ಎಂದ ಅವರು, ಕೊಳಗೇರಿಗಳಿಗೆ ನಾಗರಿಕ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು.
ಮಾಜಿ ಡಿಸಿಎಂ ಆರ್.ಅಶೋಕ್ ಮಾತನಾಡಿ, ರಾಜ್ಯದಲ್ಲಿನ ಕೊಳಗೇರಿಗಳ ದುಸ್ಥಿತಿಗೆ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರಕಾರವೇ ಕಾರಣ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕೊಳಗೇರಿಗಳ ನಿರ್ಮೂಲನೆ ಮಾಡಿ, ಅದೇ ಸ್ಥಳದಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದರು.
ಕೊಳಗೇರಿಗಳ ಸಮೀಕ್ಷೆಯ ‘ಸ್ಲಂ ದೌರ್ಭಾಗ್ಯ’ ಕೃತಿಯನ್ನು ಯಡಿಯೂರಪ್ಪ ಬಿಡುಗಡೆ ಮಾಡಿದರು. ಆ ಬಳಿಕ ತಾವು ವಾಸ್ತವ್ಯ ಹೂಡಿದ್ದ ಮುನಿರತ್ನ ಅವರ ಕುಟುಂಬ ವರ್ಗದವರಿಗೆ ಸೀರೆ, ಪಂಚೆ, ಬಟ್ಟೆಗಳನ್ನು ಕೊಟ್ಟು ಗೌರವಿಸಿದರು. ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್, ಕಟ್ಟಾಸುಬ್ರಹ್ಮಣ್ಯ ನಾಯ್ಡು, ರವಿಕುಮಾರ್, ನರೇಂದ್ರಬಾಬು ಉಪಸ್ಥಿತರಿದ್ದರು.
‘ಯಡಿಯೂರಪ್ಪನವರು ತಮ್ಮ ಮನೆಗೆ ಬಂದು ವಾಸ್ತವ್ಯ ಹೂಡಿದ್ದು, ಸಂತೋಷ ತಂದಿದೆ. ನಮ್ಮ ಕಷ್ಟ-ಸುಖಗಳನ್ನು ಅವರ ಮುಂದೆ ನಾವು ಹೇಳಿಕೊಂಡಿಲ್ಲ. ಆದರೆ, ಅವರು ಯಾವಾಗಲಾದರೂ ಬನ್ನಿ, ಸಹಾಯ ಮಾಡುತ್ತೇನೆಂಬ ಭರವಸೆ ನೀಡಿದ್ದಾರೆ’
-ಇಂದ್ರಾಣಿ, ಮುನಿರತ್ನ ಅವರ ತಾಯಿ ,ಲಕ್ಷ್ಮಣಪುರಿ ಸ್ಲಂ