ಈ ಬಾರಿ ಕರ್ನಾಟಕ ನಮ್ಮ ಪಾಲಿಗೂ ಸುಲಭದ ತುತ್ತಲ್ಲ : ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್

Update: 2018-02-11 13:47 GMT

ಬೆಂಗಳೂರು, ಫೆ. 11: ಸಂಪತ್ತಿನ ಅಮಲಿನಲ್ಲಿ ಕಾಂಗ್ರೆಸ್ ಪಕ್ಷ ತೇಲುತ್ತಿದ್ದು, ಆ ಪಕ್ಷದಲ್ಲಿ ನೆಹರೂ ಕುಟುಂಬದವರನ್ನು ಬಿಟ್ಟು ಬೇರೆ ವ್ಯಕ್ತಿ ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಾಗಲು ಸಾಧ್ಯವೇ ಇಲ್ಲ. ಹೀಗಾಗಿ ರಾಹುಲ್ ಗಾಂಧಿ ಆಯ್ಕೆಯಾಗಿದ್ದಾರೆ. ಈ ಬಾರಿ ಕರ್ನಾಟಕ ನಮ್ಮ ಪಾಲಿಗೂ ಸುಲಭದ ತುತ್ತಲ್ಲ. ಆದರೂ, ಹೋರಾಟ ಮಾಡುವ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಟೀಕಿಸಿದ್ದಾರೆ.

ರವಿವಾರ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮಾಧ್ಯಮ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ನೆಹರು ಕುಟುಂಬದವರಷ್ಟೇ ಅಧ್ಯಕ್ಷರಾಗುತ್ತಾರೆ. ಆದರೆ, ಬಿಜೆಪಿಯಲ್ಲಿ ಚಹಾ ಮಾಡುವ ವ್ಯಕ್ತಿ ಪ್ರಧಾನಿ ಆಗಲು ಎಂಬುದು ಸಾಧ್ಯ ಎಂದು ಸಾಬೀತಾಗಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಶ್ರಮ ವಹಿಸಿದರೆ ಯಾವ ಹುದ್ದೆಯನ್ನಾದರೂ ಪಡೆಯಬಹುದು. ಅದಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರೇ ಸಾಕ್ಷಿ ಎಂದ ಅವರು, ಕಾಂಗ್ರೆಸ್ ಪಾಲಿಗೆ ಉಳಿದುಕೊಂಡಿರುವುದು ಕರ್ನಾಟಕ ಮತ್ತು ಈಶಾನ್ಯ ರಾಜ್ಯಗಳು ಮಾತ್ರ.
ಹೀಗಾಗಿ ಕರ್ನಾಟಕವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ ಮಾಡುತ್ತಿದೆ. 

ಬಿಜೆಪಿ ಉಸ್ತುವಾರಿ ಮುರುಳಿಧರ ರಾವ್ ಮಾತನಾಡಿ, ಈಗ ಚುನಾವಣಾ ಯುದ್ಧ ಆರಂಭವಾಗಿದೆ. ಪಕ್ಷದಲ್ಲಿನ ಸೈನಿಕರನ್ನು ಪ್ರಚಾರಕ್ಕೆ ಸಿದ್ಧಗೊಳಿಸಬೇಕು. ದಿನದ 24 ಗಂಟೆ ಎಚ್ಚರವಾಗಿದ್ದುಕೊಂಡು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಸಲಹೆ ಮಾಡಿದರು.

ಐದು ವರ್ಷಗಳಲ್ಲಿ ಎಲ್ಲೆಲ್ಲಿ ಚುನಾವಣೆ ನಡೆದಿದೆಯೋ ಅಲ್ಲೆಲ್ಲಾ ಬಿಜೆಪಿ, ಕಾಂಗ್ರೆಸ್ ವಿರುದ್ಧ ಗೆಲುವು ಸಾಧಿಸಿದೆ. ಆದರೆ, ಕರ್ನಾಟಕದ ಪರಿಸ್ಥಿತಿಯೇ ಬೇರೆ. ಇಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರವನ್ನು ಎದುರಿಸಿ ಗೆಲ್ಲಬೇಕಿದೆ ಎಂದು ಅವರು ಸೂಚಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಠ-ಮಂದಿರಗಳನ್ನು ಸ್ವಾಧೀನಕ್ಕೆ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದುಕೊಂಡಿದೆ. ಆದರೆ, ಮತ್ತೊಂದು ಕಡೆ ರಾಹುಲ್ ಗಾಂಧಿ ಮಠ-ಮಂದಿರಗಳಿಗೆ ಭೇಟಿ ನೀಡಿ ಮತಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ವಕ್ತಾರ ಸಂದೀಪ್ ಪಾತ್ರ, ದಕ್ಷಿಣ ಭಾರತ ಬಿಜೆಪಿ ಮಾಧ್ಯಮ ಉಸ್ತುವಾರಿ ಜಿವಿಎಲ್ ನರಸಿಂಹ ಶಾಸ್ತ್ರಿ, ಪಕ್ಷದ ವಕ್ತಾರ ವಾಮನಾಚಾರ್ಯ, ಮಾಧ್ಯಮ ಪ್ರಕೋಷ್ಠದ ಸಂಚಾಲಕ ಶಾಂತರಾಮ್, ನಟಿ ಮಾಳವಿಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News