ಅರಣ್ಯದಲ್ಲಿ ಪತ್ನಿಗೆ ಬೆಂಕಿ ಹಚ್ಚಿ ಹತ್ಯೆ ನಡೆಸಿ ತಲೆಮರೆಸಿಕೊಂಡಿದ್ದ ಪತಿಯ ಬಂಧನ
ಶಿವಮೊಗ್ಗ, ಫೆ. 11: ಅರಣ್ಯದಲ್ಲಿ ಪತ್ನಿಯ ಹತ್ಯೆ ನಡೆಸಿ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿ ತಲೆಮರೆಸಿಕೊಂಡಿದ್ದ ಪತಿಯನ್ನು ಜಿಲ್ಲೆಯ ಸೊರಬ ತಾಲೂಕು ಆನವಟ್ಟಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಗರ ತಾಲೂಕು ಆನಂದಪುರಂನ ನಿವಾಸಿ ಉಮರ್ ಬೇಗ್ (42) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಸಾಯಿರಾ ಬಾನು (35) ಹತ್ಯೆಗೀಡಾದ ಪತ್ನಿಯಾಗಿದ್ದಾಳೆ. ಆನವಟ್ಟಿ ಸಬ್ ಇನ್ಸ್‍ಪೆಕ್ಟರ್ ಮಂಜು ಕುಪ್ಪೆಲೂರು ನೇತೃತ್ವದ ಪೊಲೀಸ್ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ.
ಘಟನೆ ಹಿನ್ನೆಲೆ: ಆನವಟ್ಟಿ - ಶಿರಾಳಕೊಪ್ಪ ರಸ್ತೆ ನಡುವಿನ ನೆಗವಾಡಿ ನೆಡುತೋಪಿನಲ್ಲಿ ಕಳೆದ ಬುಧವಾರ ಕೊಲೆಗೀಡಾದ ಮಹಿಳೆಯೋರ್ವರ ಶವ ಪತ್ತೆಯಾಗಿತ್ತು. ಪೆಟ್ರೋಲ್ ಸುರಿದು ಮಹಿಳೆಯನ್ನು ಸುಟ್ಟು ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಸ್ಥಳಕ್ಕಾಗಮಿಸಿದ್ದ ಆನವಟ್ಟಿ ಠಾಣೆ ಪೊಲೀಸರು ಸ್ಥಳದ ಮಹಜರು ನಡೆಸಿ ಶವವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಮೃತ ಮಹಿಳೆಯ ಹೆಸರು, ವಿಳಾಸ ಪತ್ತೆಯಾಗಿರಲಿಲ್ಲ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು. ಮೃತದೇಹದ ಬಳಿ ಸಿಕ್ಕಿದ್ದ ಚಪ್ಪಲಿ, ಕೊರಳಲ್ಲಿದ್ದ ಪದಕ, ಬಟ್ಟೆಯ ಚೂರು ಮತ್ತಿತರ ವಸ್ತುಗಳನ್ನು ಮುಂದಿಟ್ಟುಕೊಂಡು ಮಹಿಳೆಯ ಪೂರ್ವಾಪರ ಪತ್ತೆಗೆ ಮುಂದಾಗಿದ್ದರು. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೊಲೆಗೀಡಾದ ಶವದ ಫೋಟೋ ಅಪ್‍ಲೋಡ್ ಮಾಡಿದ್ದರು.
ಈ ನಡುವೆ ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ಸಾಯಿರಾಬಾನು ಎಂಬ ಮಹಿಳೆ ಕಣ್ಮರೆಯಾಗಿದ್ದ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರನ್ನು ಪೋಷಕರನ್ನು ಭೇಟಿಯಾಗಿ ಮೃತದೇಹದ ಬಳಿ ದೊರಕಿದ್ದ ವಸ್ತುಗಳನ್ನು ತೋರಿಸಿದ್ದರು. ಇದು ತಮ್ಮ ಮಗಳಿಗೆ ಸೇರಿದ್ದಾಗಿದೆ ಎಂಬುವುದನ್ನು ದೃಡಪಡಿಸಿದ್ದರು.
ಪತಿಯ ಸೆರೆ: ಇದರ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದಾಗ, ಪತಿಯ ಮೇಲೆ ಅನುಮಾನಗೊಂಡಿದ್ದರು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆ ನಡೆಸಿದ್ದು ತಾನೇ ಎಂಬುವುದನ್ನು ಒಪ್ಪಿಕೊಂಡಿದ್ದ. ಪತ್ನಿಯ ಹತ್ಯೆಯ ನಂತರ ಪತಿ ಉಮರ್ ಬೇಗ್ ಆರಾಮಾಗಿ ಓಡಾಡಿಕೊಂಡಿದ್ದ. ಯಾರಿಗೂ ಅನುಮಾನ ಬಾರದಂತೆ ವರ್ತಿಸುತ್ತಿದ್ದ. ಪತ್ನಿ ಎಲ್ಲಿಗೋ ಹೋಗಿದ್ದು, ತನಗೆ ಮಾಹಿತಿಯಿಲ್ಲವೆಂದು ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಶನಿವಾರ ಶಿರಾಳಕೊಪ್ಪದಲ್ಲಿರುವ ಪತ್ನಿ ಮನೆಗೆ ಆರೋಪಿ ಆಗಮಿಸಿದ್ದ. ಈ ವೇಳೆ ಕೌಟಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಇದರಿಂದ ಆಕ್ರೋಶಗೊಂಡ ಆರೋಪಿಯು ಪತ್ನಿಯನ್ನು ಪುಸಲಾಯಿಸಿ ಬೈಕ್‍ನಲ್ಲಿ ಹೊರಗೆ ಕರೆದೊಯ್ದಿದ್ದ. ನಂತರ ನೆಗವಾಡಿಯ ನಿರ್ಜನ ಪ್ರದೇಶಕ್ಕೆ ಕರೆತಂದು ಹತ್ಯೆ ನಡೆಸಿ, ಗುರುತು ಸಿಗಬಾರದೆಂಬ ಕಾರಣಕ್ಕೆ ಬೈಕ್‍ನಲ್ಲಿದ್ದ ಪೆಟ್ರೋಲ್ ತೆಗೆದು ಶವದ ಮೇಲೆ ಸುರಿದು ಬೆಂಕಿ ಹಚ್ಚಿ ಅರ್ಧಂಬರ್ಧ ಸುಟ್ಟು ಹಾಕಿ ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.