×
Ad

ಕುಖ್ಯಾತ ಕಳ್ಳನ ಸೆರೆ : ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ವಶ

Update: 2018-02-11 19:30 IST

ಶಿವಮೊಗ್ಗ, ಫೆ. 11: ಜಿಲ್ಲೆಯ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಕುಖ್ಯಾತ ಮನೆಗಳ್ಳನೋರ್ವನನ್ನು ಬಂಧಿಸಿದ್ದು, ಆತನಿಂದ ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ವಶಕ್ಕೆ ಪಡೆದುಕೊಂಡಿರುವ ಘಟನೆ ವರದಿಯಾಗಿದೆ. 

ಭದ್ರಾವತಿಯ ತ್ಯಾಗರಾಜ ಬಡಾವಣೆಯ ನಿವಾಸಿ ರಾಜೇಶ್ ಯಾನೆ ಕಾಡು ಮನುಷ್ಯ (21) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಪೊಲೀಸರು ಬೈಕ್‍ಗಳ ತಪಾಸಣೆ ನಡೆಸುವ ವೇಳೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಈತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿಯು ಹಲವು ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿದೆ. 

ಆರೋಪಿಯಿಂದ 346 ಗ್ರಾಂ ಚಿನ್ನಾಭರಣ, 540 ಗ್ರಾಂ ಬೆಳ್ಳಿಯ ಆಭರಣ, ಮೂರು ಲ್ಯಾಪ್‍ಟ್ಯಾಪ್, ಎರಡು ಆ್ಯಂಪ್ಲಿಪ್ಲೇಯರ್ ಮತ್ತಿತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಸ್ತುತ ವಶಕ್ಕೆ ಪಡೆದುಕೊಂಡಿರುವ ನಗನಾಣ್ಯ ಇತರೆ ಎಲೆಕ್ಟ್ರಾನಿಕ್ ಉಪಕರಣಗಳ ಒಟ್ಟಾರೆ ಮೌಲ್ಯ 10.3 ಲಕ್ಷ ರೂ. ಮೌಲ್ಯವೆಂದು ಅಂದಾಜಿಸಲಾಗಿದೆ. 

ಆರೋಪಿಯು ಭದ್ರಾವತಿಯ ವಿವಿಧೆಡೆ 11 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದು ತನಿಖೆಯ ವೇಳೆ ಗೊತ್ತಾಗಿದೆ. ಹಾಗೆಯೇ ಬಳ್ಳಾರಿಯ ಕೌಲ್‍ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದ ವಿವರವನ್ನು ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News