ಲೂಟಿ ಮಾಡುವ ಬಿಜೆಪಿಗೆ ಅಧಿಕಾರ ನೀಡಬೇಡಿ : ಸಿದ್ದರಾಮಯ್ಯ

Update: 2018-02-11 14:25 GMT

ಕೊಪ್ಪಳ (ಕಾರಟಗಿ), ಫೆ.11: ರಾಜ್ಯವನ್ನು ಲೂಟಿ ಮಾಡುವ  ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.

ಕಾರಟಗಿಯಲ್ಲಿ ಕೆಪಿಸಿಸಿ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷ, ಹಲವು ಹಗರಣಗಳನ್ನು ಮಾಡಿದೆ.ಇಂತಹ ಲೂಟಿಕೋರರಿಗೆ ಅಧಿಕಾರ ಕೊಡಬೇಕಾ ಅಥವಾ ಅಭಿವೃದ್ಧಿ ಪರ ಇರುವ ನಮಗೆ ಅಧಿಕಾರ ಕೊಡುತ್ತೀರಾ ಎಂಬುದನ್ನು ತೀರ್ಮಾನ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಚೆಕ್ ಮೂಲಕ ಲಂಚ ತೆಗೆದುಕೊಂಡಿದ್ದು, ವಿಶ್ವದ ಇತಿಹಾಸದಲ್ಲಿ ಎಲ್ಲಿಯೂ ಇಲ್ಲ. ಆದರೆ ಬಿ.ಎಸ್.ಯಡಿಯೂರಪ್ಪ ಚೆಕ್ ನಲ್ಲಿ ಲಂಚ ಪಡೆದು ಇತಿಹಾಸ ಸೃಷ್ಟಿಸಿದರು. ಜೊತೆಗೆ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋಗುವುದನ್ನು ಸಾಬೀತು ಪಡೆಸಿದರು ಎಂದು ವಾಗ್ದಾಳಿ ನಡೆಸಿದರು.

ನಾವು ಜನರಿಗೆ ನೀಡಿದ ವಚನಗಳನ್ನೆಲ್ಲಾ ಈಡೇರಿಸಿದ್ದೇವೆ. ರೈತರ ಸಾಲ ಮನ್ನಾ ಮಾಡಿದ್ದೇವೆ. ಇಡೀ ದೇಶದಲ್ಲಿ ಕರ್ನಾಟಕ 1ನೇ ಸ್ಥಾನದಲ್ಲಿ ಇರಬೇಕು ಎಂದರೆ ನೀವು ಮತ್ತೊಮ್ಮೆ ಕಾಂಗ್ರೆಸ್ ಗೆಲ್ಲಿಸಬೇಕು ಎಂದರು.

ಜೈಲಿಗೆ ಹೋಗಿದ್ದವರನ್ನು ಪಕ್ಕದಲ್ಲಿ ಕೂರಿಸಿಕೊಂಡು, ಮುಖ್ಯಮಂತ್ರಿ ಮಾಡಿ ಎಂದು ಕೇಳಲು ಪ್ರಧಾನಿ ನರೇಂದ್ರ ಮೋದಿಗೆ ನಾಚಿಕೆ ಆಗಲ್ಲವೇ? ಎಂದು ಪ್ರಶ್ನೆ ಮಾಡಿದ ಅವರು, ನರೇಂದ್ರ ಮೋದಿ, ಯಡಿಯೂರಪ್ಪ ಮಾತು ಕೇಳಿಕೊಂಡು ಮತ ಹಾಕಬೇಡಿ ಎಂದರು.

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಲೋಕಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News