ಕಲಬುರಗಿ : ಸವರ್ಣೀಯರ ಹಲ್ಲೆಯಿಂದ ಬೇಸತ್ತು ದೇವರ ಫೋಟೋಗಳಿಗೆ ಬೆಂಕಿಹಚ್ಚಿದ ದಲಿತರು
ಕಲಬುರಗಿ, ಫೆ. 11: ಗ್ರಾಮದೇವತೆ ಜಾತ್ರೆ ವೇಳೆ ಪ್ರಾಣಿ ಬಲಿಗೆ ವಿರೋಧ ಹಾಗೂ ತೇರು ಎಳೆಯುವ ವಿಚಾರಕ್ಕೆ ಸವರ್ಣಿಯರು ನಡೆಸಿದ ದೌರ್ಜನ್ಯದಿಂದ ಆಕ್ರೋಶಗೊಂಡ ದಲಿತರು, ತಮ್ಮ ಮನೆಯಲ್ಲಿದ್ದ ದೇವರ ಫೋಟೋಗಳನ್ನು ಬೀದಿಗೆಸೆದು ಬೆಂಕಿ ಹಚ್ಚಿದ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ಕೊಂಡಗೂಳಿ ಗ್ರಾಮದಲ್ಲಿ ಗ್ರಾಮದೇವ ದ್ಯಾಮವ್ವನ ಜಾತ್ರೆಯ ತೇರು ಎಳೆಯುವ ವೇಳೆ ಉಂಟಾದ ನೂಕು-ನುಗ್ಗಲು ಜಾತಿ ಸಂಘರ್ಷಕ್ಕೆ ತಿರುಗಿತ್ತು. ಅನಂತರ ದಲಿತ ಮತ್ತು ಸವರ್ಣೀಯರ ಮಧ್ಯೆ ನಡೆದ ಘರ್ಷಣೆಯಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಇದರಿಂದ ಬೇಸತ್ತ ಗ್ರಾಮಸ್ಥರು ಕಾಲನಿಯಲ್ಲಿ ಸೇರಿ ದಲಿತ ಮುಖಂಡರ ಮುಂದಾಳತ್ವದಲ್ಲಿ ಹತ್ತಾರು ದೇವರ ಫೋಟೊಗಳನ್ನು ಒಟ್ಟಿಗೆ ರಾಶಿ ಹಾಕಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಫೇಸ್‌ಬುಕ್, ವಾಟ್ಸ್ ಆ್ಯಪ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರತಿ 3ವರ್ಷಕ್ಕೊಮ್ಮೆ ಗ್ರಾಮದೇವತೆ ಜಾತ್ರೆಯನ್ನು ದಲಿತ ಮತ್ತು ಸವರ್ಣೀಯರು ಸೇರಿ ಆಚರಿಸಿಕೊಂಡು ಬರಲಾಗುತ್ತಿತ್ತು. ಆದರೆ, ಫೆ. 9ರ ಶುಕ್ರವಾರ ಸಂಜೆ ದಲಿತರು ಪ್ರಾಣಿ ಬಲಿ ಸಂಪ್ರದಾಯಕ್ಕೆ ವಿರೋಧ ಹಾಗೂ ತೇರು ಎಳೆಯಲು ಅವಕಾಶ ನೀಡಬೇಕೆಂದು ಗ್ರಾಮದ ದಲಿತ ಯುವಕರು ಪಟ್ಟು ಹಿಡಿದಿದ್ದರಿಂದ ಸಂಘರ್ಷ ಏರ್ಪಟ್ಟಿತ್ತು.
ಬೌದ್ಧಧರ್ಮ ದತ್ತ ದಲಿತರು : ಹಿಂದೂಧರ್ಮದಲ್ಲಿ ದಲಿತರಿಗೆ ಸೂಕ್ತ ರಕ್ಷಣೆ ಇಲ್ಲ. ಹೀಗಾಗಿ ಜೇವರ್ಗಿಯ ಕೊಂಡಗೂಳಿ ಗ್ರಾಮದ ಎಲ್ಲ ದಲಿತರು ತಮ್ಮ ಕುಟುಂಬ ಸಮೇತ ಹಿಂದೂಧರ್ಮ ತ್ಯಜಿಸಿ ಬೌದ್ಧಧರ್ಮ ಸ್ವೀಕಾರಕ್ಕೆ ತೀರ್ಮಾನಿಸಿದ್ದಾರೆಂದು ದಲಿತ ಮುಖಂಡ ವಿಠ್ಠಲ ದೊಡ್ಡಮನಿ ತಿಳಿಸಿದ್ದಾರೆ.
‘ಯಾವುದೇ ಕಾರಣಕ್ಕೂ ದಲಿತರು ಇನ್ನೂ ಮುಂದೆ ಸವರ್ಣಿಯರ ದೌರ್ಜನ್ಯ ಸಹಿಸುವುದಿಲ್ಲ. ಒಂದು ವೇಳೆ ದಲಿತರ ಮೇಲೆ ಹಲ್ಲೆ-ದೌರ್ಜನ್ಯಗಳು ನಡೆದರೆ ಹಿಂದೂಧರ್ಮವನ್ನು ತ್ಯಜಿಸಿ ಬೌದ್ಧಧರ್ಮಕ್ಕೆ ಮತಾಂತರ ಆಗುತ್ತಾರೆ’
-ಹಣಮಂತ ಯಳಸಂಗಿ, ದಲಿತ ಮುಖಂಡ