ಫೆ.13ರಂದು ಕುಮಾರನಾಯ್ಕ ಸಮಿತಿ ವರದಿ ಜಾರಿಗೆ ಆಗ್ರಹಿಸಿ ಧರಣಿ
ಬೆಂಗಳೂರು, ಫೆ.11: ಪದವಿ ಪೂರ್ವ ಉಪನ್ಯಾಸಕರ ಬಹುದಿನದ ಬೇಡಿಕೆಯಾದ ಜೆ.ಕುಮಾರನಾಯ್ಕ ಸಮಿತಿ ವರದಿ ಜಾರಿ ಮಾಡಲು ನಿರ್ಲಕ್ಷ ವಹಿಸುತ್ತಿರುವ ಸರಕಾರದ ಧೋರಣೆಯನ್ನು ಖಂಡಿಸಿ ಫೆ.13ರಂದು ನಗರದ ವೌರ್ಯ ವೃತ್ತದದಲ್ಲಿ ಪ್ರತಿಭಟನೆ ಮಾಡಲು ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘ ನಿರ್ಧರಿಸಿದೆ.
ಮೂರು ವರ್ಷಗಳಿಂದ ಕುಮಾರ ನಾಯ್ಕ ಸಮಿತಿಯ ವರದಿಯನ್ನು ಜಾರಿ ಮಾಡುವಂತೆ ಹಲವು ರೀತಿಯ ಹೋರಾಟ ನಡೆಸಿ, ಸರಕಾರಕ್ಕೆ ಮನವಿ ಮಾಡಿದ್ದೇವೆ. 6ನೆ ವೇತನ ಆಯೋಗದಲ್ಲಿ ಉಪನ್ಯಾಸಕರ ಎಲ್ಲ ಸಮಸ್ಯೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಸರಕಾರ ನಮ್ಮನ್ನು ನಮ್ಮನ್ನು ನಂಬಿಸಿ ವಿಶ್ವಾಸ ದ್ರೋಹ ಮಾಡಿದೆ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಬೇಸರ ವ್ಯಕ್ತಪಡಿಸಿದ್ದಾರೆ.
ಆರನೆ ವೇತನ ಆಯೋಗದಲ್ಲಿ ಕುಮಾರನಾಯ್ಕ ವರದಿಯಲ್ಲಿರುವ ಯಾವುದೆ ಅಂಶವನ್ನು ಶಿಫಾರಸು ಮಾಡಿಲ್ಲ. ಈ ಹಿಂದೆ ಪ್ರಾಂಶುಪಾಲರಿಗೆ ನೀಡುತ್ತಿದ್ದ 1 ಸಾವಿರ ರೂ. ಏಕ್ಸ್‌ಗ್ರೇಷಿಯಾವನ್ನು ವೇತನ ಸಮಿತಿಯು ಮೂಲ ವೇತನದಲ್ಲಿ ವಿಲೀನಗೊಳಿಸಲು ಶಿಫಾರಸು ಮಾಡಿಲ್ಲ. ಹಾಗೂ ಉಪನ್ಯಾಸಕರ ಮೂಲ ಬೇಡಿಕೆಯಾದ 28,100 ರೂ.ಮೂಲವೇತನವನ್ನು ಜಾರಿ ಮಾಡಲು ವೇತನ ಆಯೋಗದಲ್ಲಿ ಪ್ರಸ್ತಾವನೆ ಇಲ್ಲ. ಹೀಗಾಗಿ ಸರಕಾರ ವಿರುದ್ಧ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.