×
Ad

ಮಂಡ್ಯ : ಕ್ಷಯರೋಗ ಕೇಂದ್ರದ 15 ದ್ವಿಚಕ್ರವಾಹನ, ಕ್ಷ-ಕಿರಣಯಂತ್ರ ನಾಪತ್ತೆ

Update: 2018-02-11 22:23 IST

ಮಂಡ್ಯ, ಫೆ.11: ಜಿಲ್ಲಾ ಕ್ಷಯರೋಗ ಕೇಂದ್ರಕ್ಕೆ ಸರಕಾರದಿಂದ ಖರೀದಿಸಿದ್ದ 12 ರಿಂದ 15 ದ್ವಿಚಕ್ರವಾಹನ ಹಾಗೂ ಕ್ಷ-ಕಿರಣಯಂತ್ರದ ಬಿಡಿಭಾಗಗಳು ನಾಪತ್ತೆಯಾಗಿದ್ದು, ತನಿಖೆ ನಡೆಸುವಂತೆ ಆರ್ ಟಿ ಐ ಕಾರ್ಯಕರ್ತ ಕೆ.ಆರ್.ರವೀಂದ್ರ ಒತ್ತಾಯಿಸಿದ್ದಾರೆ.

ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಜಯ್‍ಸೇಠ್ ಅವರಿಗೆ ದೂರು ನೀಡಿರುವ ಅವರು, ದ್ವಿಚಕ್ರವಾಹನ ಮತ್ತು ಕ್ಷ-ಕಿರಣಯಂತ್ರದ ಬಿಡಿಭಾಗಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದಾರೆ.

ಹಿಂದಿನ ಜಿಲ್ಲಾ ಕ್ಷಯರೋಗ ನಿಯಂತ್ರಾಣಾಧಿಕಾರಿಗಳು ಕ್ಷಯರೋಗ ಆರೋಗ್ಯ ಸಂದರ್ಶಕರಿಗೆಂದು 12 ರಿಂದ 15 ದ್ವಿಚಕ್ರವಾಹನ ಖರೀದಿಸಿದ್ದು, ಹರಾಜು ಪ್ರಕ್ರಿಯೆ ನಡೆಸದೆ ಅಕ್ರಮವಾಗಿ ಮಾರಾಟ ಮಾಡಿದ್ದು ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜತೆಗೆ 10 ಲಕ್ಷ ರೂ. ಮೌಲ್ಯದ ಕ್ಷ-ಕಿರಣ ಯಂತ್ರವನ್ನೂ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರಕ್ಕೆ ಖರೀದಿಸಿ ತಂತ್ರಜ್ಞೆ ವಿ.ಎ.ಮಂಜುಳ ಅವರು 20 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2005-06ನೆ ಸಾಲಿನಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭವಾದ ನಂತರ ಕ್ಷ-ಕಿರಣ ಸೌಲಭ್ಯ ಜಿಲ್ಲಾಸ್ಪತ್ರೆಯಲ್ಲೇ ದೊರೆಯುತ್ತಿದೆ. ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರವನ್ನೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಟ್ಟಡಕ್ಕೆ ವರ್ಗಾಯಿಸಿದ್ದು, ಈ ಕ್ಷ-ಕಿರಣ ಯಂತ್ರದ ಬೆಲೆಬಾಳುವ ಬಿಡಿಭಾಗಗಳನ್ನು ಅಕ್ರಮವಾಗಿ ಖಾಸಗಿ ನರ್ಸಿಂಗ್‍ಹೋಂಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಕ್ಷ-ಕಿರಣ ಯಂತ್ರ ಇಲ್ಲದಿದ್ದರೂ ಕಚೇರಿಯಲ್ಲೇ ಕಾಲಕಳೆಯುತ್ತಿರುವ ತಂತ್ರಜ್ಞೆ ಮಂಜುಳಾ ಅವರನ್ನು ಬೇರೆ ಕೆಲಸಕ್ಕೆ ನಿಯೋಜಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಡಾ.ಕೆ.ಮೋಹನ್ ವರ್ಗಾವಣೆಗೂ ಒತ್ತಾಯ:
ಕಳೆದ 20 ವರ್ಷದಿಂದ ಇಲ್ಲಿವರೆಗೂ ಸ್ವಂತ ಜಿಲ್ಲೆ ಮಂಡ್ಯದಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಶಾಸಕ ಎನ್.ಚಲುವರಾಯಸ್ವಾಮಿ ಅವರ ಅಣ್ಣನ ಪುತ್ರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರನ್ನು ಬೇರೆಡೆ ವರ್ಗಾಯಿಸುವಂತೆ ರಾಜ್ಯ ಚುನಾವಣಾ ಆಯುಕ್ತರನ್ನು ರವೀಂದ್ರ ಒತ್ತಾಯಿಸಿದ್ದಾರೆ.

ಡಾ.ಮೋಹನ್ ವಿರುದ್ಧ ಭ್ರಷ್ಟಾಚಾರ ನಿಗ್ರಹದಳ, ಸರಕಾರದ ಮಟ್ಟದಲ್ಲಿ ಸಾಕಷ್ಟು ದೂರುಗಳು ಇವೆ. ಜಿಪಂ ಸಭೆಗಳಿಗೂ ಸದರಿ ಅಧಿಕಾರಿ ಗೈರಾಗಿರುವ ಬಗ್ಗೆ ದೂರುಗಳಿವೆ. ಆದರೂ ರಾಜಕೀಯ ಪ್ರಭಾವದಿಂದ ಸ್ವಂತ ಜಿಲ್ಲೆಯಲ್ಲೇ ಮುಂದುವರಿದಿದ್ದಾರೆ. ಚುನಾವಣೆಯಲ್ಲಿ ತಮ್ಮ ಕೆಳಗಿನ ಅಧಿಕಾರಿ, ಸಿಬ್ಬಂದಿ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿರುವುದರಿಂದ ಡಾ.ಮೋಹನ್ ಅವರನ್ನು ಮಂಡ್ಯ ಜಿಲ್ಲೆಯ ಹಾಸುಪಾಸಿನ ಜಿಲ್ಲೆ ಹೊರತುಪಡಿಸಿ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News