ಕೊಡಗು ಪ್ರೆಸ್‍ಕ್ಲಬ್ ಡೇ ಕಾರ್ಯಕ್ರಮ : ಪತ್ರಕರ್ತರಿಗೆ ಸನ್ಮಾನ
ಮಡಿಕೇರಿ, ಫೆ.11:ಸದಾ ದಣಿವರಿಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಕೊಡಗಿನ ಪತ್ರಕರ್ತರು, ರವಿವಾರ ಇಡೀ ದಿನವನ್ನು ತಮ್ಮ ಕುಟುಂಬ ಹಾಗೂ ಸಹೋದ್ಯೋಗಿಗಳೊಂದಿಗೆ ಸಂಭ್ರಮದಿಂದ ಕಳೆದರು. ಕೊಡಗು ಪ್ರೆಸ್‍ಕ್ಲಬ್‍ನ 19ನೇ ವಾರ್ಷಿಕೋತ್ಸವವು, ಪತ್ರಕರ್ತರ ಕುಟುಂಬಗಳ ಸಮ್ಮಿಲನಕ್ಕೆ ಸಾಕ್ಷಿಯಾಯ್ತು. ಮನರಂಜನಾ ಸ್ಪರ್ಧೆಗಳು, ಸಾಧಕರಿಗೆ ಸನ್ಮಾನ, ಬಹುಮಾನ ವಿತರಣೆ, ಬೀಳ್ಕೊಡುಗೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ಸಂಭ್ರಮ, ಅವಿಸ್ಮರಣೀಯವಾಯ್ತು. ಒಟ್ಟಾಗಿ ರಾತ್ರಿಯ ಭೋಜನ ಸ್ವೀಕರಿಸಿ ಎಲ್ಲರೂ ದಿನವನ್ನು ಅರ್ಥಪೂರ್ಣವಾಗಿ ಕಳೆದರು.
ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಮಾತನಾಡಿ, ಮಾಧ್ಯಮಗಳು ಸತ್ಯಕ್ಕೆ ಕನ್ನಡಿ ಹಿಡಿವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕೆಂದು ಕಿವಿಮಾತು ಹೇಳಿದರು. ಎಲ್ಲ ಜಂಜಡಗಳನ್ನೂ ಮರೆತು ಪತ್ರಕರ್ತರು ವರ್ಷಕ್ಕೊಮ್ಮೆ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಬೆರೆತು ಸಂಭ್ರಮಿಸುವ ಇಂಥ ಕಾರ್ಯಕ್ರಮಗಳು, ಪ್ರತಿಭೆಗಳ ವಿಕಾಸಕ್ಕೂ ಸಹಕಾರಿ ಎಂದು ಅವರು ಹೇಳಿದರು.
ಕೊಡಗು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಚಿ.ನಾ. ಸೋಮೇಶ್ ಮಾತನಾಡಿ, ನಾವೆಲ್ಲರೂ ಯಶಸ್ಸಿನ ಹಾದಿಯೆಡೆಗೆ ಸಾಗುವಾಗ ಎಡವಿದರೂ, ಇದನ್ನು ಬೇರೆಯವರು ಬೊಟ್ಟು ಮಾಡುತ್ತಾರೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕೆಂದು ಹೇಳಿದರು. ಛದ್ಮವೇಷ ಸ್ಪರ್ಧೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಬದುಕಿನ ಮೌಲ್ಯಯುತ ಸಂದೇಶವೊಂದನ್ನು ಈ ಸ್ಪರ್ಧೆ ನೀಡಿದೆ ಎಂದು ಹೇಳಿದರು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೆಸ್‍ಕ್ಲಬ್ ಮತ್ತು ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಬದುಕಿನಲ್ಲಿ ಮೇಲೇರಿದವರ ಪರವಾಗಿ ಸುದ್ದಿ ಮಾಡುವುದು ಸಾಮಾನ್ಯ. ಆದರೆ, ಧ್ವನಿಯೇ ಇಲ್ಲದವರಿಗೆ ಮಾಧ್ಯಮಗಳು ಧ್ವನಿಯಾದರೆ, ಅದು ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಹೇಳಿದರು.
ಇದೇ ವೇಳೆ ಹಾಸನ ಜಿಲ್ಲೆಗೆ ವರ್ಗವಾಗಿರುವ ಟಿವಿ ನೈನ್ ವರದಿಗಾರ ಹಾಗೂ ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಬಿ. ಮಂಜುನಾಥ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯ್ತು. ಪತ್ರಕರ್ತರ ನಡುವಿನ ಬಾಂಧವ್ಯ ಮತ್ತು ವಿಶ್ವಾಸ ಇನ್ನಷ್ಟು ಹೆಚ್ಚಬೇಕೆಂಬ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ವಿಭಿನ್ನವಾಗಿ ರೂಪಿಸಲಾಗಿದೆ ಎಂದು, ಮಂಜುನಾಥ್ ಹೇಳಿದರು. ಒಂದೇ ದಾರಿಯಲ್ಲಿ ನಡೆಯುವಾಗ ಎದುರಾಗುವ ಭಿನ್ನಾಭಿಪ್ರಾಯಗಳನ್ನು ದೂರಮಾಡಿಕೊಂಡು ಪತ್ರಕರ್ತರು, ಪರಪಸ್ಪರ ಬಾಂಧವ್ಯ ಗಟ್ಟಿಗೊಳಿಸಿಕೊಳ್ಳಬೇಕೆಂದು ಅವರು ಕಿವಿಮಾತು ಹೇಳಿದರು.
ಪತ್ರಕರ್ತ ದಿವಂಗತ ಕೆ.ಬಿ. ಮಹಂತೇಶ್ ಸ್ಮರಣಾರ್ಥ ಪ್ರೆಸ್‍ಕ್ಲಬ್ ವತಿಯಿಂದ ನೀಡಲಾಗುವ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಯನ್ನು ಬಿಟಿವಿ ವರದಿಗಾರ ಗೋಪಾಲ್ ಸೋಮಯ್ಯ ಅವರಿಗೆ ಪ್ರದಾನ ಮಾಡಿ, ಸನ್ಮಾನಿಸಲಾಯ್ತು. ವಿವಿಧ ಸಂಘಸಂಸ್ಥೆಗಳಿಗೆ ಆಯ್ಕೆಯಾದ ಐತಿಚಂಡ ರಮೇಶ್ ಉತ್ತಪ್ಪ, ಅಜ್ಜಮಾಡ ಕುಶಾಲಪ್ಪ, ಬೊಳ್ಳಜಿರ ಅಯ್ಯಪ್ಪ, ಅಮ್ಮುಣಿಚಂಡ ಪ್ರವೀಣ್ ಚಂಗಪ್ಪ, ಎಸ್.ಡಿ. ವಿಜೇತ್, ಬಿ.ಎ.ಭಾಸ್ಕರ್ ಹಾಗೂ ವಿಜಯ ಕುಮಾರ್ ಅವರನ್ನು ಸನ್ಮಾನಿಸಲಾಯ್ತು. ಡಾಕ್ಟರೇಟ್ ಪದವಿ ಪಡೆದ ಡಾ. ಉಳ್ಳಿಯಡ ಪೂವಯ್ಯ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತ ಅಜ್ಜಮಾಡ ರಮೇಶ್ ಕುಟ್ಟಪ್ಪ, ವಿಶ್ವ ಫೋಟೋಗ್ರಫಿ ಪ್ರಶಸ್ತಿ ಪುರಸ್ಕೃತ ಜೀವನ್ ಪಾಲಕ್ಕಾಡ್, ರಾಜ್ಯ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತರಾದ ಕಾಯಪಂಡ ಶಶಿ ಸೋಮಯ್ಯ ಹಾಗೂ ಎಂ.ಎನ್. ಚಂದ್ರಮೋಹನ್ ಸನ್ಮಾನಕ್ಕೆ ಭಾಜನರಾದರು.
ದಿನದ ಅಂಗವಾಗಿ ಪತ್ರಕರ್ತರು ಮತ್ತು ಅವರ ಕುಟುಂಬಸ್ಥರಿಗೆ ಛದ್ಮವೇಷ, ಗಾಯನ, ನೃತ್ಯ ಸೇರಿದಂತೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಒಳಾಂಗಣ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮತ್ತು ವಿವಿಧ ಮನರಂಜನಾ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಮನರಂಜನಾ ಕ್ರೀಡೆಗಳನ್ನು ಅಜೀಜ್, ರೆಜಿತ್ ಮತ್ತು ಸುಬ್ರಮಣಿ ನಿರ್ವಹಿಸಿದರು. ಸನ್ಮಾನಿತರನ್ನು ವಿಘ್ನೇಶ್ ಭೂತನಕಾಡು ಪರಿಚಯಿಸಿದರು.