×
Ad

ಕಾನೂನಬಾಹಿರವಾಗಿ ಖಾಲಿ ಕಾಗದದ ಮೇಲೆ ಸಹಿ ಪಡೆದ ಪ್ರಕರಣ : ನಾಲ್ವರ ವಿರುದ್ದ ಕೇಸ್ ದಾಖಲಿಸಲು ನ್ಯಾಯಾಲಯ ಆದೇಶ

Update: 2018-02-11 23:01 IST

ಶಿವಮೊಗ್ಗ, ಫೆ. 11: ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಕಾರ್ಮಿಕರಿಗೆ ಸ್ವಯಂ ನಿವೃತ್ತಿ - ಪರಿಹಾರ ಯೋಜನೆಯಡಿ ಬರಬೇಕಾದ ಹಣದ ಸಂಬಂಧ, ಕಾರ್ಖಾನೆ ಆಡಳಿತ ಮಂಡಳಿಯು ಖಾಲಿ ಮುದ್ರಣ ಕಾಗದದ ಮೇಲೆ ಕಾರ್ಮಿಕರ ಸಹಿ ಪಡೆದಿರುವ ಪ್ರಮಾಣಪತ್ರದ ಕುರಿತಂತೆ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ, ಭದ್ರಾವತಿಯ ಜೆಎಂಎಫ್‍ಸಿ ನ್ಯಾಯಾಲಯ ಇತ್ತೀಚೆಗೆ ಆದೇಶಿಸಿದೆ. 
ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಎಸ್.ಚಂದ್ರಶೇಖರ್ ದಾಖಲಿಸಿರುವ ಖಾಸಗಿ ದೂರಿನ ಆಧಾರದ ಮೇಲೆ ತನಿಖೆ ಕೈಗೊಳ್ಳುವಂತೆ ಭದ್ರಾವತಿ ಕಾಗದ ನಗರ ಪೊಲೀಸ್ ಠಾಣೆಗೆ ನ್ಯಾಯಾಲಯ ಆದೇಶಿಸಿದೆ. ಅದರಂತೆ ಎಂಪಿಎಂ ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿ ಜಿ.ಎಸ್.ಶ್ರೀನಿವಾಸ್, ವ್ಯವಸ್ಥಾಪಕ ನಿರ್ದೇಶಕ ನವೀನ್‍ರಾಜ್ ಸಿಂಗ್, ಕಾರ್ಮಿಕ ಸಂಘದ ಅಧ್ಯಕ್ಷ ಸಿ.ಎಸ್.ಶಿವಮೂರ್ತಿ ಮತ್ತು ಇದಕ್ಕೆ ಸಹಕರಿಸಿದ ನೋಟರಿ ಶೋಭ ಅವರ ಮೇಲೆ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಇದು ಕಾರ್ಖಾನೆ ವಲಯದಲ್ಲಿ ಭಾರೀ ಚರ್ಚೆಗೆಡೆ ಮಾಡಿಕೊಟ್ಟಿದೆ. 

ಆರೋಪವೇನು?: ಎಂಪಿಎಂ ಕಾರ್ಖಾನೆಯ ಸ್ವಯಂ ನಿವೃತ್ತಿ  - ಪರಿಹಾರ ಯೋಜನೆಯಡಿ, ಕಾರ್ಮಿಕರಿಗೆ ಹಣದ ಸಂಬಂಧ ಒಪ್ಪಿಗೆ ಪತ್ರದೊಂದಿಗೆ ಪ್ರಮಾಣ ಪತ್ರ ನೀಡುವಂತೆ ಆಡಳಿತ ಮಂಡಳಿ ಸೂಚಿಸಿತ್ತು. ಅದರಂತೆ ಕಾರ್ಮಿಕರು ಒಪ್ಪಿಗೆ ಪತ್ರದೊಂದಿಗೆ 20 ರೂ. ಛಾಪಾ ಕಾಗದದಲ್ಲಿ, 'ಸ್ವಯಂ ನಿವೃತ್ತಿ ಯೋಜನೆಯಿಂದ ಬರುವ ಹಣ ಪಡೆದು ಕಾರ್ಖಾನೆ ಜೊತೆಗಿನ ಎಲ್ಲ ಹಕ್ಕು ಭಾಧ್ಯತೆಗಳನ್ನು ಮುಕ್ತಾಯ ಮಾಡಿಕೊಳ್ಳುವ' ಹೇಳಿಕೆಯೊಳಗೊಂಡ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದರು. 

ಆದರೆ ಈ ಪ್ರಮಾಣ ಪತ್ರದಲ್ಲಿ ಸ್ವಯಂ ನಿವೃತ್ತಿಯ ದಿನಾಂಕ, ಪಡೆಯುವ ಮೊತ್ತದ ವಿಭಾಗವು ಖಾಲಿ ಬಿಡಲಾಗಿತ್ತು. ಅದನ್ನು ತಿದ್ದುಪಡಿಗೆ ಒಳಪಡಿಸಿ, ಪ್ರಮಾಣಿಕೃತ ವ್ಯಕ್ತಿಯ ಸಹಿ ಪಡೆದು ಅದನ್ನು ನೋಟರಿಯವರ ಮೂಲಕ ದೃಢೀಕರಿಸಲಾಗಿತ್ತು. ಈ ಪ್ರಮಾಣ ಪತ್ರ ಅಪೂರ್ಣವಾಗಿದ್ದು, ಈ ಮೂಲಕ ಕಾರ್ಮಿಕರಿಗೆ ಬರಬೇಕಾದ ಹಣ ಮತ್ತು ಅವರ ಸೇವಾವಧಿಯ ವಿವರವನ್ನು ಪ್ರಮಾಣಕರ್ತರಿಗೆ ತಿಳಿಸದೆ ಇರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. 

ನಿಯಮ ಪ್ರಕಾರ ಸ್ವಯಂ ನಿವೃತ್ತಿ ಯೋಜನೆಗೆ ಮುದ್ರಣ ಕಾಗದದ ಮೇಲೆ ಕಾರ್ಮಿಕರು ಅಥವಾ ನೌಕರರಿಂದ ಸಹಿ ಮಾಡಿಸಿಕೊಳ್ಳುವಂತಿಲ್ಲ. ಆದರೆ ಇಲ್ಲಿ ಖಾಲಿ ಮುದ್ರಣ ಕಾಗದದ ಮೇಲೆ ಆಡಳಿತ ಮಂಡಳಿಯ ಸಹಿ ಮಾಡಿಸಿಕೊಂಡಿದೆ. ಅದಕ್ಕೆ ಕಾರ್ಮಿಕ ಸಂಘದ ಅಧ್ಯಕ್ಷರು ಕುಮ್ಮಕ್ಕು ನೀಡಿದ್ದಾರೆ ಎಂದು ದೂರುದಾರ ಎಸ್.ಚಂದ್ರಶೇಖರ್‍ರವರ ಆರೋಪವಾಗಿದೆ. 

ಈ ಕುರಿತಂತೆ ಸಮಗ್ರ ದಾಖಲೆಗಳೊಂದಿಗೆ ಸ್ಥಳೀಯ ನ್ಯಾಯಾಲಯದಲ್ಲಿ ಫೆ. 3 ರಂದು ಖಾಸಗಿ ದೂರು ದಾಖಲಿಸಿದ್ದರು. ದೂರು ಮತ್ತು ದಾಖಲೆಗಳ ಪರಿಶೀಲನೆ ನಡೆಸಿದ ನ್ಯಾಯಾಧೀಶರು ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದೆ. ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ 197, 198, 190, 200, 414, 417, 420 ರ ಅಡಿ ಮೊಕದ್ದಮೆ ದಾಖಲಿಸಿ ಕಾನೂನುಬಾಹಿರವಾಗಿ ಸಹಿ ಮಾಡಿಸಿಕೊಂಡು, ಮುದ್ರಣ ಕಾಗದಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಮಗ್ರ ವರದಿ ಸಲ್ಲಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News