×
Ad

ಮಡಿಕೇರಿ; ಬಿಜೆಪಿಯಿಂದ ಪ್ರತಿಭಟನೆಯ ಪ್ರಹಸನ : ನಗರ ಕಾಂಗ್ರೆಸ್ ಟೀಕೆ

Update: 2018-02-11 23:23 IST

ಮಡಿಕೇರಿ,ಫೆ.11 :ನಗರಸಭೆಯ ವಿರುದ್ಧ ಬಿಜೆಪಿ ಇತ್ತೀಚೆಗೆ ನಡೆಸಿದ ಪ್ರತಿಭಟನೆ ಒಂದು ನಾಟಕೀಯ ಬೆಳವಣಿಗೆಯಾಗಿದೆ ಎಂದು ಟೀಕಿಸಿರುವ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆ.ಯು.ಅಬ್ದುಲ್ ರಝಾಕ್, ಈ ಪ್ರಹಸನದ ಔಚಿತ್ಯದ ಬಗ್ಗೆ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯ ಸರಕಾರದ ಸಹಕಾರದಿಂದ ನಗರಸಭೆಗೆ ಸಾಕಷ್ಟು ಅನುದಾನ ಲಭ್ಯವಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆಯಾಗಿಲ್ಲ ಮತ್ತು ಕಾಂಗ್ರೆಸ್ ಸದಸ್ಯರುಗಳು ಉತ್ತಮ ರೀತಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹದ ಗಿಮಿಕ್‍ಗಳನ್ನು ಮಾಡಲಾಗುತ್ತಿದೆ. ನಗರಸಭೆಯಲ್ಲಿ ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಬಿಜೆಪಿ ಯವರೇ ಆಗಿದ್ದಾರೆ. ಹೀಗಿದ್ದೂ ಜನಪರ ಕಾಳಜಿ ವಹಿಸಿ ಅಭಿವೃದ್ಧಿ ಕಾರ್ಯಗಳಲ್ಲಿ ಒಗ್ಗಟ್ಟನ್ನು ಪ್ರದರ್ಶಿಸದೆ ಕೇವಲ ಕಾಂಗ್ರೆಸ್‍ನ್ನು ಟೀಕಿಸುವುದರಲ್ಲೇ ಬಿಜೆಪಿ ಮಂದಿ ಕಾಲಹರಣ ಮಾಡುತ್ತಿದ್ದಾರೆ ಎಂದು ಅಬ್ದುಲ್ ರಝಾಕ್ ಆರೋಪಿಸಿದ್ದಾರೆ. 

ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಹಾಗೂ ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಅವರು ನಗರದ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಕಾಳಜಿ ತೋರಿ ಸರಕಾರದಿಂದ ಅನುದಾನ ದೊರಕಿಸಿ ಕೊಡುತ್ತಿದ್ದಾರೆ. ಮತ್ತಷ್ಟು ಹಣವನ್ನು ತರಲು ಇವರಿಬ್ಬರು ಕಾರ್ಯೋನ್ಮುಖರಾಗಿದ್ದು, ಇದನ್ನು ಬಿಜೆಪಿ ಮಂದಿ ಸಹಿಸುತ್ತಿಲ್ಲವೆಂದು ಅವರು ಟೀಕಿಸಿದ್ದಾರೆ.

ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯಿಂದಾಗಿ ಜನಸಾಮಾನ್ಯರು ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಬೆಲೆ ಏರಿಕೆ ವಿರುದ್ಧ ಬಿಜೆಪಿ ಮಂದಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರೆ ಅದಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅಬ್ದುಲ್ ರಜಾóಕ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News