ಕಾಶ್ಮೀರದ ಆಕ್ರೋಶಕ್ಕೆ ಮೋದಿಯೆಷ್ಟು ಹೊಣೆ?

Update: 2018-02-12 04:12 GMT

ನೋಟು ನಿಷೇಧ ತನ್ನ ಉದ್ದೇಶ ಸಾಧಿಸುವಲ್ಲಿ ವಿಫಲವಾದಾಗ ಪ್ರಧಾನಿ ಮೋದಿಯವರು ಕೈ ತೋರಿಸಿದ್ದು ಕಾಶ್ಮೀರದ ಕಡೆಗೆ. ‘ನೋಟು ನಿಷೇಧಿಂದ ಕಾಶ್ಮೀರದಲ್ಲಿ ಉಗ್ರವಾದಿಗಳು ಕಡಿಮೆಯಾಗಿದ್ದಾರೆ. ಕಲ್ಲುತೂರಾಟ ನಿಂತಿದೆ’ ಎಂದು ಹೇಳಿದರು. ಕಾಶ್ಮೀರದಲ್ಲಿ ಉಗ್ರವಾದಿಗಳು ಯುವಕರಿಗೆ ಐನೂರು ರೂಪಾಯಿಯ ನೋಟು ಕೊಟ್ಟು ಸೈನಿಕರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ನೋಟು ನಿಷೇಧದಿಂದಾಗಿ ಯುವಕರ ಕೈಗೆ ಐನೂರರ ನೋಟುಗಳು ರವಾನೆಯಾಗುವುದು ನಿಂತಿದೆ ಎಂದೂ ತಮ್ಮ ಅರ್ಥ ಕ್ರಾಂತಿಗೆ ಹೊಸ ವ್ಯಾಖ್ಯಾನ ನೀಡಿದರು. ಅಂದರೆ ಕಾಶ್ಮೀರದಲ್ಲಿ ವಿಧಿಸಲಾಗಿರುವ ಕರ್ಫ್ಯೂವನ್ನು ನಿವಾರಿಸುವುದಕ್ಕಾಗಿ ಮೋದಿಯವರು ಇಡೀ ದೇಶದ ಮೇಲೆ ಅಘೋಷಿತ ಕರ್ಫ್ಯೂವನ್ನು ಹೇರಿದರು.

ವಿಪರ್ಯಾಸವೆಂದರೆ ಕನಿಷ್ಠ ಮೋದಿ ಹೇಳಿದಂತೆ, ಕಾಶ್ಮೀರದಲ್ಲಿ ಶಾಂತಿ ನಿರ್ಮಾಣವಾಗಿದ್ದರೂ, ಎಟಿಎಂನ ಮುಂದೆ ಕ್ಯೂ ನಿಂತ ಶ್ರೀಸಾಮಾನ್ಯನ ತ್ಯಾಗಕ್ಕೆ ನ್ಯಾಯ ಸಿಗುತ್ತಿತ್ತು. ಆದರೆ ಅದೂ ನಡೆಯಲಿಲ್ಲ. ಬದಲಿಗೆ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದೆ. ಒಂದೆಡೆ ಗಡಿಯಲ್ಲಿ ಪಾಕ್‌ನ ಗುಂಡಿಗೆ ನಮ್ಮ ಸೈನಿಕರು ಬಲಿಯಾಗುತ್ತಿದ್ದರೆ, ಉಗ್ರರು ನೇರವಾಗಿ ಸೇನಾ ಶಿಬಿರದ ಮೇಲೆಯೇ ದಾಳಿ ನಡೆಸುತ್ತಿದ್ದಾರೆ. ಶನಿವಾರ ಮುಂಜಾನೆ ಜಮ್ಮುವಿನ ಸಂಜುವಾನ್ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದು ಐವರು ಸೇನಾಧಿಕಾರಿಗಳನ್ನು ಹತ್ಯೆ ಮಾಡಿದ್ದಾರೆ. ನೇರವಾಗಿ ಸೇನಾ ಶಿಬಿರದ ಮೇಲೆ ದಾಳಿ ನಡೆಸುತ್ತಿರುವ ಈ ಉಗ್ರವಾದಿಗಳು ಐನೂರು ರೂಪಾಯಿಯ ಆಸೆಗಾಗಿ ದಾಳಿ ನಡೆಸಿದ್ದಾರೆ ಎಂದು ಮೋದಿ ಈಗಲೂ ಹೇಳುತ್ತಾರೆಯೇ? ನೋಟು ನಿಷೇಧದ ಬಳಿಕವೂ ಈ ಉಗ್ರರಿಗೆ ಐನೂರು ರೂಪಾಯಿಯ ಹೊಸ ನೋಟು ಎಲ್ಲಿಂದ ದೊರಕಿತು?

ಯುಪಿಎ ಅಧಿಕಾರಾವಧಿಯಲ್ಲಿ ನಾಗರಿಕರು ಈ ಮಟ್ಟಿಗೆ ಬಹಿರಂಗವಾಗಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡಿರಲಿಲ್ಲ. ದೀರ್ಘಾವಧಿಯ ಕರ್ಫ್ಯೂವನ್ನು ಹೇರುವಂತಹ ಸ್ಥಿತಿಯೂ ನಿರ್ಮಾಣವಾಗಿರಲಿಲ್ಲ. ಮುಖ್ಯವಾಗಿ ಯುಪಿಎಯ ಒಂದು ದಶಕದ ಆಳ್ವಿಕೆಯಲ್ಲಿ ಉಗ್ರರು ಸೇನೆಯ ಮೇಲೆ ನಡೆಸಿದ ದಾಳಿಗೆ ಹೋಲಿಸಿದರೆ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಈ ಮೂರೂವರೆ ವರ್ಷಗಳಲ್ಲಿ ನಡೆದ ದಾಳಿಯೇ ಹೆಚ್ಚು. ದೊಡ್ಡ ಸಂಖ್ಯೆಯಲ್ಲಿ ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸ್ವತಃ ಬಿಜೆಪಿಯ ಸ್ನೇಹಿತರಾಗಿರುವ ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳುವಂತೆ, 2017ರಲ್ಲಿ ಉಗ್ರವಾದಿಗಳ ಕಡೆಗೆ ಸೇರುವ ಯುವಕರ ಸಂಖ್ಯೆ ಶೇ. 44ರಷ್ಟು ಹೆಚ್ಚಿದೆ. ಇದೇನೂ ಬಾಯಿ ಮಾತಿನ ಹೇಳಿಕೆಯಲ್ಲ. ಸರಕಾರಿ ಅಂಕಿ ಅಂಶಗಳ ಆಧಾರದಿಂದ ಮುಖ್ಯಮಂತ್ರಿ ಮೆಹಬೂಬ ಅವರು ನಾಡಿಗೆ ನೀಡಿರುವ ಲಿಖಿತ ಹೇಳಿಕೆಯಾಗಿದೆ. ಅಂದರೆ ನೋಟು ನಿಷೇಧದ ಬಳಿಕ, ಯುವಕರು ಉಗ್ರವಾದದ ಕಡೆಗೆ ಇನ್ನಷ್ಟು ಆಸಕ್ತಿಯನ್ನು ಹೊಂದಿದ್ದಾರೆ ಎನ್ನುವುದು ಬಿಜೆಪಿ-ಪಿಡಿಪಿ ಮೈತ್ರಿ ಸರಕಾರವೇ ಒಪ್ಪಿಕೊಂಡಂತಾಯಿತು. ಇದು ಯಾಕಾಯಿತು ಎನ್ನುವುದನ್ನು ಪ್ರಧಾನಿ ಮೋದಿಯವರೇ ವಿವರಿಸಬೇಕು.

ಸೇನೆ ನಡೆಸಿದ ಸರ್ಜಿಕಲ್ ದಾಳಿಯನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸಿದ ಬಿಜೆಪಿ ಸರಕಾರ, ಸರ್ಜಿಕಲ್ ದಾಳಿಯ ಬಳಿಕವೂ ಹೆಚ್ಚಳವಾಗಿರುವ ಉಗ್ರರ ಉಪಟಳದ ಬಗ್ಗೆ ದೇಶಕ್ಕೆ ಸ್ಪಷ್ಟೀಕರಣ ನೀಡಬೇಕು. ಕಾಶ್ಮೀರದಲ್ಲಿ ಭಾರತದ ಸೈನಿಕರ ಹತ್ಯೆಯ ಕುರಿತಂತೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದಾಗ, ಪ್ರಧಾನಿ ನರೇಂದ್ರ ಮೋದಿಯವರು ‘ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ’ ಅವರ ಕಡೆಗೆ ಕೈ ತೋರಿಸಿ ಜಾರಿಗೊಳ್ಳಲು ಯತ್ನಿಸಿದರು. ಜವಾಹರಲಾಲ್ ನೆಹರೂ ಈ ದೇಶದ ಪ್ರಧಾನಿಯಾಗದೆ ವಲ್ಲಭಭಾಯ್ ಪಟೇಲ್ ಆಗಿದ್ದಿದ್ದರೆ ಕಾಶ್ಮೀರ ಸಮಸ್ಯೆಯೇ ಇರುತ್ತಿರಲಿಲ್ಲ ಎಂದು ಬಾಲಿಶ ಹೇಳಿಕೆಯನ್ನು ನರೇಂದ್ರ ಮೋದಿ ನೀಡಿದರು. ಇಂತಹ ಹೇಳಿಕೆಗಳನ್ನು ಈ ಹಿಂದೆ ಆರೆಸ್ಸೆಸ್ ಮುಖಂಡರು ಹಲವು ಬಾರಿ ನೀಡಿದ್ದಾರೆ. ಆದರೆ ಒಬ್ಬ ಪ್ರಧಾನಿಯಾಗಿ ಸದನದಲ್ಲಿ ಆರೆಸ್ಸೆಸ್‌ನ ಗಿಳಿಪಾಠವನ್ನು ಮುಂದಿಟ್ಟುಕೊಂಡು, ಸೈನಿಕರ ಸಾವನ್ನು ಸಮರ್ಥಿಸಿಕೊಂಡಿರುವುದು ನಾಚಿಕೆಗೇಡು. ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿರುವುದು, ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎನ್ನುವ ಕಾರಣಕ್ಕಾಗಿಯೇ ಹೊರತು, ಯಾರ ತಪ್ಪಿನಿಂದ ಕಾಶ್ಮೀರ ವಿವಾದ ಹುಟ್ಟಿಕೊಂಡಿದೆ ಎನ್ನುವುದನ್ನು ಸಂಶೋಧನೆ ಮಾಡುವುದಕ್ಕಲ್ಲ.

ಇಷ್ಟಕ್ಕೂ ಪಟೇಲ್ ಪಾಕಿಸ್ತಾನ ವಿಭಜನೆಯನ್ನು ಬೆಂಬಲಿಸಿದ್ದಾರೆ ಎನ್ನುವುದನ್ನು ಇತಿಹಾಸ ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲ ಕಾಶ್ಮೀರವನ್ನು ಭಾರತದ ಜೊತೆ ಸೇರಿಸುವ ಕುರಿತಂತೆಯೂ ಅವರಿಗೆ ಆಸಕ್ತಿಯಿರಲಿಲ್ಲ. ಶೇಖ್ ಅಬ್ದುಲ್ಲಾರಂತಹ ಹಲವು ಮುತ್ಸದ್ದಿಗಳ ಫಲದಿಂದ ಕಾಶ್ಮೀರ ಇಂದು ಭಾರತದಲ್ಲೇ ಉಳಿದುಕೊಂಡಿದೆ. ಜವಾಹರಲಾಲ್ ನೆಹರೂ ಅವರ ದೂರದೃಷ್ಟಿಯಿಂದಾಗಿ ಈ ದೇಶ ವಿಜ್ಞಾನ, ತಂತ್ರಜ್ಞಾನ, ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಇಷ್ಟಾದರೂ ಇದೆ. ನೆಹರೂ ಅವರ ಮುತ್ಸದ್ದಿತನ ಪಟೇಲರಿಗೆ ಎಂದೂ ಇರಲಿಲ್ಲ. ಈ ದೇಶವನ್ನು ಅಭಿವೃದ್ಧಿಯೆಡೆಗೆ ಮುನ್ನಡೆಸುವುದಕ್ಕಾಗಿ ನೆಹರೂ ಹಾಕಿಕೊಟ್ಟ ಮಾರ್ಗದರ್ಶನವನ್ನು ನಿರ್ಲಕ್ಷಿಸಿ, ಕಾವಿಧಾರಿಗಳು, ಧರ್ಮಾಂಧರು ಮತ್ತು ಬೃಹತ್ ಉದ್ಯಮಿಗಳ ಮೂಗಿನ ನೇರಕ್ಕೆ ಆಡಳಿತ ನಡೆಸುತ್ತಿರುವುದರಿಂದ ಕಾಶ್ಮೀರ ಮಾತ್ರವಲ್ಲ, ಇಡೀ ದೇಶದ ಪರಿಸ್ಥಿತಿ ವಿಷಮ ಸ್ಥಿತಿಗೆ ತಲುಪಿದೆ. ಉಗ್ರವಾದ ಮತ್ತು ಕಾಶ್ಮೀರದ ಕುರಿತಂತೆ ಬಿಜೆಪಿಯ ದ್ವಂದ್ವ ನಿಲುವು ಕಾಶ್ಮೀರವನ್ನು ಇನ್ನಷ್ಟು ಉದ್ವಿಗ್ನಗೊಳಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದೆಡೆ ಕಾಶ್ಮೀರ ಪ್ರತ್ಯೇಕತಾವಾದಿಗಳ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ, ಕಾಶ್ಮೀರದ ಉಗ್ರವಾದಿಗಳ ಕುರಿತಂತೆ ಮೃದುಧೋರಣೆಯನ್ನು ಹೊಂದಿರುವ ಪಿಡಿಪಿಯ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿತು. ಬಿಜೆಪಿಯ ಜೊತೆಗೇ ಆರೆಸ್ಸೆಸ್ ಕೂಡ ಕಾಶ್ಮೀರದ ಸೂಕ್ಷ್ಮ ವಿಷಯಗಳಲ್ಲಿ ಮೂಗು ತೂರಿಸಿತು. ಇದು ಕಾಶ್ಮೀರಿಗಳಲ್ಲಿ ಸಹಜವಾಗಿಯೇ ಇನ್ನಷ್ಟು ಅಭದ್ರತೆಯನ್ನು ಸೃಷ್ಟಿಸಿತು.

ನಿರಾಶ್ರಿತ ಪಂಡಿತರಿಗಾಗಿ ೆಟ್ಟೋವನ್ನು ನಿರ್ಮಾಣ ಮಾಡುವ ಸರಕಾರದ ಪ್ರಸ್ತಾಪವೂ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಇದೇ ಸಂದರ್ಭದಲ್ಲಿ ಸೈನಿಕರು ನಾಗರಿಕರ ಮೇಲೆ ನಡೆಸುತ್ತಾ ಬಂದ ದೌರ್ಜನ್ಯಗಳಿಂದಾಗಿ, ಕಾಶ್ಮೀರಿಗಳು ಬಹಿರಂಗವಾಗಿಯೇ ಪ್ರತ್ಯೇಕತಾವಾದಿಗಳ ಪರವಾಗಿ ಘೋಷಣೆಗಳನ್ನು ಕೂಗ ತೊಡಗಿದರು. ಜನಸಾಮಾನ್ಯರ ಮೇಲೆ ಪೆಲೆಟ್ ಗನ್ ಬಳಕೆ, ಮಿಲಿಟರಿ ಜೀಪಿಗೆ ಕಾಶ್ಮೀರಿಗಳನ್ನು ಕಟ್ಟಿ ಗುರಾಣಿಗಳನ್ನು ಬಳಸಿರುವುದು ಸಹಜವಾಗಿಯೇ ಅವರನ್ನು ಕೆರಳಿಸಿತು. ಸೇನೆ ಸರಕಾರದ ಮೂಗಿನ ನೇರಕ್ಕೆ ಕೆಲಸ ಮಾಡದೆ ಆರೆಸ್ಸೆಸ್‌ನ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿದೆಯೋ ಎಂಬಂತೆ ಅಲ್ಲಿ ಅನಾಹುತಗಳನ್ನು ಮಾಡತೊಡಗಿತು. ಉಗ್ರರು ಮತ್ತು ಪ್ರತಿಭಟನಾಕಾರರ ನಡುವಿನ ಅಂತರವನ್ನು ಸೇನೆ ಮರೆತ ಕಾರಣದಿಂದ ಜನರು ಮಾನಸಿಕವಾಗಿ ಉಗ್ರವಾದಿಗಳ ಕುರಿತು ಮೃದುವಾಗ ತೊಡಗಿದರು. ಇದೇ ಸಂದರ್ಭದಲ್ಲಿ ನೋಟು ನಿಷೇಧ ಭಾರತದ ಮೇಲೆ ಪ್ರಭಾವ ಬೀರಿದಂತೆ ಕಾಶ್ಮೀರದ ಜನರ ಉದ್ಯೋಗಗಳ ಮೇಲೂ ಪ್ರಭಾವ ಬೀರಿದೆ. ನಿರುದ್ಯೋಗಿ ಕಾಶ್ಮೀರಿಗಳು ಸಹಜವಾಗಿಯೇ ಉಗ್ರರ ಬಲೆಗೆ ಬೀಳತೊಡಗಿದರು. ಇವೆಲ್ಲವನ್ನು ಅರ್ಥ ಮಾಡಿಕೊಳ್ಳದ ಕೇಂದ್ರ ಸರಕಾರ ಕಾಶ್ಮೀರ ಸಮಸ್ಯೆಯನ್ನು ಇನ್ನಷ್ಟು ಗೋಜಲುಗಳನ್ನಾಗಿಸಿ ನೆಹರೂ ಕಡೆಗೆ ಕೈ ತೋರಿಸುತ್ತಿರುವುದು ತಮಾಷೆಯಾಗಿದೆ. ಮೊತ್ತ ಮೊದಲು ಸರಕಾರ, ಕಾಶ್ಮೀರವೆಂದರೆ ಅಲ್ಲಿನ ಜನರು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಕಾಶ್ಮೀರದ ನೆಲ ಬೇಕು, ಆದರೆ ಕಾಶ್ಮೀರಿಗಳು ಬೇಡ ಎನ್ನುವ ಮಾನಸಿಕತೆ ಖಂಡಿತವಾಗಿಯೂ ಕಾಶ್ಮೀರವನ್ನು ಭಾರತದ ಜೊತೆಗೆ ಉಳಿಸಿಕೊಡಲಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News