ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡದ ನರೇಂದ್ರ ಮೋದಿ, ರಾಹುಲ್ ಗಾಂಧಿ: ಕುಮಾರಸ್ವಾಮಿ ಆರೋಪ
ಶಿವಮೊಗ್ಗ, ಫೆ. 12: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡದೆ, ಕೇವಲ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಹೇಳಿ ಹೋಗಿದ್ದಾರೆ. ರಾಜ್ಯದ ಸಮಸ್ಯೆ ಪರಿಹಾರದ ಕಡೆಗೆ ಪ್ರಧಾನಿ ಗಮನಹರಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸೋಮವಾರ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊಸಮನೆ ಗ್ರಾಮದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದೆಡೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ದ ಮಾತನಾಡುತ್ತಿದ್ದಾರೆ. ಮತ್ತೊಂದೆಡೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡದೆ ರೈತರಿಗೆ ಟೋಪಿ ಹಾಕಿರುವ ಕಾಂಗ್ರೆಸ್ ನಾಯಕರು, ಇದೀಗ ರಾಜ್ಯ ಸುತ್ತಾಡುತ್ತಿರುವ ರಾಹುಲ್ ಗಾಂಧಿ ಮೂಲಕ ಸಾಲ ಮನ್ನಾ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ರೈತರ ಸಾಲ, ಕುಡಿಯುವ ನೀರಿನ ಸಮಸ್ಯೆ, ಅಭಿವೃದ್ದಿ ಯೋಜನೆಗಳ ಅನುಷ್ಠಾನದಲ್ಲಿನ ತೊಡಕಿನ ಬಗ್ಗೆ ರಾಹುಲ್ ಗಾಂಧಿ ಮೌನವಹಿಸಿರುವುದೇಕೆ? ಮಲೆನಾಡಿನ ಅಡಕೆ ಬೆಳೆಗಾರರ ಸಮಸ್ಯೆ ಬಗ್ಗೆ ಚಕಾರ ಎತ್ತುತ್ತಿಲ್ಲವೇಕೆ. ಸಮಸ್ಯೆಗಳನ್ನು ಮರೆಮಾಚಿ ಕೇವಲ ಮೋದಿಯವರನ್ನು ಟೀಕಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ನಾಯಕರು ಕೊಳಗೇರಿಯಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಸಮಸ್ಯೆ ಅರಿತುಕೊಳ್ಳುವುದಾಗಿ ಹೇಳಿ, ಕೊಳಗೇರಿಗಳ ಎರಡಂತಸ್ತಿನ ಮನೆಗಳಲ್ಲಿ ಮಲಗಿ ಎದ್ದು ಹೋಗಿದ್ದಾರೆ. ಸ್ಲಂಗಳ ಅಭಿವೃದ್ದಿ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಸ್ಲಂಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳದೆ ಇದೀಗ ಚುನಾವಣಾ ಕಾರಣಕ್ಕಾಗಿ ಸ್ಲಂಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಹಾಗೂ ಕಾಂಗ್ರೆಸ್, ಈ ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ಜನರ ಹಿತ ಕಾಯುವಲ್ಲಿ ವಿಫಲವಾಗಿವೆ. ಚುನಾವಣಾ ಕಾರಣದಿಂದ ಎರಡೂ ಪಕ್ಷಗಳ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇವರು ರಾಜ್ಯದ ಜನರನ್ನು ತಲುಪುವ ಮುನ್ನವೇ ಜೆಡಿಎಸ್ ಜನಮಾನಸವನ್ನು ತಲುಪಿದೆ ಎಂದರು.
ರಾಜ್ಯದಲ್ಲಿ ಒತ್ತುವರಿ ತೆರವು ಹಾಗೂ ಅಕ್ರಮ ಯೋಜನೆಯಲ್ಲಿ ಶ್ರೀಮಂತರಿಗೊಂದು, ಬಡವರಿಗೊಂದು ನೀತಿ ಅನುಸರಿಸಲಾಗುತ್ತಿದೆ. ತಲಾತಲಾಂತರಗಳಿಂದ ಭೂಮಿ ಉಳುಮೆ ಮಾಡಿಕೊಂಡು ಬರುತ್ತಿರುವ ಬಡ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಿದೆ ಎಂದು ತಿಳಿಸಿದರು.
ಕಾಂಗ್ರೆಸ್, ಬಿಜೆಪಿ ಪಕ್ಷಗಳ ಆಡಳಿತದಿಂದ ಭ್ರಮನಿರಸನಗೊಂಡಿರುವ ರಾಜ್ಯದ ಜನತೆ ಈ ಬಾರಿ ಜೆಡಿಎಸ್ ಪಕ್ಷ ಬೆಂಬಲಿಸಲು ನಿರ್ಧರಿಸಿದ್ದಾರೆ. ರಾಜ್ಯದೆಲ್ಲೆಡೆಯೂ ಜೆಡಿಎಸ್ ಪರವಾದ ಅಲೆ ಕಂಡುಬರುತ್ತಿದೆ. ಅತ್ಯದಿಕ ಸ್ಥಾನಗಳಲ್ಲಿ ಪಕ್ಷ ಜಯ ಸಾಧಿಸುವುದು ನಿಶ್ಚಿತವಾಗಿದೆ ಎಂದು ಇದೇ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.