ಶಿಕಾರಿಪುರ: ಹಿಂದೂ ಧರ್ಮ ಜಾಗೃತಿ ಕಾರ್ಯಕ್ರಮ

Update: 2018-02-12 13:37 GMT

ಶಿಕಾರಿಪುರ,ಫೆ.12: ಜಗತ್ತಿನ ಅತ್ಯಂತ ಪ್ರಾಚೀನ ಶ್ರೇಷ್ಠ ಹಿಂದೂ ಧರ್ಮದ ನಾಶಕ್ಕೆ ಹಲವರು ಯತ್ನಿಸಿ ವಿಫಲರಾಗಿದ್ದು, ಇದೀಗ ಹಿಂದೂ ಸಾಧಕರು ಜಗತ್ತಿನ ಹಲವೆಡೆ ಧರ್ಮ ಪ್ರಚಾರದಲ್ಲಿ ಸಕ್ರೀಯವಾಗಿದ್ದಾರೆ. ಭಾರತದಲ್ಲಿ ಮಾತ್ರ ಧರ್ಮದ ಬಗ್ಗೆ ಜಾಗೃತಿಯ ಅನಿವಾರ್ಯತೆ ಎದುರಾಗಿದೆ ಎಂದು ಭಾರತ ಸ್ವಾಭಿಮಾನ ಟ್ರಸ್ಟ್ ಪ್ರಾಂತ್ಯ ಪ್ರಬಾರಿ ದಿವಾಕರ್ ಭಟ್ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ದಿ.ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಡೆದ ಹಿಂದೂ ಧರ್ಮ ಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಾಚರಣೆಯಿಂದ ಮಾತ್ರ ಮನುಷ್ಯನಿಗೆ ನೆಮ್ಮದಿ ಶಾಂತಿ ದೊರೆಯಲಿದೆ. ಧರ್ಮ ಹೊರತುಪಡಿಸಿದಲ್ಲಿ ಮನುಷ್ಯನ ಬದುಕು ರೂಪಿಸಿಕೊಳ್ಳಲು ಸಾದ್ಯವಿಲ್ಲ. ಆದರೆ ಇತ್ತೀಚಿನ ವರ್ಷದಲ್ಲಿ ದೇಶದಲ್ಲಿ ಧರ್ಮ ಪ್ರವೃತ್ತಿ ಕಡಿಮೆಯಾಗಿ ದುಷ್ಟ ಪ್ರವೃತ್ತಿ ಹೆಚ್ಚಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ದೇವಾಲಯದಲ್ಲಿ ಭಗವಂತನ ದರ್ಶನಕ್ಕೆ ಹಣ ನೀಡಿದಲ್ಲಿ ಕೂಡಲೇ ದರ್ಶನದ ದುರ್ಗತಿ ಬಂದಿದೆ. ಧಾರ್ಮಿಕ ಶ್ರದ್ದೆ ಹೆಚ್ಚಿಸಬೇಕಾದ ದೇವಾಲಯ ವ್ಯಾಪಾರದ ಕೇಂದ್ರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣವಾಗಿದ್ದು, ನಳಂದ ವಿ.ವಿ ಯಲ್ಲಿ 10 ಸಾವಿರ ಪ್ರಾಚಾರ್ಯರ ನೇತೃತ್ವದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪಾಠ ಕಲಿತ ಶ್ರೇಷ್ಠ ಪರಂಪರೆ ಇದೀಗ ಮರೆಯಾಗುತ್ತಿದ್ದು, ಹಿಂದೂ ಧರ್ಮ, ಭಗವದ್ಗೀತೆ, ದೇವತೆಗಳ ನಿಂದನೆ ವಿಪರೀತವಾಗಿದೆ. ವಿಚಾರವಾದಿಗಳಿಗೆ ಹಿಂದೂ ಧರ್ಮ, ಸಂಸ್ಕೃತಿಯ ನಿಂದನೆ ಸಹಜವಾಗಿದೆ. ಹಿಂದೂ ಧರ್ಮ ಹೊರತುಪಡಿಸಿ ಇತರೆ ಧರ್ಮದ ಬಗ್ಗೆ ಕೀಳು ಮಟ್ಟದಲ್ಲಿ ನಿಂದಿಸಿ ಎಂದು ಸವಾಲು ಹಾಕಿದರು.

ಹಿಂದೂ ಧರ್ಮೀಯರ ಹೊರತಾಗಿ ಪ್ರತಿಯೊಬ್ಬರೂ ಆಚಾರ ವಿಚಾರಗಳಿಂದ ಗುರುತಿಸಿಕೊಂಡಿದ್ದು, ಹಿಂದೂಗಳಲ್ಲಿ ಮಾತ್ರ ಹಿಂಜರಿಕೆಯ ಪ್ರವೃತ್ತಿ ಹೆಚ್ಚಾಗಿರುವುದರಿಂದ ಸಾರ್ವಜನಿಕವಾಗಿ ಒಡಾಡಲು ಭಯ ಕಾಡುತ್ತಿದೆ. ನಿತ್ಯ ತಿಲಕ ಧರಿಸಿ, ಧರ್ಮದಿಂದ ಬದುಕಿದಲ್ಲಿ ದುಷ್ಟ ಶಕ್ತಿಗಳನ್ನು ಎದುರಿಸುವ ದೈರ್ಯ,ನೆಮ್ಮದಿ ದೊರೆಯಲಿದೆ ಎಂದು ತಿಳಿಸಿದರು.

ಸನಾತನ ಸಂಸ್ಥೆಯ ಸಂಚಾಲಕಿ ಕಾವೇರಿ ರಾಯ್ಕರ್ ಮಾತನಾಡಿ, ರಾಷ್ಟ್ರ ವಿರೋಧಿ, ಧರ್ಮ ವಿರೋಧಿ ವಿಚಾರವಾದಿಗಳನ್ನು ಸಂಸ್ಥೆ ಅತ್ಯಂತ ನಿಷ್ಠುರವಾಗಿ ವಿರೋಧಿಸಲಿದೆ. ಈ ದಿಸೆಯಲ್ಲಿನ ಬೆದರಿಕೆಗಳಿಗೆ ಬೆದರುವುದಿಲ್ಲ. ವಿಚಾರವಾದಿಗಳ ಹತ್ಯೆಯಲ್ಲಿ ಅನಾವಶ್ಯಕವಾಗಿ ಸಂಸ್ಥೆಯ ಸಾಧಕರಿಗೆ ಕಿರುಕುಳ ನೀಡುವ ಷಡ್ಯಂತ್ರವನ್ನು ರೂಪಿಸಲಾಗಿದ್ದು, ಗೌರಿ ಹತ್ಯೆಯ ಘಟನೆಯ ಬಗ್ಗೆ ತನಿಖಾಧಿಕಾರಿಗಳು ಸಂಸ್ಥೆಯ ಆಶ್ರಮಕ್ಕೆ ಬೇಟಿ ನೀಡಿ ಕೆಲವರನ್ನು ತನಿಖೆಗೊಳಪಡಿಸಿದ್ದಾರೆ ಎಂದು ಸಂಸ್ಥೆಗೆ ಕೆಟ್ಟ ಹೆಸರನ್ನು ತರಲು ಯತ್ನಿಸಲಾಯಿತು. ಈ ಬಗ್ಗೆ ತನಿಖಾಧಿಕಾರಿಗಳು ಸ್ಪಷ್ಟನೆಯನ್ನು ನೀಡಿ ಅಲ್ಲಗಳೆದಿದ್ದಾರೆ ಎಂದ ಅವರು, ಸಂಸ್ಥೆ ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದಿಸದೆ ಶಾಂತಿಯ ಮೂಲಕ ಹಿಂದೂಗಳಲ್ಲಿ ಜಾಗೃತಿಯನ್ನು ರೂಪಿಸುವುದು ನಿಶ್ಚಿತ. ಆದ್ಯಾತ್ಮ ಸಾಧನೆಯಿಂದ ಮಾತ್ರ ಪ್ರತಿಕೂಲ ಪರಿಸ್ಥಿತಿಯನ್ನು ಸದೃಡವಾಗಿ ನಿಭಾಯಿಸಲು ಸಾಧ್ಯ. ಹಿಂದೂ ಧರ್ಮದ ಆದ್ಯಾತ್ಮಿಕ ಪದ್ದತಿಗೆ ವೈಜ್ಞಾನಿಕ ಹಿನ್ನಲೆಯಿದ್ದು, ಮಹಿಳೆಯರು ತಿಲಕ, ಸೀರೆ ಧರಿಸಿ ದೇವಾಲಯ ದರ್ಶಿಸುವುದನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಂತರ ಧರ್ಮ ಶಿಕ್ಷಣ ಬಗ್ಗೆ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕಾರ ಗುರುಪ್ರಸಾದ್, ಬಸವಾಶ್ರಮದ ಮಾತೆ ಶರಣಾಂಭಿಕೆ ಸಂಸ್ಥೆಯ ಪಾಂಡುರಂಗರಾಯ್ಕರ್, ಗಣೇಶ ರಾಯ್ಕರ್, ವಿಜಯ ರೇವಣಕರ್, ರಮೇಶ್, ಚಿನ್ನಯ್ಯ, ವೀರೇಶ್, ಶರತ್, ಪರಶುರಾಮ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News