ಮಹದಾಯಿ ಸೋನಿಯಾರ ಪಾಪದ ಕೂಸು: ಪ್ರತಾಪ್ ಸಿಂಹ ಆರೋಪ

Update: 2018-02-12 13:59 GMT

ಮಡಿಕೇರಿ, ಫೆ.12: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಕೊಟ್ಟ ಪ್ರದೇಶಗಳಲ್ಲೆಲ್ಲ ಕಾಂಗ್ರೆಸ್ ತಳಮಟ್ಟಕ್ಕೆ ಕುಸಿದಿದ್ದು, ಕರ್ನಾಟಕದ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿಯನ್ನು ಕರೆತರುವ ಮೂಲಕ ಬಿಜೆಪಿಗೆ ಉಪಕಾರ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ರಾಹುಲ್ ಗಾಂಧಿ ಭೇಟಿಯನ್ನು ಟೀಕಿಸಿದರು. ಮಹದಾಯಿ ಕುರಿತು ಮಾತನಾಡಿದ ಅವರು, ಗೋವಾ ಚುನಾವಣೆ ಸಂದರ್ಭ ಮಹದಾಯಿ ನೀರನ್ನು ಬೇರೆಡೆಗೆ ಬಿಡುವುದಿಲ್ಲವೆಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರೇ ಹೇಳಿದ್ದರು. ವಿವಾದ ಬಗೆಹರಿಯದೇ ಇರಲು ಸೋನಿಯಾ ಗಾಂಧಿಯೇ ನೇರ ಕಾರಣವೆಂದು ಆರೋಪಿಸಿದರು.

ಗೋವಾ ಕಾಂಗ್ರೆಸ್ಸಿಗರನ್ನು ಮೊದಲು ಒಪ್ಪಿಸುವ ಅಗತ್ಯವಿದ್ದು, ಗೋವಾ ಕಾಂಗ್ರೆಸ್ ಅಧ್ಯಕ್ಷರ ಬಾಯಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ಮುಚ್ಚಿಸಲಿ ಎಂದು ಸವಾಲು ಹಾಕಿದರು. ಮಹದಾಯಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದನ್ನು ಸಮರ್ಥಿಸಿಕೊಂಡ ಅವರು,
ಮಹದಾಯಿ ಸಮಸ್ಯೆ ಸೋನಿಯಾ ಗಾಂಧಿಯ ಪಾಪದ ಕೂಸು. ತನ್ನ ತಾಯಿ ಮಾಡಿದ ತಪ್ಪಿನ ಬಗ್ಗೆ ರಾಹುಲ್ ಗಾಂಧಿ ಯಾಕೆ ಮಾತನಾಡುತ್ತಿಲ್ಲವೆಂದು ಪ್ರಶ್ನಿಸಿದರು.

ರೈಲುಮಾರ್ಗಕ್ಕೆ ತಡೆ
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತಲಚೇರಿಯಿಂದ ದಕ್ಷಿಣ ಕೊಡಗಿನ ಮೂಲಕ ಮೈಸೂರಿಗೆ ತೆರಳುವ ನೂತನ ರೈಲ್ವೆ ಮಾರ್ಗದ ಯೋಜನೆಗೆ ತಡೆಯೊಡ್ಡುವುದಾಗಿ ತಿಳಿಸಿದ ಅವರು, ತಲಚೇರಿ-ಕೊಡಗು-ಮೈಸೂರು ನೂತನ ರೈಲ್ವೆ ಮಾರ್ಗದ ಬಗೆಗಿನ ಸಾಮಾಜಿಕ ಜಾಲತಾಣಗಳ ಚರ್ಚೆ ಮತ್ತು ವಾಸ್ತವಕ್ಕೂ ಬಹಳ ವ್ಯತ್ಯಾಸ ಇದೆ. 2012-13ರ ಬಜೆಟ್‍ನಲ್ಲಿ ಆಗಿನ ಯುಪಿಎ ಸರ್ಕಾರ ಘೋಷಣೆ ಮಾಡಿದ ರೈಲು ಮಾರ್ಗ ಇದಾಗಿದ್ದು, ಕರ್ನಾಟಕ ಸರ್ಕಾರದ ಒಪ್ಪಿಗೆಯ ಹೊರತಾಗಿ ರೈಲು ಮಾರ್ಗ ಮಾಡಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ಕೇರಳ ಸರ್ಕಾರದೊಂದಿಗೆ ಸೇರಿಕೊಂಡು ಕೊಡಗಿನ ಜನರೊಂದಿಗೆ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. 

ಕೊಡಗಿನ ಮೂಲಕ ರೈಲು ಮಾರ್ಗ ಬೇಡ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದು ಕೊಡಗು ಉಸ್ತುವಾರಿ ಸಚಿವರು ಒಂದು ಕಡೆ ಹೇಳಿದರೆ, ಮತ್ತೊಂದೆಡೆ ಕೊಡಗಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ನಾವು ಮತ್ತೆ ಗೆದ್ದು ಬಂದರೆ ಕೊಡಗಿಗೆ ರೈಲು ತರುತ್ತೇವೆ ಎನ್ನುತ್ತಾರೆ. ಕರ್ನಾಟಕ ಸರ್ಕಾರ ಗೊಂದಲ ಸೃಷ್ಟಿ ಮಾಡಿ ಕೊಡಗಿನ ಜನರನ್ನು ರೈಲು ಹತ್ತಿಸುತ್ತಿದೆ. ಈ ರೈಲು ಮಾರ್ಗದ ಪ್ರಸ್ತಾವನೆಯೊಂದಿಗೆ ಕೇರಳ ಸಾರಿಗೆ ಸಚಿವರು ಕೇಂದ್ರಕ್ಕೆ ಬಂದಾಗ ಕೇಂದ್ರ ಸರ್ಕಾರವಾಗಲೀ, ರೈಲ್ವೇ ಬೋರ್ಡ್ ಆಗಲೀ ಯಾವುದೇ ಒಪ್ಪಿಗೆಯನ್ನು ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಮುಖ್ಯಕಾರ್ಯದರ್ಶಿಗಳ ಮೂಲಕ ಕೇರಳ ಮುಖ್ಯಕಾರ್ಯದರ್ಶಿಗಳಿಗೆ ನಾವು ಯೋಜನೆಗೆ ಪೂರಕವಾಗಿಲ್ಲ ಎಂದು ಹೇಳಿಸಬೇಕು. ಅವರಿಂದ ಅದು ಸಾಧ್ಯವಾಗದಿದ್ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದು ತಲಚೇರಿ-ಕೊಡಗು-ಮೈಸೂರು ನೂತನ ರೈಲ್ವೆ ಮಾರ್ಗ ಆಗದಂತೆ ತಡೆಯುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News