ಪುತ್ರನ ಶವಯಾತ್ರೆಯ ವೇಳೆ ಹೃದಯಾಘಾತವಾಗಿ ತಂದೆ ಮೃತ್ಯು
Update: 2018-02-12 20:50 IST
ಮೈಸೂರು,ಫೆ.12: ಸಾವಿನಲ್ಲೂ ತಂದೆ ಮಗ ಒಂದಾದ ಘಟನೆ ಮೈಸೂರಿನಲ್ಲಿ ನಡೆದಿದ್ದು, ತಂದೆ ಮಗನ ಶವಕ್ಕೆ ಒಂದೇ ಚಿತೆಯಲ್ಲಿ ಅಗ್ನಿ ಸ್ಪರ್ಶ ಮಾಡಿದ ಘಟನೆ ನಡೆದಿದೆ.
ಮೈಸೂರು ತಾಲೂಕು ಬೆಳವಾಡಿಯಲ್ಲಿನ ನಿವಾಸಿ ಪುಟ್ಟೇಗೌಡ ಪುತ್ರ ಭೈರೇಗೌಡ(33)ಮಾರಕ ರೋಗ ಕ್ಯಾನ್ಸರ್ ಗೆ ಬಲಿಯಾಗಿದ್ದರು. ಅಂತಿಮ ವಿಧಿವಿಧಾನಗಳನ್ನು ಪೂರೈಸಿ ಶವಯಾತ್ರೆಗೆ ತೆರಳುವ ವೇಳೆ ತಂದೆ ಪುಟ್ಟೇಗೌಡರಿಗೆ ಹೃದಯಾಘಾತವಾಗಿದೆ. ಈ ವೇಳೆ ಮಗನ ಶವ ಸ್ಮಶಾನದಲ್ಲಿಟ್ಟು ಪುಟ್ಟೇಗೌಡರನ್ನು ಗ್ರಾಮಸ್ಥರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತೆರಳುವ ಮುನ್ನವೇ ಪುಟ್ಟೇಗೌಡ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾಮಸ್ಥರು ಸ್ಮಶಾನದಲ್ಲಿಯೇ ಮಗನ ಶವ ಇಟ್ಟು ತಂದೆ ಪುಟ್ಟೇಗೌಡರಿಗೆ ಮನೆಯಲ್ಲಿ ವಿಧಿ ವಿಧಾನ ನೆರವೇರಿಸಿ, ಬಳಿಕ ತಂದೆ-ಮಗನ ಶವಕ್ಕೆ ಒಂದೇ ಚಿತೆಯಲ್ಲಿ ಅಗ್ನಿ ಸ್ಪರ್ಶ ಮಾಡಿದ್ದಾರೆ. ಶವಗಳ ಮುಂದೆ ಮೃತರ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.