ನೀರು ಬಿಡುವಂತೆ ಸಿಎಂ ಹೇಳಿದರೂ ಬೆಲೆ ನೀಡದ ಅಧಿಕಾರಿಗಳು: ರೈತರ ಪ್ರತಿಭಟನೆ
ಮೈಸೂರು,ಫೆ.12: ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿ ಕಾಡಾ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಿಎಂ ಸ್ವಕ್ಷೇತ್ರದ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ನಗರದ ಕಾಡಾ ಕಚೇರಿ ಮುಂಭಾಗ ಸೋಮವಾರ ವರುಣಾ ಭಾಗದ ರೈತರು ಕಬಿನಿ ಜಲಾಶಯದಿಂದ ಬೆಳೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ತಮಟೆ ಬಾರಿಸಿ ಅಧಿಕಾರಿಗಳ ಗಮನ ಸೆಳೆಯಲು ಯತ್ನಿಸಿದರು. ಈ ಸಂದರ್ಭದಲ್ಲಿ ಕೆ.ಆರ್. ಠಾಣೆಯ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು.
ಸಿಎಂ ಸಿದ್ದರಾಮಯ್ಯನವರೇ ನಾಲೆಗಳಿಗೆ ನೀರು ಹರಿಸುವಂತೆ ಆದೇಶ ನೀಡಿದರೂ ಅಧಿಕಾರಿಗಳು ನಾಲೆಗಳಿಗೆ ನೀರು ಹರಿಸುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಬೆಳೆ ಇಲ್ಲದೆ ಸಂಕಷ್ಟದಲ್ಲಿದ್ದೇವೆ. ಈಗ ಭತ್ತ ನಾಟಿಯ ಚಿಗುರು ನೀರಿಲ್ಲದೆ ಬಾಡುತ್ತಿದೆ ಎಂದು ತಮ್ಮ ನಾಟಿಯ ಚಿಗುರುಗಳನ್ನ ಹಿಡಿದು ಪ್ರತಿಭಟನಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಹದೇವ, ಸೋಮನಾಯ್ಕ, ಮಲಿಯಯ್ಯ, ಮಧುಸೂದನ್, ರಂಗಪ್ಪ, ರಾಚೇಗೌಡ, ಸೇರಿದಂತೆ ಹಲವು ರೈತರು ಪಾಲ್ಗೊಂಡಿದ್ದರು.