×
Ad

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ: ಕುಮಾರ್ ಬಂಗಾರಪ್ಪ ವಿಶ್ವಾಸ

Update: 2018-02-12 22:45 IST

ಸೊರಬ,ಫೆ.12: ರಾಜ್ಯ ಕಾಂಗ್ರೇಸ್ ಸರ್ಕಾರದ ದುರಾಡಳಿತದಿಂದ ಬೇಸತ್ತ ಜನತೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಉತ್ಸುಕರಾಗಿದ್ದಾರೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ ತಾಲೂಕು ಬಿಜೆಪಿ ಹಮ್ಮಿಕೊಂಡಿರುವ 'ಈ ಬಾರಿ ಬಿಜೆಪಿ ಸರ್ಕಾರ' ಎಂಬ ಗೋಡೆ ಬರಹಕ್ಕೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ ಜನಪ್ರಿಯ ಯೋಜನೆಗಳು ಜನ ಮಾನಸದಲ್ಲಿ ಉಳಿದಿವೆ. ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ರಾಷ್ಟ್ರೀಯ ನಾಯಕರ ಸೂಚನೆಯಂತೆ “ಈ ಬಾರಿ ಬಿಜೆಪಿ ಸರ್ಕಾರ' ಎಂಬ ಗೋಡೆ ಬರಹ ಮೂಲಕ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸರ್ಕಾರಿ ಕಟ್ಟಡ ಹೊರತುಪಡಿಸಿ, ಜನರ ಒಪ್ಪಿಗೆ ಮೇರೆಗೆ, ಒಂದು ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 5 ಭಾಗದಲ್ಲಿ ಗೋಡೆ ಬರಹ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ತಾಲೂಕು ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಬಗರ್ ಹುಕುಂ ಮಂಜೂರಾತಿ ಹೆಸರಿನಲ್ಲಿ ಬಗರ್ ಹುಕುಂ ಸಾಗುವಳಿದಾರರಿಂದ ಹಣದ ಸುಲಿಗೆಯಾಗುತ್ತಿದೆ. ಕೆಳ ಹಂತದ ಅಧಿಕಾರಿಗಳಿಂದ ಹಿಡಿದು ಮೇಲಾಧಿಕಾರಿಗಳ ಮೂಲಕ ಭ್ರಷ್ಟಾಚಾರ ನಡೆಸಿ, ಅವರ ಮೂಲಕ ಹಣ ಹೊಡೆಯುವ ಕೆಲಸವನ್ನು ಶಾಸಕ ಮಧುಬಂಗಾರಪ್ಪರಿಂದ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಮುಂಬರುವ ಚುನಾವಣೆಯಲ್ಲಿ ಶಾಸಕರಿಗೆ ತಾಲೂಕಿನ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. 

ರಾಮಚಂದ್ರಾಪುರ ಮಠ, ರಾಜ್ಯ ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರ ವಿರುದ್ದ ಹಗುರವಾಗಿ ಶಾಸಕ ಮಧುಬಂಗಾರಪ್ಪ ಮಾತನಾಡಿರುವುದು ಖಂಡನೀಯ. ಶಾಸಕರು ವಯಸ್ಸಿಗೆ ತಕ್ಕಂತೆ ಮಾತನಾಡಬೇಕು. ರಾಜಕಾರಣದಲ್ಲಿ ಕಲಿಯುವುದು ಬಹಳಷ್ಟಿದೆ. ತಾಲೂಕು ಮತ್ತು ಜಿಲ್ಲೆಯಲ್ಲಿ ರಾಜಕಾರಣ ಕುಲಗೆಡಲು ಕಾಗೋಡು ತಿಮ್ಮಪ್ಪ ಪ್ರಮುಖ ಕಾರಣರಾಗಿದ್ದಾರೆ. ಜನಾರ್ಧನ ಪೂಜಾರಿಯವರು ಬರೆದಿರುವ ಆತ್ಮ ಚರಿತ್ರೆ ಪುಸ್ತಕವನ್ನು ನಾನು ಸಂಪೂರ್ಣವಾಗಿ ಓದಿಲ್ಲ. ಸ್ವಲ್ಪ ಮಾತ್ರ ನೋಡಿದ್ದೆನೆ. ಬಂಗಾರಪ್ಪನವರು ತಮ್ಮ ಸ್ವಂತ ಮಕ್ಕಳಿಗೆ ಕೈ ಎತ್ತದವರು ಇಂದಿರಾಗಾಂಧಿಯವರಿಗೆ ಹೊಡೆಯಲು ಮುಂದಾಗಿದ್ದರು ಎಂಬುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ವಯಸ್ಸಾಗಿರುವ ಅವರಿಗೆ ಸಹಜವಾಗಿ ಅರಳು-ಮರಳಾಗಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯಿಂದ ದಾವಣಗೆರೆಯಲ್ಲಿ ಫೆ.27ರಂದು ರಾಜ್ಯ ಮಟ್ಟದ ರೈತ ಸಮಾವೇಶ, ಮಾ.12ರಂದು  ಶಿವಮೊಗ್ಗದಲ್ಲಿ ಮಹಿಳಾ ಸಮಾವೇಶ ನಡೆಯಲಿದೆ. ಮಾ.20ರಂದು ಉಡುಪಿಯಲ್ಲಿ ಹಮ್ಮಿಕೊಂಡಿರುವ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷ  ಹಾಗೂ ಉಪಾಧ್ಯಕ್ಷರ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪಾಲ್ಗೊಂಡು ಸಮಾಲೋಚನೆ ನಡೆಸಲಿದ್ದಾರೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಎ.ಎಲ್.ಅರವಿಂದ್, ನಿರಂಜನ್ ಕುಪ್ಪಗಡ್ಡೆ, ಯೋಗೇಶ್, ಎಂ.ಡಿ.ಉಮೇಶ್, ತಬಲಿ ಬಂಗಾರಪ್ಪ, ಗೌರಮ್ಮ ಭಂಡಾರಿ. ಓ.ಆರ್.ಸುರೇಶ್, ಟಿ.ಸಮೀಉಲ್ಲಾ. ಶಬ್ಬೀರ್ ಅಹ್ಮದ್ ಖಿಲ್ಲೇದಾರ್, ನಟರಾಜ್, ಖುಷ್ವಂತ್, ಬಸವರಾಜ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News