ಮಡಿಕೇರಿ: ನಿವೇಶನಕ್ಕಾಗಿ ಆಗ್ರಹಿಸಿ ವಸತಿ ವಂಚಿತರ ಪ್ರತಿಭಟನೆ

Update: 2018-02-12 17:34 GMT

ಮಡಿಕೇರಿ, ಫೆ.12: ಮಡಿಕೇರಿ ನಗರಸಭೆ ವ್ಯಾಪ್ತಿಯ ಎಲ್ಲಾ ನಿರಾಶ್ರಿತರು ಮತ್ತು ಕೊಳಚೆ ಪ್ರದೇಶದ ಬಡವರ್ಗದ ಮಂದಿಗೆ ನಿವೇಶನವನ್ನು ಒದಗಿಸಬೇಕೆಂದು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿತು.

ಬಡವರಿಗೆ ನಿವೇಶನ ಮತ್ತು ವಸತಿ ನೀಡುವುದಾಗಿ ರಾಜಕೀಯ ಪಕ್ಷಗಳು ಕೇವಲ ಚುನಾವಣಾ ಪ್ರಣಾಳಿಕೆಯಲ್ಲಷ್ಟೇ ಘೋಷಣೆ ಮಾಡುತ್ತಿದ್ದು, ಇದನ್ನು ಕಾರ್ಯಗತ ಮಾಡುತ್ತಿಲ್ಲವೆಂದು ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮತಬ್ಯಾಂಕ್ ರಾಜ್ಕಾರಣಕ್ಕಾಗಿ ಮಾತ್ರ ಬಡವರನ್ನು ಬಳಸಿಕೊಳ್ಳಲಾಗುತ್ತಿದ್ದು, ಕನಿಷ್ಠ ಸೂರು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆಳಿದ ಮತ್ತು ಆಳುತ್ತಿರುವ ಸರಕಾರಗಳಿಗೆ ಸಾಧ್ಯವಾಗಿಲ್ಲವೆಂದು ಆರೋಪಿಸಿದರು.   

ನಿವೇಶನ ಕೋರಿ ಮಡಿಕೇರಿ ನಗರಸಭೆಗೆ ಸುಮಾರು 2,500 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳಲ್ಲಿ 1468 ಅರ್ಜಿಗಳನ್ನು ಪುರಸ್ಕರಿಸಿರುವ ನಗರಸಭೆ ಕೇವಲ 5 ಏಕರೆ ಜಾಗವನ್ನು ಹೆಬ್ಬೆಟ್ಟಗೇರಿ ಗ್ರಾಮ ವ್ಯಾಪ್ತಿಯಲ್ಲಿ ಗುರುತಿಸಿದೆ. ಈ ಜಾಗದಲ್ಲಿ ಎಲ್ಲಾ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೋರಾಟ ಸಮಿತಿಯ ಪ್ರಮುಖರಾದ ಅಮಿನ್ ಮೊಹಿಸಿನ್ ಅಭಿಪ್ರಾಯಪಟ್ಟರು.

ಕನಿಷ್ಠ ಒಂದು ಮುಕ್ಕಾಲು ಸೆಂಟ್‍ನಂತೆ ಹಂಚಿಕೆ ಮಾಡಿದರೂ ಶೇ.10 ರಷ್ಟು ಮಂದಿಗೆ ಮಾತ್ರ ಜಾಗ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲಾ ಅರ್ಜಿದಾರರಿಗೆ ನಿವೇಶನ ನೀಡಲು ನಗರಸಭೆ ವ್ಯಾಪ್ತಿಯ ಪೈಸಾರಿ ಜಾಗವನ್ನು ಬಳಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಕೊಳಚೆ ಪ್ರದೇಶಗಳ ಅಭಿವೃದ್ಧಿಗಾಗಿ ಮಂಡಳಿಯನ್ನು ಸ್ಥಾಪಿಸಲಾಗಿದೆ. ಆದರೆ ಈ ಮಂಡಳಿಯ ಕಾರ್ಯವೈಖರಿಯ ಬಗ್ಗೆಯೇ ಸಂಶಯ ಮೂಡುತ್ತಿದ್ದು, ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲವೆಂದು ಆರೋಪಿಸಿದರು. ನಗರದ 8 ಕೊಳಚೆ ಪ್ರದೇಶಗಳ ಬಡವರ್ಗದವರಿಗೂ ನಿವೇಶನ ಹೊಂದಲು ಅವಕಾಶ ಕಲ್ಪಿಸಬೇಕೆಂದರು. 94ಸಿ ಮತ್ತು 94ಸಿಸಿ ಮೂಲಕ ಅರ್ಜಿ ಸಲ್ಲಿಕೆಯಾಗಿದ್ದರು ಅರ್ಹರಿಗೆ ಹಕ್ಕುಪತ್ರ ವಿತರಿಸಿಲ್ಲ. ಸಿ ಮತ್ತು ಡಿ ಭೂಮಿಯ ನೆಪವೊಡ್ಡಿ ಅರ್ಹರಿಗೆ ಭೂಮಿಯ ಹಕ್ಕು ಸಿಗದಂತೆ ಮಾಡಲಾಗುತ್ತಿದೆ. ಸಿ ಮತ್ತು ಡಿ ಭೂಮಿಯ ನಿರ್ಬಂಧವನ್ನು ಹಿಂಪಡೆದಿರುವ ಬಗ್ಗೆ ಸರ್ಕಾರ ಮೌಖಿಕ ಆದೇಶವನ್ನಷ್ಟೆ ನೀಡಿದ್ದು, ಇದನ್ನು ಲಿಖಿತ ರೂಪದಲ್ಲಿ ಅಧಿಕೃತವಾಗಿ ಘೋಷಣೆ ಮಾಡಬೇಕೆಂದು ಅಮಿನ್ ಮೊಹಿಸಿನ್ ಒತ್ತಾಯಿಸಿದರು.

ನಗರದ ಕೊಳಚೆ ಪ್ರದೇಶಗಳಾದ ಇಂದಿರಾನಗರ, ಚಾಮುಂಡೇಶ್ವರಿ ನಗರ, ತ್ಯಾಗರಾಜ ಕಾಲೋನಿ, ಮಂಗಳಾದೇವಿ ನಗರ, ಜ್ಯೋತಿ ನಗರ, ಮಲ್ಲಿಕಾರ್ಜುನ ನಗರ, ಪುಟಾಣಿ ನಗರ, ರಾಜರಾಜೇಶ್ವರಿ ನಗರದ ನಿವೇಶನ ರಹಿತ ಪ್ರತಿಯೊಂದು ಬಡ ಕುಟುಂಬಕ್ಕೂ ನಿವೇಶನ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದರು. 

ಹೋರಾಟ ಸಮಿತಿಯ ಸದಸ್ಯ ಹಾಗೂ ಬಹುಜನ ಕಾರ್ಮಿಕ ಸಂಘದ ರಾಜ್ಯ ಕಾರ್ಯದರ್ಶಿ ಕೆ. ಮೊಣ್ಣಪ್ಪ ಮಾತನಾಡಿ, ಮತದಾನಕ್ಕೆ ಮಾತ್ರ  ದುರ್ಬಲರನ್ನು ಹಾಗೂ ಬಡವರನ್ನು ಬಳಸಿಕೊಳ್ಳಲಾಗುತ್ತಿದ್ದು, ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡದೆ ಸಂಕಷ್ಟದಲ್ಲಿ ಸಿಲುಕಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿರುವ ಯಾವುದೇ ಯೋಜನೆಗಳು ಜಿಲ್ಲೆಯಲ್ಲಿ ಅನುಷ್ಟಾನಗೊಳ್ಳುತ್ತಿಲ್ಲವೆಂದು ಆರೋಪಿಸಿದರು. ಪಾಲೇಮಾಡಿನ ಸ್ಮಶಾನದ ಜಾಗದ ವಿವಾದವನ್ನು ಜಿಲ್ಲಾಡಳಿತ ತಕ್ಷಣ ಬಗೆಹರಿಸಬೇಕೆಂದು ಮೊಣ್ಣಪ್ಪ ಒತ್ತಾಯಿಸಿದರು.

ಪ್ರಮುಖರಾದ ಷಂಶುದ್ದೀನ್, ಮೊಹಮ್ಮದ್, ಉಮ್ಮರ್, ಆಲಿ ಸೇರಿದಂತೆ ನಗರದ ವಿವಿಧ ಬಡಾವಣೆಗಳ ನಿವೇಶನ ರಹಿತ ಕುಟುಂಬಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News