ವಿವಿಗಳು ಉದ್ಯೋಗಾಧಾರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿವೆ: ಎಂ.ಸಿ.ನಾಣಯ್ಯ ವಿಷಾದ
ಮಡಿಕೇರಿ,ಫೆ.12 : ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕಾರಣವಾಗಬೇಕಾದ ವಿಶ್ವ ವಿದ್ಯಾನಿಲಯಗಳು ಪ್ರಸ್ತುತ ಕೇವಲ ಉದ್ಯೋಗಾಧಾರಿತ ಶಿಕ್ಷಣಕ್ಕೆ ಸೀಮಿತವಾಗುತ್ತಿವೆ. ಬದುಕಿಗೆ ಬೆಳಕು ನೀಡುವ ಶಿಕ್ಷಣ ದೊರಕುತ್ತಿಲ್ಲವೆಂದು ಮಾಜಿ ಸಚಿವ ಎಂ.ಸಿ. ನಾಣಯ್ಯ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಮಂಗಳೂರು ವಿಶ್ವ ವಿದ್ಯಾನಿಲಯದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದಿಂದ ಪ್ರಕಟಿಸಿರುವ ಡಾ. ಎಂ.ಜಿ ನಾಗರಾಜ್ ಅವರ `ಕೊಡಗಿನ ಕೆಂಬಟ್ಟಿಗಳ ಸಂಸ್ಕೃತಿ' ಕೃತಿಯ ಪರಿಷ್ಕೃತ ಆವೃತ್ತಿಯನ್ನು ನಗರದ ಎಫ್‍ಎಂಕೆಎಂಸಿ ಕಾಲೇಜಿನಲ್ಲಿ ಅನಾವರಣಗೊಳಿಸಿ ಮಾತನಾಡಿದ ಅವರು, ವಿಶ್ವ ವಿದ್ಯಾನಿಲಯಗಳಿಂದ ಪ್ರಸ್ತುತ ಜೀವನಕ್ಕೆ ಮಾರ್ಗದರ್ಶನ ನೀಡುವ ಶಿಕ್ಷಣ ಸಿಗುತ್ತಿಲ್ಲ ಎಂದರು.
ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನ್ನು ಹೊರತುಪಡಿಸಿದರೆ ಭಾರತದ ಯಾವುದೇ ವಿಶ್ವವಿದ್ಯಾನಿಲಯಗಳು ವಿಶ್ವದ ಅತ್ಯುನ್ನತ 25 ವಿವಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲವೆಂದು, ಇಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು ಟೀಕೆಗೆ ಒಳಪಡಿಸಿದ ನಾಣಯ್ಯ ಅವರು, ಕೆಲ ಅಪ್ರಬುದ್ಧ ಭ್ರಷ್ಟ ಉಪಕುಲಪತಿಗಳು ಯಾರನ್ನೋ ಮೆಚ್ಚಿಸುವ ಉದ್ದೇಶದಿಂದ ಕಂಡ ಕಂಡವರಿಗೆ ಡಾಕ್ಟರೇಟ್‍ಗಳನ್ನು ಪ್ರದಾನ ಮಾಡುತ್ತಿದ್ದಾರೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ರಾಜಕೀಯ ಪ್ರಭಾವ ಬೀರಿ ಡಾಕ್ಟರೇಟ್ ಪದವಿಗಳನ್ನು ಮಾರಾಟ ಮಾಡುವ ಪರಿಸ್ಥಿತಿಗಳೂ ಇಂದು ನಿರ್ಮಾಣವಾಗಿದೆ ಎಂದರು.
ಪೀಠ ಸ್ಥಳಾಂತರಕ್ಕೆ ವಿರೋಧ: ಮಂಗಳೂರು ವಿಶ್ವ ವಿದ್ಯಾಲಯದಿಂದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠವನ್ನು ಕೊಡಗಿಗೆ ಸ್ಥಳಾಂತರಿಸುವ ಪ್ರಸ್ತಾಪವನ್ನು ಎಂ.ಸಿ.ನಾಣಯ್ಯ ಇದೇ ಸಂದರ್ಭ ತೀವ್ರವಾಗಿ ವಿರೋಧಿಸಿದರು.
ಕೃತಿ ಕರ್ತೃ ಡಾ. ಎಂ.ಜಿ ನಾಗರಾಜ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಅನೇಕ ಶಾಸನಗಳು ಲಭ್ಯವಿದ್ದು, ಆಸಕ್ತರು ಇವುಗಳನ್ನು ಇತಿಹಾಸದ ದೃಷ್ಟಿಕೋನದಿಂದ ಅಧ್ಯಯನ ಮಾಡಬೇಕಾಗಿದೆ. ಕ್ರಿಸ್ತ ಪೂರ್ವದಲ್ಲೇ ರಚಿತವಾದ ತಮಿಳಿನ `ಶೀಲಪ್ಪದಿಕಾರಂ' ಕೃತಿಯಲ್ಲೂ ಕೆಂಬಟ್ಟಿ ಸಮುದಾಯದ ಪ್ರಸ್ತಾಪವಿರುವುದಾಗಿ ಹೇಳಿದರು.
ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ, ಕೆಂಬಟ್ಟಿ ಸಮುದಾಯದ ನೆಪದಲ್ಲಿ ಡಾ. ನಾಗರಾಜ್ ರಾಷ್ಟ್ರವ್ಯಾಪಿ ಜಾತೀಯತೆ, ಅಸ್ಪೃಶ್ಯತೆಗಳು ಹೇಗೆ ಉದಯವಾದವು ಎಂಬುದನ್ನು ವಿಶ್ಲೇಷಿಸಿದ್ದಾರೆ ಎಂದರು.
ಕಾಲೇಜು ಪ್ರಾಂಶುಪಾಲರಾದ ಡಾ. ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ಉಪನ್ಯಾಸಕ ಡಾ. ಲೋಕೇಶ್ ಕೃತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಉಳ್ಳಿಯಡ ಎಂ.ಪೂವಯ್ಯ, ಅಧ್ಯಯನ ಪೀಠದ ಸಂಯೋಜಕಿ ಡಾ.ಎಂ.ಎಂ. ಮೀನಾಕ್ಷಿ ಹಾಗೂ ಪ್ರಸಾರಾಂಗ ನಿರ್ದೇಶಕ ಪ್ರೊ. ಇಸ್ಮಾಯಿಲ್ ಉಪಸ್ಥಿತರಿದ್ದರು