ಮಡಿಕೇರಿ: ಹುಲಿ ದಾಳಿಗೆ 3 ಹಸುಗಳು ಬಲಿ
ಮಡಿಕೇರಿ, ಫೆ.12: ಹುಲಿ ದಾಳಿಗೆ ಮೂರು ಹಸುಗಳು ಬಲಿಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಮಾಯಮುಡಿಯ ಧನುಗಾಲ ಗ್ರಾಮದಲ್ಲಿ ನಡೆದಿದೆ.
ಧನುಗಾಲ ನಿವಾಸಿ ಮುರುಡೇಶ್ವರ್ ಅವರಿಗೆ ಸೇರಿದ ಹಸುಗಳನ್ನು ಮನೆಯ ಸಮೀಪವಿರುವ ಗದ್ದೆಗೆ ಮೇಯಲೆಂದು ಬಿಡಲಾಗಿತ್ತು. ಸಂಜೆಯ ವೇಳೆಯಲ್ಲಿ ಹಾಲು ಕರೆಯಲು ಹಸುಗಳನ್ನು ಹುಡುಕಾಟ ನಡೆಸಿದಾಗ ಗದ್ದೆಯಲ್ಲಿ 3 ಹಸುಗಳು ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡು ಬಂದಿದೆ.
ಹೈನುಗಾರಿಕೆಗಾಗಿ 2.50 ಲಕ್ಷ ರೂ. ಸಾಲ ಪಡೆದಿದ್ದ ಮುರುಡೇಶ್ವರ್ ಹಸುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರುಗಳಾದ ಚೆಟ್ರುಮಾಡ ಸುಜಯ್ ಬೋಪಯ್ಯ, ಪುಚ್ಚಿಮಾಡ ಸುಭಾಷ್, ತೀತಿರಮಾಡ ಜಗದೀಶ್ ಹಾಗೂ ತೀತಿರಮಾಡ ರಾಜ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳದಲ್ಲಿದ್ದ ಡಿಎಫ್‍ಓ ಮರಿಯ ಕೃಷ್ಣರಾಜ್, ಎಸಿಎಫ್ ಶ್ರೀಪತಿ ಹಾಗೂ ಆರ್‍ಎಫ್‍ಓ ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡರು. 10 ಸಾವಿರ ರೂ. ಪರಿಹಾರ ಸಾಕಾಗುವುದಿಲ್ಲ, ತಲಾ 1 ಲಕ್ಷ ರೂ. ನಂತೆ 3 ಹಸುಗಳಿಗೆ 3 ಲಕ್ಷ ರೂ. ಪರಿಹಾರ ತಕ್ಷಣ ನೀಡಬೇಕೆಂದು ಪಟ್ಟು ಹಿಡಿದರು.
ಅರಣ್ಯ ಅಧಿಕಾರಿ ಶ್ರೀಪತಿ ರೈತರ ಪ್ರಶ್ನೆಗಳಿಗೆ ಉತ್ತರಿಸಿ, ತಕ್ಷಣ ತಲಾ 10 ಸಾವಿರ ಪರಿಹಾರವನ್ನು ನೀಡುತ್ತೇವೆ. ನಂತರ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಪರಿಹಾರದ ಬಗ್ಗೆ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ನಂತರ ಹುಲಿಯನ್ನು ಸೆರೆ ಹಿಡಿಯಲು ಬೋನ್ ಅನ್ನು ಸ್ಥಳಕ್ಕೆ ತರಲಾಯಿತು. ರಾತ್ರಿ ಹುಲಿಯನ್ನು ಹಿಡಿಯುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಸ್ಥಳೀಯ ಗ್ರಾ.ಪಂ ಅಧ್ಯಕ್ಷೆ ಭವಾನಿ, ಸದಸ್ಯರುಗಳಾದ ಕೆ.ಟಿ.ಬಿದ್ದಪ್ಪ, ಸ್ಥಳೀಯ ಮುಖಂಡರುಗಳಾದ ಎಸ್.ಎಸ್.ಸುರೇಶ್, ಬಸವಣ್ಣ, ರಾಯ್, ವೃತ್ತ ನಿರೀಕ್ಷಕ ದಿವಾಕರ್ ಹಾಜರಿದ್ದರು.