×
Ad

ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತರ ಧರಣಿ

Update: 2018-02-12 23:30 IST

ಮಂಡ್ಯ, ಫೆ.12: ರೈತರ ಸಾಲಮನ್ನಾ, ಹಾಲಿನ ಬೆಲೆ ಹೆಚ್ಚಳ, ಡಾ.ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದ ಪ್ರತ್ಯೇಕ ಬಣದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಧರಣಿ ನಡೆಸಿದರು.

ರೈತನಾಯಕ ದಿ.ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ 82ನೆ ಜಯಂತಿ ಹಾಗೂ 14ನೆ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ, ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಮೆರವಣಿಗೆ ನಡೆಸಲಾಯಿತು.

ಟನ್ ಕಬ್ಬಿಗೆ 3 ಸಾವಿರ ರೂ. ನಿಗದಿ ಮಾಡಬೇಕು, ಜಿಲ್ಲೆಯ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ವಿತರಿಸಬೇಕು, ರೇಷ್ಮೆ ಬೆಳೆಗಾರರ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು, ಪಸಲ್ ಭೀಮಾ ಯೋಜನೆ ಹಣ ಬಿಡುಗಡೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರನ್ನು ವಂಚಿಸುತ್ತಿವೆ ಎಂದು ಕಿಡಿಕಾರಿದ ಪ್ರತಿಭಟನಾಕಾರರು, ಒಣಗಿದ ತೆಂಗಿನ ಮರಗಳ ಪರಿಹಾರ ಕೊಡಬೇಕು. ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು. ಇನಾಮು ಗ್ರಾಮಗಳ ರೈತರಿಗೆ ಪಹಣಿ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ವಿರುದ್ಧ ಘೋಷಣೆ:

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಿಷೇಧಿಸಿರುವ ಜಿಲ್ಲಾಧಿಕಾರಿ ಅವರ ಆದೇಶವನ್ನು ಖಂಡಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲು ಮುಂದಾದ ಪ್ರತಿಭಟನಾಕಾರರನ್ನು ಮಾರ್ಗಮಧ್ಯೆ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಜಿಲ್ಲಾಧಿಕಾರಿ ಆದೇಶವಿರುವುದರಿಂದ ತಾವು ತಡೆಯೊಡ್ಡಿದ್ದೇವೆಂದು ಪೊಲೀಸರು ಮನವರಿಕೆ ಮಾಡುವ ಯತ್ನ ನಡೆಸಿದರು. ಜಿಲ್ಲಾಧಿಕಾರಿಯವರ ಆದೇಶ ಹಿಂಪಡೆಯದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ರೈತಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ರಾಮಲಿಂಗೇಗೌಡ, ಮಠದದೊಡ್ಡಿ ಕೆಂಪೇಗೌಡ, ಸೊ.ಸಿ.ಪ್ರಕಾಶ್, ಉಮೇಶ, ಬೊಪ್ಪಸಮುದ್ರ ಚಂದ್ರಶೇಖರ್, ವೈ.ಕೆ.ರಾಮೇಗೌಡ, ವಿ.ರಮೇಶ್, ಮಠದದೊಡ್ಡಿ ಕೆಂಪೇಗೌಡ, ಸತೀಶ್, ಅಜ್ಜಹಳ್ಳಿ ಮಾದೇಗೌಡ, ವೈ.ಕೆ.ರಾಮೇಗೌಡ, ನಗರಕೆರೆ ಶ್ರೀಧರ್, ಹೊನ್ನಲಗೆರೆ ರಾಮಕೃಷ್ಣ, ಡಿ.ಎ.ಕೆರೆ ರಮೇಶ್, ಬೀಳೀಗೌಡ, ಗಣೇಶ್ ಇತರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News