ಮಂಡ್ಯ: ಜಿಲ್ಲಾಧಿಕಾರಿ ಆವರಣದಲ್ಲಿ ಧರಣಿ ನಿಷೇದ; ಡಿಸಿ ಕ್ರಮಕ್ಕೆ ಆಕ್ರೋಶ

Update: 2018-02-12 18:11 GMT

ಮಂಡ್ಯ, ಫೆ.12: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ, ಧರಣಿ, ಗುಂಪು ಮನವಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿರುವ ಸಾರ್ವಜನಿಕ ಪ್ರಕಟಣೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಹೊರಡಿಸಿರುವ ಆದೇಶದ ಸಾರ್ವಜನಿಕ ಪ್ರಕಟಣೆಯನ್ನು ಜಿಲ್ಲಾಧಿಕಾರಿ ಕಚೇರಿ ಎದುರಿನ ಗೋಡೆಗೆ ಅಳವಡಿಸಿದ್ದು, ಪ್ರಗತಿಪರ ಸಂಘಟನೆಗಳ ಮುಖಂಡರು ಕಿಡಿಕಾರಿದ್ದಾರೆ. ವಿವಿಧ ಸಂಘಟನೆಗಳ ಪ್ರತಿಭಟನೆ ವೇಳೆ ಘೋಷಣೆ, ಧ್ವನಿವರ್ಧಕ ಬಳಕೆಯಿಂದ ಕಚೇರಿ ಮತ್ತು ಆವರಣದ ನ್ಯಾಯಾಲಯದ ಕಾರ್ಯಕಲಾಪಗಳಿಗೆ ತೊಂದರೆಯುಂಟಾಗುವ ಕಾರಣ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಕರ್ನಾಟಕ ಪೊಲೀಸ್ ಕಾಯ್ದೆ 1963ರ ನಿಯಮ 35ರಡಿಯಲ್ಲಿ ಸದರಿ ಧರಣಿ, ಸತ್ಯಾಗ್ರಹ, ಗುಂಪು ಗುಂಪಾಗಿ ಮನವಿಪತ್ರ ಸಲ್ಲಿಸುವುದನ್ನು ನಿರ್ಬಂಧಿಸಲಾಗಿದೆ ಎಂದು  ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಪ್ರತಿಭಟನೆಯನ್ನು ಕಾವೇರಿವನದ ಬಳಿ ವಿಶ್ವೇಶ್ವರಯ್ಯ ಪುತ್ಥಳಿ ಮುಂಭಾಗದ ಜಾಗದಲ್ಲಿ ಹಮ್ಮಿಕೊಳ್ಳಬೇಕು. ಮನವಿ ಪತ್ರ ಸಲ್ಲಿಸಬೇಕಾದರೆ ಗರಿಷ್ಠ 5 ಮಂದಿ ಕಾರ್ಯಾಲಯಕ್ಕೆ ಆಗಮಿಸಿ ಶಾಂತರೀತಿಯಿಂದ ಸಲ್ಲಿಸಬೇಕು ಎಂದೂ ಅವರು ಆದೇಶದಲ್ಲಿ ಸೂಚಿಸಿದ್ದಾರೆ.

ಡಿಸಿ ಕ್ರಮಕ್ಕೆ ಆಕ್ರೋಶ:
ಜಿಲ್ಲಾಧಿಕಾರಿ ಅವರ ಆದೇಶವನ್ನು ರೈತಸಂಘ, ದಸಂಸ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ ಮುಖಂಡರು ಖಂಡಿಸಿದ್ದು, ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹೋರಾಟಗಾರರು, ನಾಗರಿಕರು, ತೊಂದರೆಗೊಳಗಾದವರು ಪ್ರತಿಭಟನೆ ಹೋರಾಟ ಮಾಡುವುದು ಅವರ ಹಕ್ಕು. ಬ್ರಿಟೀಷರ ಕಾಲದಲ್ಲೂ ಇಂತಹ ನಿರ್ಬಂಧವಿರಲಿಲ್ಲ. ಜಿಲ್ಲಾಧಿಕಾರಿಗಳ ಕ್ರಮ ಸರಿಯಲ್ಲ. ಈ ಬಗ್ಗೆ ಹೋರಾಟ ರೂಪಿಸಲಾಗುವುದು ಎಂದು ಶಾಸಕ, ರೈತಸಂಘದ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ ಎಚ್ಚರಿಸಿದ್ದಾರೆ.

ನ್ಯಾಯಕ್ಕಾಗಿ ಹೋರಾಡುವುದು ಸಾಂವಿಧಾನಿಕ ಹಕ್ಕು. ಯಾರ ಅಪ್ಪಣೆ ಪಡೆದು ಹೋರಾಟ ನಡೆಸುವ ಅಗತ್ಯವಿಲ್ಲ. ಹೋರಾಟವೂ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ. ಜಿಲ್ಲಾಡಳಿತದ ಗಮನ ಸೆಳೆಯಲು ಹೋರಾಟ ಮಾಡುವುದು ಸಹಜ. ನಿರ್ಬಂಧದ ಮೂಲಕ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಕಿಡಿಕಾರಿದ್ದಾರೆ.

ಇದೊಂದು ಅವೈಜ್ಞಾನಿಕ ಕ್ರಮವೆಂದು ಸಿಐಟಿಯುನ ಸಿ.ಕುಮಾರಿ, ಜಿ.ರಾಮಕೃಷ್ಣ ಖಂಡಿಸಿದ್ದರೆ, ಇದು ಹೋರಾಟಗಾರರ ಕೂಗನ್ನು ದಮನಿಸುವ ಹುನ್ನಾರವೆಂದು ಕರ್ನಾಟಕ ಜನಶಕ್ತಿಯ ಡಾ.ವಾಸು ಕಿಡಿಕಾರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News