ಮೈಸೂರು: ಜಿಲ್ಲೆಯಾದ್ಯಂತ ಸಂಭ್ರಮದ ಶಿವರಾತ್ರಿ ಆಚರಣೆ
ಮೈಸೂರು,ಫೆ.13: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನರು ಸಡಗರ, ಸಂಭ್ರಮದಿಂದ ಮಹಾಶಿವರಾತ್ರಿ ಹಬ್ಬವನ್ನ ಆಚರಿಸುತ್ತಿದ್ದು, ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆಯುತ್ತಿದ್ದ ದೃಶ್ಯ ಕಂಡು ಬಂತು.
ಇಂದು ಬೆಳಗ್ಗೆಯಿಂದಲೇ ನಗರದ ಎಲ್ಲಾ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹಾಲಿನ ಅಭಿಷೇಕ, ಹೂವಿನ ಅಲಂಕಾರದಿಂದ ದೇವಸ್ಥಾನವನ್ನ ಶೃಂಗಾರಗೊಳಿಸಿದ್ದಾರೆ. ಭಕ್ತರು ಶಿವನಿಗೆ ಬಿಲ್ವಪತ್ರೆ ನೀಡಿ ತಮ್ಮ ಇಷ್ಟಾರ್ಥಗಳನ್ನ ಈಡೇರಿಸುವಂತೆ ಶಿವನಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಅರಮನೆಯ ಆವರಣದಲ್ಲಿರುವ ತ್ರಿನೇಶ್ವರ ಸ್ವಾಮಿ ದೇವಾಲಯದಲ್ಲಿ ಮುಂಜಾನೆ 5 ಗಂಟೆಯಿಂದಲೇ ಶಿವನಿಗೆ ಹಾಲಿನ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಶಿವನಿಗೆ ಮಹಾರಾಜರು ಉಡುಗೊರೆಯಾಗಿ ನೀಡಿರುವ 11 ಕೆಜಿ ತೂಕದ ಬಂಗಾರದ ಕೊಳಗವನ್ನ ಧಾರಣೆ ಮಾಡಲಾಗಿದೆ. ಇಂದಿನಿಂದ ನಾಳೆ ಬೆಳಗ್ಗೆವರೆಗೂ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ.
ನಂಜನಗೂಡು ಶ್ರೀಶ್ರೀಕಂಠೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ:
ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲೂ ಶಿವರಾತ್ರಿ ಆಚರಣೆಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ದೇವಸ್ಥಾನದ ಬಳಿ ಇರುವ ಕಪಿಲಾ ನದಿಯಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ಮಿಂದು ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ದೇವಾಲಯದಲ್ಲಿರುವ ಶಿವಲಿಂಗಗಳಿಗೆ ಬಿಲ್ವಪತ್ರವನ್ನು ಹಾಕಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಶ್ರೀಶ್ರೀಕಂಠೇಶ್ವರ ಸ್ವಾಮಿ ದೇವರಿಗೆ ಬೆಳಿಗ್ಗೆಯಿಂದಲೇ ಅಭಿಷೇಕ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ದೇವಸ್ಥಾನದ ಮುಂಭಾಗ ವೇದಿಕೆ ನಿರ್ಮಾಣ ಮಾಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೇವಾಲಯದ ವತಿಯಿಂದ ಆಯೋಜಿಸಲಾಗಿತ್ತು.
ದೇವಾಲಯಕ್ಕೆ ಬಂದ ಭಕ್ತಾದಿಗಳು ದೇವಸ್ಥಾನದ ಮುಂಭಾಗ ತಂಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ರಾಜ್ಯ ಸೇರಿದಂತೆ ದೇಶದ ನಾನಾ ಕಡೆಯಿಂದ ಭಕ್ತಾದಿಗಳು ಆಮಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.