×
Ad

ದಾವಣಗೆರೆ: ಸಂಭ್ರಮದ ಮಹಾಶಿವರಾತ್ರಿ ಆಚರಣೆ

Update: 2018-02-13 22:12 IST

ದಾವಣಗೆರೆ,ಫೆ.13: ಮಹಾಶಿವರಾತ್ರಿ ಅಂಗವಾಗಿ ಮಂಗಳವಾರ ಭಕ್ತರು ಶಿವಾಲಯಗಳಲ್ಲಿ ವಿಶೇಷ ಪೂಜೆ, ನೈವೇದ್ಯ, ಆತ್ಮ ಶುದ್ಧಿ, ಶಿವನ ಒಲುಮೆಗಾಗಿ ಉಪವಾಸ ವ್ರತ, ದಾನ ಧರ್ಮದಂತಹ ಧಾರ್ಮಿಕ ಕಾರ್ಯಗಳನ್ನು ಶ್ರದ್ದಾ ಭಕ್ತಿಯಿಂದ ಮಾಡುವ ಮೂಲಕ ಶಿವರಾತ್ರಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ದೇವಸ್ಥಾನದ ಪರಿಸರವೆಲ್ಲಾ ಶಿವಮಯವಾಗಿ ಕಂಗೊಳಿಸಿತ್ತು. ಭಕ್ತರು ಶಿವನ ಆರಾಧನೆಯಲ್ಲಿ ತೊಡಗಿ, ವಿವಿಧ ಶಿವನ ದೇವಾಲಯದ ಎದುರು ಸರತಿ ಸಾಲಲ್ಲಿ ನಿಂತು ಪರಮೇಶ್ವರನ ದರ್ಶನ ಪಡೆದು ಪುನೀತರಾದರು.

ಮಂಗಳವಾರ ಅನೇಕ ಶಿವಾಲಯದಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ದೇವಾಲಯದ ಮುಂದೆ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಕೆಲವೆಡೆ, ಸಂಘಟನೆಗಳಿಂದ ಭಜನೆ, ಹೋಮ, ಮಹಾಪೂಜೆಯ ಜೊತೆಗೆ ಪ್ರಸಾದ ವಿತರಣೆಯನ್ನು ನಡೆಸಲಾಯಿತು. ಅಲ್ಲದೆ ರಾತ್ರಿ ಶಿವನ ದೇವಾಲಯಗಳಲ್ಲಿ ಜಾಗರಣೆಗೆ ಅವಕಾಶ ಕಲ್ಪಿಸಲಾಗಿತ್ತು.

ನಗರದ ವಿನೋಬನಗರದ ಶಂಭುಲಿಂಗೇಶ್ವರ ದೇವಸ್ಥಾನ, ವಿದ್ಯಾನಗರದ ಈಶ್ವರ ದೇವಸ್ಥಾನ, ಕನ್ನಿಕಾಪರಮೇಶ್ವರಿ ರಸ್ತೆಯ ಮಾರ್ಕಂಡೇಶ್ವರ ದೇವಾಲಯ, ರೇಲ್ವೆ ಗೇಟ್ ಬಳಿಯ ಲಿಂಗೇಶ್ವರ ದೇವಾಲಯ, ಮಹಾರಾಜಪೇಟೆಯ ವಿಠಲಮಂದಿರ, ಕೆಟಿಜೆ ನಗರದ ಮಲ್ಲಿಕಾರ್ಜುನ ದೇವಸ್ಥಾನ, ಹೊಂಡದ ವೃತ್ತದ ಬಳಿಯ ಪಾತಾಳೇಶ್ವರ ಸ್ವಾಮಿ, ಹಳೇ ಬೇತೂರು ರಸ್ತೆಯ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ದೇವಾಲಯಗಳಲ್ಲಿ ಬಿಲ್ವಪ್ರಿಯನಾದ ಶಿವನಿಗೆ ಕ್ಷೀರಾಭಿಷೇಕ ಸೇರಿದಂತೆ ವಿಶೇಷ ಹೂವಿನ ಅಲಂಕಾರ ಸಹ ನೆರವೇರಿಸಲಾಗಿತ್ತು. 

ಬರಗಾಲಕ್ಕೆ ಬತ್ತಿದ ಉತ್ಸಾಹ:
ಸತತ ಬರಗಾಲದಿಂದ ತತ್ತರಿಸುವ ಜನತೆಗೆ ಈ ಬಾರಿಯೂ ಮಹಾಶಿವರಾತ್ರಿಯಲ್ಲಿ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದ್ದು ನುಂಗಲಾರದ ತುತ್ತಾಗಿತ್ತು. ಹೂ, ಹಣ್ಣುಗಳ ಬೆಲೆ ದುಪ್ಪಟ್ಟಾಗಿದ್ದರೂ ಸಂಪ್ರದಾಯ ಮಾಡಲೇಬೇಕಾದ್ದರಿಂದ ಅನಿವಾರ್ಯವಾಗಿ ಕಡಿಮೆ ವಸ್ತುಗಳನ್ನು ಜಾಸ್ತಿ ಚೌಕಾಸಿ ಮಾಡಿ ಕೊಂಡುಕೊಳ್ಳುವುದು ಮಾಮೂಲಾಗಿತ್ತು. ಮೊದಲೇ ಬಿಸಿಲ ಬೇಗೆಗೆ ಹಣ್ಣುಗಳ ಬೆಲೆ ಹೆಚ್ಚಿದ್ದು, ಶಿವರಾತ್ರಿಗೆ ಮತ್ತಷ್ಟು ಬೆಲೆ ಏರಿಕೆಯಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News