ದಾವಣಗೆರೆ: ಸವಿತಾ ಮಹಿರ್ಷಿ ಜಯಂತ್ಯೋತ್ಸವ ಕಾರ್ಯಕ್ರಮ

Update: 2018-02-13 16:44 GMT

ದಾವಣಗೆರೆ,ಫೆ.13 : ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಶಿಕ್ಷಿತರನ್ನಾಗಿ ಮಾಡಬೇಕು ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ  ಕಿವಿಮಾತು ಹೇಳಿದರು.  

ಸವಿತಾ ಮಹಿರ್ಷಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸವಿತಾ ಸಮಾಜದ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಾಕಷ್ಟು ಸಹಾಯ ಮಾಡಿದೆ. ಈ ಸಮುದಾಯ ಭವನ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 1 ರೂ ಗೆ ಅಡಿಯಂತೆ ಜಾಗವನ್ನು ನೀಡಲಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷರೂ ನೀಡಿದೆ. ಇದೀಗ ಸಮಾಜ ಬಾಂಧವರ ಬೇಡಿಕೆಯಂತೆ ಭೋಜನಾಲಯ ನಿರ್ಮಾಣಕ್ಕೆ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು. 

ಸವಿತಾ ಮಹರ್ಷಿ ಸಮುದಾಯ ಭವನದಲ್ಲಿ ತಮ್ಮ ವೈಯಕ್ತಿಕ ವೆಚ್ಚದಲ್ಲಿ ಭೋಜನಾಲಯ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ ಅವರು, ಸಮಾಜ ಬಾಂಧವರು ಇಂದು ಮುಂದುವರಿದ ಸಮಾಜಕ್ಕೆ ತಕ್ಕಂತೆ ಆಧುನಿಕವಾಗಿ ಕ್ಷೌರಿಕ ವೃತ್ತಿಯನ್ನು ಮಾಡುತ್ತಿರುವುದು ಸಂತೋಷದ ವಿಚಾರ. ಸಮಾಜದ ಬಾಂಧವರು ಈ ವೃತ್ತಿಯಲ್ಲಿ ಮುಂದುವರಿಯಲು ಸರ್ಕಾರ ಕೂಡ ಸಾಕಷ್ಟು ಸಾಲ, ಸೌಲಭ್ಯಗಳನ್ನು ನೀಡುತ್ತಿದೆ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. 

ಬಿ.ವೀರಣ್ಣ ಮಾತನಾಡಿ, ಸವಿತಾ ಸಮಾಜಕ್ಕೆ ಯಾವ ಪಕ್ಷದವರು ಮತ್ತು ಯಾವ ಸರ್ಕಾರ ಏನು ಮಾಡಿದೆ ಎನ್ನುವುದು ಸಮಾಜ ಬಾಂಧವರಿಗೆ ಗೊತ್ತಿದೆ. ಸದಸ್ಯನಾಗಿದ್ದಾಗ ವಾರ್ಡಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಆದರೆ ಜಿಲ್ಲಾ ಬಿಜೆಪಿ ಅಧ್ಯಕ್ಷರು ಏನು ಮಾಡಿಯೇ ಇಲ್ಲ ಎನ್ನುವಂತೆ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೊಂಡದ ಸರ್ಕಲ್‍ನಲ್ಲಿ ಬಹಿರಂಗ ಚರ್ಚೆಗೆ ಅವರು ಬರಲಿ. ನಮ್ಮ ಅವಧಿಯಲ್ಲಿ ಏನು ಕೆಲಸಗಳು ನಡೆದಿಲ್ಲ ಎನ್ನುವುದನ್ನು ತೋರಿಸಿಕೊಟ್ಟರೆ ರಾಜಕೀಯದಿಂದ ದೂರ ಉಳಿಯುವುದಾಗಿ ಸವಾಲು ಹಾಕಿದರು. 

ಮೇಯರ್ ಅನಿತಾಬಾಯಿ, ಸವಿತಾ ಸಮಾಜದ ಅಧ್ಯಕ್ಷ ಎನ್.ರಂಗಸ್ವಾಮಿ, ಮಾಲತೇಶರಾವ್ ಜಾಧವ್, ದುರ್ಗಾಂಬಿಕಾ ದೇವಸ್ಥಾನ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ, ಕಾಂಗ್ರೆಸ್ ಮುಖಂಡ ಎ.ನಾಗರಾಜ್, ಸಮಾಜ ಸಂಘದ ಜಿಲ್ಲಾಧ್ಯಕ್ಷ ಪಿ.ಹನುಮಂತಪ್ಪ, ಉಪಾಧ್ಯಕ್ಷ ವಿ.ಎಸ್.ಕೇಶವಮೂರ್ತಿ, ಸವಿತಾ ಭಜಂತ್ರಿ ನಾದಬ್ರಹ್ಮ ಕಲಾಸಂಘದ ಅಧ್ಯಕ್ಷ ಜಿ.ಎನ್.ಗೋವಿಂದರಾಜ್, ಸವಿತಾ ಮಹರ್ಷಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪಿ.ಜಿ.ನಾಗರಾಜ್, ಸವಿತಾ ಕ್ರೆಡಿಟ್ ಕೋ ಆಪ್ ಸೊಸೈಟಿ ಉಪಾಧ್ಯಕ್ಷ ಸಿ.ರಾಮಾಂಜನೇಯ, ಗದ್ವಾಲ್ ಶ್ರೀ ಜಮ್ಮುಲಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಜಿ.ಎಸ್.ಪರಶುರಾಮ್, ಸಮಾಜದ ಮುಖಂಡರಾದ ಪಿ.ಧನರಾಜ್,ಬಿ.ವಿ.ಗಂಗಾಧರ್ ಅರಕೇರಿ ಶ್ರೀನಿವಾಸ್, ವೆಂಕಟೇಶ್ ಇತರರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News