ಅನ್ನಭಾಗ್ಯ ಕೇಂದ್ರದ ಯೋಜನೆಯೆಂದು ಹೇಳುತ್ತಿರುವುದು ಹಾಸ್ಯಾಸ್ಪದ: ಡಿ.ಬಸವರಾಜ್

Update: 2018-02-13 16:51 GMT

ದಾವಣಗೆರೆ,ಫೆ.13: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಅನ್ನ ಭಾಗ್ಯ ಯೋಜನೆ ಘೋಷಣೆ ಮಾಡಿ ಜಾರಿ ಮಾಡಿದ್ದಾರೆ. ಆ ಸಮಯದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಆದರೆ ಬಿಜೆಪಿಯವರು ಅನ್ನಭಾಗ್ಯ ಕೇಂದ್ರದ ಯೋಜನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವೆಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಟೀಕಿಸಿದರು. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ ಯೋಜನೆ ದೇಶದಲ್ಲಿ ಅತ್ಯಂತ ಜನಪ್ರಿಯತೆ ಹೊಂದಿದೆ. ಈ ಯೋಜನೆಯನ್ನು ಮುಖ್ಯಮಂತ್ರಿಗಳು ಜಾರಿ ಮಾಡುವ ಸಂದರ್ಭದಲ್ಲಿ ಸದನದ ಒಳಗೆ ಮತ್ತು ಹೊರಗೆ ತೀವ್ರವಾಗಿ ಟೀಕೆ ಮಾಡುತ್ತಿದ್ದ ಬಿಜೆಪಿ ನಾಯಕರು ಇಂದು ಅನ್ನಭಾಗ್ಯ ಯೋಜನೆ ಮೋದಿಯವರ ಯೋಜನೆಯೆಂದು ಹೇಳುತ್ತಿರುವುದು ಖಂಡನೀಯ. ನಗರಕ್ಕೆ ಇತ್ತೀಚೆಗೆ ಆಗಮಿಸಿದ್ದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಸಿದ್ದು ಅನ್ನ ಭಾಗ್ಯವಲ್ಲ, ಮೋದಿ ಅನ್ನಭಾಗ್ಯವೆಂದು ಹೇಳಿಕೆ ನೀಡಿರುವುದು ಸರಿಯಲ್ಲ. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಯಾಗಿ ಒಂದು ವರ್ಷದ ನಂತರ ಕೇಂದ್ರದಲ್ಲಿ ನರೇಂದ್ರ ಮೋದಿ ಬಿಜೆಪಿ ಸರ್ಕಾರ 26ನೇ ಮೇ 2014ಕ್ಕೆ ಅಸ್ಥಿತ್ವಕ್ಕೆ ಬಂದಿದೆ. ಇದು ಕೇಂದ್ರ ಸಚಿವರಿಗೆ ಗೊತ್ತಿದ್ದೂ ಜನರ ಬಳಿ ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಕಿಡಿಕಾರಿದರು.

ಮೋದಿಯವರು ದೇಶದ ಯುವಜನತೆಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಲೋಕಸಭಾ ಚುನಾವಣಾ ಪೂರ್ವ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಇದೀಗ ದೇಶದ ವಿದ್ಯಾರ್ಥಿ, ಯುವಜನರಿಗೆ ಪಕೋಡಭಾಗ್ಯ ನೀಡಿ ಉದ್ಯೋಗ ಮುಕ್ತ ಮಾಡಿದ್ದಾರೆ. ಲೋಕಸಭಾ ಚುನಾವಣಾ ಪೂರ್ವ ನೀಡಿದ ಭರವಸೆಗಳು ಮತ್ತು ಚುನಾವಣಾ ಸಂದರ್ಭದಲ್ಲಿ ಅವರು ಮಾಡಿದ ಭಾಷಣಗಳನ್ನು ಒಮ್ಮೆ ನೋಡಿ ತಿಳಿದುಕೊಂಡರೆ ಬಿಜೆಪಿ ಸರ್ಕಾರ ವಚನ ಭ್ರಷ್ಟ ಸರ್ಕಾರವೆಂಬುದು ಅವರಿಗೆ ತಿಳಿಯುತ್ತದೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನುಡಿದಂತೆ ನಡೆದಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ರೈತರ ಸಾಲಮನ್ನ, ಇಂದಿರಾ ಕ್ಯಾಂಟಿನ್, ಮೈತ್ರಿ, ಮನಸ್ವಿನಿ ಸೇರಿದಂತೆ ನೂರಾರು ಭಾಗ್ಯಗಳನ್ನು ಜನತೆಗೆ ನೀಡಿ ಅತ್ಯಂತ ಜನಪ್ರಿಯ ಸರ್ಕಾರ ನೀಡಿದ್ದು, ಪುನ: ಅಧಿಕಾರಕ್ಕೆ ಕಾಂಗ್ರೆಸ್ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ರಾಜ್ಯದಲ್ಲಿ ನಾಲ್ಕು ದಿನಗಳಿಂದ ಪ್ರವಾಸ ಕೈಗೊಂಡಿದ್ದು, ಭಾರೀ ಜನ ಬೆಂಬಲವನ್ನು ಗಳಿಸಿದ್ದು, ಬಿಜೆಪಿಯವರ ನಿದ್ದೆಗೆಡೆಸಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News