ಸುಂಟಿಕೊಪ್ಪ: ರಸ್ತೆ ಕಾಮಗಾರಿಗೆ ಭೂಮಿ ಪೂಜೆ
ಸುಂಟಿಕೊಪ್ಪ,ಫೆ.13: ಪರಿಶಿಷ್ಟ ಜಾತಿ ಪಂಗಡದವರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ 3 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.
ಇಲ್ಲಿನ ಪಂಪ್‍ಹೌಸ್ ರಸ್ತೆಯ ಅಂಬೇಡ್ಕರ್ ಕಾಲೋನಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಪಂಗಡದವರು ಹೆಚ್ಚಾಗಿ ನೆಲೆಸಿರುವ ಪ್ರದೇಶದಲ್ಲಿ ರಸ್ತೆ, ಒಳಚರಂಡಿ ನಿರ್ಮಿಸಲು ಕೇಂದ್ರ ಸರಕಾರದಿಂದ 1ಕೋಟಿ 10 ಲಕ್ಷ ರೂ. ಹಾಗೂ ರಾಜ್ಯ ಸರಕಾರದಿಂದ 2 ಕೋಟಿ ರೂ ಲಭ್ಯವಾಗಿದೆ. ರಸ್ತೆ ಹಾಗೂ ಚರಂಡಿ ಕಾಮಗಾರಿ ಉತ್ತಮ ಗುಣಮಟ್ಟದಿಂದ ನಿರ್ಮಿಸಬೇಕು. ಈ ಬಗ್ಗೆ ಸ್ಥಳೀಯ ನಾಗರಿಕರು,ಜನಪ್ರತಿ ನಿಧಿಗಳು ಕಾಮಗಾರಿ ನಿರ್ವಹಿಸುವಾಗ ಖುದ್ದು ಪರಿಶೀಲಿಸಬೇಕೆಂದು ಹೇಳಿದರು.
ಕೊಡಗರಹಳ್ಳಿ, ಹೊಸಕೋಟೆ, ಕೆದಕಲ್, ಹಾಲೇರಿ, ಕೂಡ್ಲೂರು, ಚೆಟ್ಟಳ್ಳಿ ಸುಂಟಿಕೊಪ್ಪ,ಶಿರಂಗಾಲ,ತೊರೆನೂರು, ಕೊಡ್ಲಿಪೇಟೆ, ಮುಳ್ಳುಸೋಗೆ, ಗುಡ್ಡೆಹೊಸೂರು, ಕೂಡು ಮಂಗಳೂರು ಈ ವಿಭಾಗದಲ್ಲಿ ಪರಿಶಿಷ್ಟ ಜಾತಿ ಪಂಗಡದವರ ಕಾಲೋನಿಗಳ ರಸ್ತೆ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಲಾಗಿದೆ ಎಂದು ಅವರು ಸುದ್ಧಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಬಿ.ಕೆ.ಪ್ರಶಾಂತ್, ನಾಗೇಶ್ ಪೂಜಾರಿ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಬಿ.ಐ.ಭವಾನಿ, ಮಾಜಿ ಉಪಾಧ್ಯಕ್ಷರಾದ ಬಿ.ಕೆ.ಮೋಹನ,ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಪೀಟರ್ ಮತ್ತಿತರರಿದ್ದರು.