ಪ್ರತಿಭೆ ಅನಾವರಣಗೊಳ್ಳಲು ಕಲೆ ಸಂಸ್ಕೃತಿ ಮುಖ್ಯ: ಡಾ. ಹರೀಶ್‍ಕುಮಾರ್
ಚಾಮರಾಜನಗರ,ಫೆ.13: ಉಸಿರಾಡುವುದಕ್ಕೆ ಗಾಳಿ ಎಷ್ಟು ಮುಖ್ಯವೊ ಪ್ರತಿಭೆ ಅನಾವರಣ ಗೊಳ್ಳಲು ಕಲೆ ಸಂಸ್ಕೃತಿ ಅಷ್ಟೇ ಮುಖ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಹರೀಶ್‍ಕುಮಾರ್ ತಿಳಿಸಿದರು.
ಕನ್ನಡ ಸಂಸ್ಕೃತಿ ನಿರ್ದೇಶನಾಲಯ, ಮೈಸೂರು ರಂಗಾಯಣ, ಚಾಮರಾಜನಗರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆಸಿದ ಕಾಲೇಜು ರಂಗೋತ್ಸವ 2017-18 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಕಲೆ ಮತ್ತು ಸಂಸ್ಕೃತಿ ಮನಸ್ಸಿಗೆ ನೆಮ್ಮದಿ, ಆನಂದ ದೊರೆಕಿಸುವ ಬಹು ಮುಖ್ಯ ಸಾಧನ. ಸಾಹಿತ್ಯ, ಸಂಗೀತ, ನಾಟಕ, ಜಾನಪದ ಇತ್ಯಾದಿ ಕ್ಷೇತ್ರಗಳಲ್ಲಿ ನಿಸ್ವಾರ್ಥ ಮನೋಭಾವದಿಂದ ತೊಡಗಿಸಿಕೊಳ್ಳಬೇಕು. ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಕಲೆಯನ್ನು ಬೆಳೆಸಬೇಕು. ಹಿಂದೆ ಕಲೆಯ ಉಳಿವಿಗೆ ರಾಜಮಹಾರಾಜರು ಮತ್ತು ಈಗ ಪ್ರಜಾಪ್ರಭುತ್ವದ ಸರ್ಕಾರಗಳು ಸಹಾಯಧನ ನೀಡುತ್ತಾ ಪ್ರೋತ್ಸಾಯಿಸುತ್ತಿದೆ. ಪ್ರತಿಯೊಬ್ಬರು ಇದರ ಪ್ರಯೋಜನ ಪಡೆದು ಕೊಳ್ಳಬೇಕು. ವಿವಿಧ ಕಲೆಗಳ ಅಭ್ಯಾಸ ಮತ್ತು ಪ್ರದರ್ಶನಕ್ಕೆ ಮುಂದಾಗಬೇಕು ಎಂದರು.
ಕರ್ನಾಟಕ ಜಾನಪದ ಆಕಾಡೆಮಿ ಸದಸ್ಯ ಹಾಗೂ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಡಾ. ವೆಂಕಟೇಶಇಂದ್ವಾಡಿ ಮಾತನಾಡಿ, ನಾಟಕ ಕಲಾಪ್ರಕಾರ ನಶಿಸಿ ಹೋಗುತ್ತಿದೆ ಎಂಬುದು ಕೆಲವರ ಅಭಿಪ್ರಾಯ. ಅದರೆ ಸ್ಪಷ್ಟ ಅಭಿಪ್ರಾಯವೆಂದರೆ ರಂಗಭೂಮಿ ನಶಿಸದೆ ಬೇರೊಂದು ರೀತಿಯಲ್ಲಿ ಚಲನ ಶೀಲತೆ ಕಾಪಾಡಿಕೊಳ್ಳುವ ಪ್ರಕಾರವಾಗಿದೆ. ಪ್ರಾಚೀನ ಕಾಲದಿಂದಲು ರಂಗಭೂಮಿ ಅಸ್ಥಿತ್ವದಲ್ಲಿದೆ. ಮುಂದೆಯು ಹೊಸಹೊಸ ಸನ್ನಿವೇಶಕ್ಕೆ ಹೊಂದಿಕೊಂಡು ಮುನ್ನಡೆಯುತ್ತದೆ. ಚಿಂದೋಡಿಲೀಲಾ ಡ್ರಾಮ ಕಂಪನಿ ಅಭಿನಯಿಸಿದ ಪೊಲೀಸನ ಮಗಳು ನಾಟಕ 3000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದು, ಈ ನಾಟಕವನ್ನು ರಚಿಸಿದವರು ಚಾಮರಾಜನಗರ ಜಿಲ್ಲೆಯ ನಾಗವಳ್ಳಿ ದೇವಯ್ಯ ನರಸಿಂಹಮೂರ್ತಿ ಎಂಬುದು ಹೆಮ್ಮೆಯ ಸಂಗತಿ. ರಂಗಮಂದಿರದ ವ್ಯವಸ್ಥೆ ಇಲ್ಲದಿದ್ದರೂ ಇಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಜಕ್ಕೂ ಪ್ರಶಂಸನಾರ್ಹ ಎಂದರು.
ಕಾರ್ಯಕ್ರವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ರಾಮಚಂದ್ರು ಮಾತನಾಡಿ, ಕಲೆ ಸಂಸ್ಕರತಿ ಪ್ರತಿಭಾವಂತರ ಸೊತ್ತು. ಜಿಲ್ಲೆಯಲ್ಲಿ ಇರುವ ಕಲಾವಿದರು ಜಿಲ್ಲೆಯ ಜಾನಪದ ವೈಭವವನ್ನು ಎಲ್ಲೆಡೆ ಪ್ರದರ್ಶಿಸುತ್ತ ಜಿಲ್ಲೆಯ ಗೌರವವನ್ನು ಎತ್ತಿ ಹಿಡಿಯುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಹೊನ್ನನಾಯಕ, ಕಾಲೇಜು ರಂಗೋತ್ಸವ ಸಂಚಾಲಕ ಸೋಮಶೇಖರ ಬಿಸಲ್ವಾಡಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹದೇವಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಾಟಕ ತೀರ್ಪುಗಾರರಾಗಿ ಕೃಷ್ಣಜನಮನ, ತಲಕಾಡು ಗುರುರಾಜು ಹಾಗೂ ಜಾನಪದ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಕಿರಾಳು ಮಹೇಶ, ದೇವಾನಂದ ವರಪ್ರಸಾದ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಲೆ ನಟರಾಜು, ರಂಗಜಂಗಮ ಮಹೇಶ್, ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಉಪಸ್ಥಿತರಿದ್ದರು.